పరిశుద్ధ గ్రంథము
ಹಳೆಯ ಒಡಂಬಡಿಕೆ
2 ಅರಸುಗಳು
13ನೇ ಅಧ್ಯಾಯ
- Verse 1: ಜುದೇಯದ ಅರಸನೂ ಅಹಜ್ಯನ ಮಗನೂ ಆದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು, ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹದಿನೇಳು ವರ್ಷ ಆಳಿದನು.
- Verse 2: ಅವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ದುರ್ಮಾರ್ಗವನ್ನು ಕೈಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
- Verse 3: ಆದುದರಿಂದ ಸರ್ವೇಶ್ವರಸ್ವಾಮಿ ಇಸ್ರಯೇಲರ ಮೇಲೆ ಕೋಪಗೊಂಡು, ಅವರನ್ನು ಸಿರಿಯಾದವರ ಅರಸನಾದ ಹಜಾಯೇಲನ ಕೈಗೂ ಅವನ ಮಗನಾದ ಬೆನ್ಹದದನ ಕೈಗೂ ಒಪ್ಪಿಸಿದರು. ಇಸ್ರಯೇಲರು ಯೆಹೋವಾಹಾಜನ ಜೀವಮಾನದಲ್ಲೆಲ್ಲಾ ಸಿರಿಯಾದವರ ಕೈಕೆಳಗಿದ್ದರು.
- Verse 4: ಯೆಹೋವಾಹಾಜನು ಸರ್ವೇಶ್ವರನಿಗೆ ಮೊರೆ ಇಟ್ಟನು. ಅವರು ಅವನ ಮೊರೆಗೆ ಓಗೊಟ್ಟು, ಸಿರಿಯಾದವರ ಅರಸನಿಂದ ಬಹಳವಾಗಿ ಶೋಷಿತರಾದ ಇಸ್ರಯೇಲರ ಮೇಲೆ ಕಟಾಕ್ಷವಿಟ್ಟು, ಅವರಿಗೆ ಒಬ್ಬ ವಿಮೋಚಕನನ್ನು ಅನುಗ್ರಹಿಸಿದರು.
- Verse 5: ಅವನ ಮುಖಾಂತರವಾಗಿ ಅವರು ಸಿರಿಯಾದವರ ಕೈಯಿಂದ ಬಿಡುಗಡೆಯಾಗಿ, ಮುಂದಿನಂತೆ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತರಾಗಿ ವಾಸಿಸುವವರಾದರು.
- Verse 6: ಆದರೂ ಅವರು ತಮ್ಮನ್ನು ಪಾಪಕ್ಕೆ ಪ್ರೇರಿಸಿದ ಯಾರೊಬ್ಬಾಮನ ಮನೆಯವರ ದುರ್ಮಾರ್ಗದಲ್ಲಿ ನಡೆದರು. ಅದನ್ನು ಬಿಡಲೇ ಇಲ್ಲ. ಸಮಾರಿಯದಲ್ಲಿ ಅಶೇರ ವಿಗ್ರಹಸ್ಥಂಭವು ಇನ್ನೂ ಉಳಿದಿತ್ತು.
- Verse 7: ಯೆಹೋವಾಹಾಜನಿಗೆ ಐವತ್ತುಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದಿದ್ದರು. ಸಿರಿಯಾದವರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ, ಕಣದ ಧೂಳಿಪಟದಂತೆ ಮಾಡಿಬಿಟ್ಟನು.
- Verse 8: ಯೆಹೋವಾಹಾಜನ ಉಳಿದ ಚರಿತ್ರೆ ಹಾಗು ಅವನ ಶೂರಕೃತ್ಯಗಳ ವಿವರ ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
- Verse 9: ಅವನು ನಿಧನನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರಿಯದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಯೋವಾಷನು ಅರಸನಾದನು.
- Verse 10: ಜುದೇಯದ ಅರಸನಾದ ಯೆಹೋವಾಷಾನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಹದಿನಾರು ವರ್ಷ ಆಳಿದನು.
