ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
18ನೇ ಅಧ್ಯಾಯ
- Verse 1: ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಅವರಿಂದ ಗತ್ ಪಟ್ಟಣವನ್ನೂ ಅದರ ಗ್ರಾಮಗಳನ್ನೂ ವಶಪಡಿಸಿಕೊಂಡನು.
- Verse 2: ಆಮೇಲೆ ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ಅಧೀನರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
- Verse 3: ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜೆರನನ್ನು ದಾವೀದನು ಹಮಾತಿನ ಬಳಿಯಲ್ಲಿ ಪರಾಭವಗೊಳಿಸಿದನು.
- Verse 4: ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದನು; ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.
- Verse 5: ದಮಸ್ಕದ ಸಿರಿಯಾದವರು ಚೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆಬಡಿದನು;
- Verse 6: ಇದಲ್ಲದೆ ಅವನು ದಮಸ್ಕದ ಸಿರಿಯಾ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯ ದೊರಕುತ್ತಿತ್ತು.
- Verse 7: ದಾವೀದನು ಹದರೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರುಸಲೇಮಿಗೆ ಒಯ್ದನು.
- Verse 8: ಇದಲ್ಲದೆ, ಹದರೆಜೆರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಹೇರಳ ತಾಮ್ರವನ್ನು ತೆಗೆದುಕೊಂಡು ಬಂದನು. ಸೊಲೊಮೋನನು ‘ಕಂಚಿನ ಕಡಲೆಂಬ ಪಾತ್ರೆ’ಯನ್ನೂ ಕಂಬಗಳನ್ನೂ ಇನ್ನಿತರ ಸಾಮಾನುಗಳನ್ನೂ ಮಾಡಿಸಿದ್ದು ಆ ತಾಮ್ರದಿಂದಲೇ.
- Verse 9: ದಾವೀದನು ಚೋಬನ ಅರಸನಾದ ಹದರೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನ ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
- Verse 10: (ತೋವಿಗೂ ಹದರೆಜೆರನಿಗೂ ವಿರೋಧವಿತ್ತು). ದಾವೀದನು ಹದರೆಜೆರನ ಮೇಲೆ ದಾಳಿಮಾಡಿ ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ಅಭಿನಂದಿಸುವುದಕ್ಕಾಗಿ ಹಾಗು ಹರಸುವುದಕ್ಕಾಗಿ ತನ್ನ ಮಗ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೆ ವಿಧವಿಧವಾದ ತಾಮ್ರ, ಬೆಳ್ಳಿ ಹಾಗು ಬಂಗಾರದ ಪಾತ್ರೆಗಳನ್ನು ತಂದನು.
- Verse 11: ಅರಸ ದಾವೀದನು ಕಾಣಿಕೆಗಳನ್ನು ಮಾತ್ರವಲ್ಲದೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಹಾಗು ಅಮಾಲೇಕ್ಯರು ಎಂಬ ಸುತ್ತಮುತ್ತಿನ ಜನಾಂಗಗಳಿಂದ ಕಿತ್ತುಕೊಂಡ ಬೆಳ್ಳಿಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.
- Verse 12: ಇದಲ್ಲದೆ ಚೆರೂಯಳ ಮಗ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿದನು.
- Verse 13: ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದ್ದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು.
- Verse 14: ದಾವೀದನು ಇಸ್ರಯೇಲರ ಅರಸನಾಗಿ ಪ್ರಜೆಗಳೆಲ್ಲರನ್ನು ಧರ್ಮಾನುಸಾರ, ನ್ಯಾಯಯುತವಾಗಿ ನಡೆಸುತ್ತಿದ್ದನು.
- Verse 15: ಚೆರೂಯಳ ಮಗ ಯೋವಾಬನು ಅವನ ಸೇನಾಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿಯಾಗಿದ್ದನು.
- Verse 16: ಅಹೀಟೂಬನ ಮಗ ಚಾದೋಕನು ಹಾಗು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು; ಶವ್ಷನು ಅವನಿಗೆ ಲೇಖಕನಾಗಿದ್ದನು.
- Verse 17: ಯೆಹೋಯಾದಾವನ ಮಗ ಬಿನಾಯನು ‘ಕೆರೇತ್ಯ’, ‘ಪೆಲೇತ್ಯ’ ಎಂಬ ಕಾವಲುದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.