- Verse 11: ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
- Verse 12: ಇವನ ಉಳಿದ ಚರಿತ್ರೆ, ಶೂರಕೃತ್ಯಗಳ ಹಾಗು ಇವನು ಯೆಹೂದ್ಯರ ಅರಸನಾದ ಅಮಚ್ಯನು ಎಂಬವನೊಡನೆ ನಡೆಸಿದ ಯುದ್ಧದ ವಿವರವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
- Verse 13: ಇವನು ನಿಧನನಾಗಿ ಪಿತೃಗಳ ಬಳಿ ಸೇರಲು ಇವನ ಶವವನ್ನು ಸಮಾರಿಯದೊಳಗೆ ಇಸ್ರಯೇಲ್ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು. ಇವನ ತರುವಾಯ ಯಾರೊಬ್ಬಾಮನು ಸಿಂಹಾಸನವನ್ನೇರಿದನು.
- Verse 14: ಎಲೀಷನು ಮಾರಕರೋಗದಿಂದ ನರಳುತ್ತಿದ್ದನು. ಇಸ್ರಯೇಲರ ಅರಸ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ, “ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥಾರಥಾಶ್ವಬಲಗಳಾಗಿ ಇದ್ದವರೇ,” ಎಂದು ಗೋಳಿಡುತ್ತಾ ಅಧೋಮುಖನಾಗಿ ಬಿದ್ದು ಅತ್ತು ಪ್ರಲಾಪಿಸಿದನು.
- Verse 15: ಆಗ ಎಲೀಷನು ಇಸ್ರಯೇಲರ ಅರಸನಿಗೆ, “ಬಿಲ್ಲನ್ನೂ ಬಾಣಗಳನ್ನೂ ತರಿಸಿ,” ಎಂದು ಹೇಳಿದನು; ಅವನು ತರಿಸಿದನು.
- Verse 16: ಆಗ, “ಬಿಲ್ಲನ್ನು ಹಿಡಿದುಕೋ,” ಎಂದು ಆಜ್ಞಾಪಿಸಿದನು. ಅವನು ಹಿಡಿದುಕೊಳ್ಳಲು ತನ್ನ ಕೈಯನ್ನು ಅವನ ಕೈ ಮೇಲೆ ಇಟ್ಟು,
- Verse 17: “ಪೂರ್ವದಿಕ್ಕಿಗಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಅನಂತರ, “ಬಾಣವನ್ನೆಸೆ,” ಎಂದು ಆಜ್ಞಾಪಿಸಿದನು. ಅವನು ಎಸೆಯಲು, “ಇದು ಜಯಪ್ರದವಾದ ಸರ್ವೇಶ್ವರನ ಬಾಣ; ಸಿರಿಯಾದವರನ್ನು ಜಯಿಸುವ ಬಾಣ. ಆ ಸಿರಿಯಾದವರನ್ನು ನೀನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವೆ,” ಎಂದು ಹೇಳಿದನು.
- Verse 18: ಇದಲ್ಲದೆ, ಎಲೀಷನು ಇಸ್ರಯೇಲರ ಅರಸನಿಗೆ, “ಬಾಣಗಳನ್ನು ತೆಗೆದುಕೋ,” ಎಂದು ಆಜ್ಞಾಪಿಸಿದಾಗ ಅವನು ತೆಗೆದುಕೊಳ್ಳಲು, “ಇವುಗಳಿಂದ ನೆಲವನ್ನು ಸೀಳು,” ಎಂದನು. ಅವನು ಮೂರು ಸಾರಿ ಬಾಣಬಿಟ್ಟು ಸುಮ್ಮನೆ ನಿಂತನು.
- Verse 19: ಆಗ ದೈವಪುರುಷನು ಅವನ ಮೇಲೆ ಸಿಟ್ಟುಗೊಂಡು, “ನೀನು ಐದಾರು ಸಾರಿ ಬಾಣಬಿಡಬೇಕಾಗಿತ್ತು. ಹಾಗೆ ಮಾಡಿದ್ದರೆ ಸಿರಿಯಾದವರು ನಿರ್ನಾಮವಾಗಿ ಹೋಗುವವರೆಗೂ ಅವರ ಮೇಲೆ ನಿನಗೆ ಜಯ ದೊರಕುತ್ತಿತ್ತು. ನೀನು ಮೂರು ಸಾರಿ ಮಾತ್ರ ಬಾಣಬಿಟ್ಟದ್ದರಿಂದ ಅವರನ್ನು ಮೂರು ಸಾರಿ ಮಾತ್ರ ಸೋಲಿಸುವೆ,” ಎಂದು ಹೇಳಿದನು.
- Verse 20: ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು. ಮೋವಾಬ್ಯರು ಪ್ರತಿವರ್ಷದ ಪ್ರಾರಂಭದಲ್ಲಿ ಸುಲಿಗೆಮಾಡುವುದಕ್ಕಾಗಿ ಗುಂಪುಗುಂಪಾಗಿ ಬರುತ್ತಿದ್ದರು.
- Verse 21: ಒಂದು ದಿನ, ಜನರು ಒಬ್ಬ ಸತ್ತವನನ್ನು ಸಮಾಧಿ ಮಾಡುವುದಕ್ಕೆ ಹೋದಾಗ, ಮೋವಾಬ್ಯರ ಗುಂಪು ಬರುತ್ತಿರುವುದನ್ನು ಕಂಡು, ಶವವನ್ನು ಎಲೀಷನ ಸಮಾಧಿಯಲ್ಲೆ ಬಿಸಾಡಿ ಓಡಿಹೋದರು. ಸತ್ತ ವ್ಯಕ್ತಿಯ ಶವ ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ, ಆ ವ್ಯಕ್ತಿ ಉಜ್ಜೀವಿಸಿ ಎದ್ದುನಿಂತನು.
- Verse 22: ಸಿರಿಯಾದವರ ಅರಸನಾದ ಹಜಾಯೇಲನು ಯೆಹೋವಾಹಾಜನ ಆಳ್ವಿಕೆಯಲ್ಲೆಲ್ಲಾ ಇಸ್ರಯೇಲರನ್ನು ಪೀಡಿಸುತ್ತಿದ್ದನು.
- Verse 23: ಆದರೂ ಸರ್ವೇಶ್ವರ ಅವರನ್ನು ಸಂಪೂರ್ಣವಾಗಿ ಹಾಳುಮಾಡಗೊಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತಮ್ಮ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾವು ಅಬ್ರಹಾಮ್, ಇಸಾಕ್, ಯಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿ, ಅವರಿಗೆ ದಯೆತೋರಿಸಿದರು; ಕರುಳುಕರಗಿದವರಾಗಿ ಅವರಿಗೆ ಪ್ರಸನ್ನರಾದರು.
- Verse 24: ಸಿರಿಯಾದವರ ಅರಸನಾದ ಹಜಾಯೇಲನು ಮರಣಹೊಂದಲು ಅವನಿಗೆ ಬದಲಾಗಿ ಅವನ ಮಗ ಬೆನ್ಹದದನು ಅರಸನಾದನು.
- Verse 25: ಯೆಹೋವಾಹಾಜನ ಮಗ ಯೋವಾಷನು, ತನ್ನ ತಂದೆಯ ಕಾಲದಲ್ಲಿ ಹಜಾಯೇಲನು ಯುದ್ಧಮಾಡಿ ಕಿತ್ತುಕೊಂಡಿದ್ದ ಪಟ್ಟಣಗಳನ್ನು, ಬೆನ್ಹದದನಿಂದ ತಿರುಗಿ ತೆಗೆದುಕೊಂಡನು. ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಯೇಲರ ಎಲ್ಲಾ ಪಟ್ಟಣಗಳನ್ನು ಹಿಂದಕ್ಕೆ ಪಡೆದನು.