ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
17ನೇ ಅಧ್ಯಾಯ
- Verse 1: “ನನಗೆ ಉಸಿರು ಕಟ್ಟುತ್ತಿದೆ ನನ್ನ ದಿನಗಳು ಮುಗಿದಿವೆ ಸಮಾಧಿ ನನಗಾಗಿ ಕಾದಿದೆ.
- Verse 2: ಚೇಷ್ಟೆಗಾರರಿದ್ದಾರೆ ನನ್ನ ಸುತ್ತಮುತ್ತ ನನ್ನ ಕಣ್ಮುಂದಿದೆ ಸದಾ ಅವರ ಕೆಣಕಾಟ.
- Verse 3: ಓ ದೇವರೇ, ನೀನೆ ನನಗೆ ಈಡು ಕೊಡುವವನು ನಿನ್ನನ್ನು ಬಿಟ್ಟರೆ ನನಗಿಲ್ಲ ಒಪ್ಪಂದಮಾಡುವವರಾರು.
- Verse 4: ಜ್ಞಾನ ಪ್ರವೇಶಿಸದಂತೆ ನೀ ಅವರ ಮನಸ್ಸನು ಮುಚ್ಚಿರುವೆ ಹೀಗೆ ಅವರು ಜಯಶೀಲರಾಗದಂತೆ ತಡೆದಿರುವೆ.
- Verse 5: ಯಾವನು ಸ್ವಾರ್ಥಕ್ಕಾಗಿ ಮಿತ್ರನ ಮೇಲೆ ಹೊರಿಸುತ್ತಾನೋ ದೂರು ಅಂಥವನ ಮಕ್ಕಳ ಕಣ್ಣುಗಳು ಮಂಕಾಗಿಹೋಗದಿರವು.
- Verse 6: ದೇವರು ನನ್ನನು ಈಡಾಗಿಸಿದ್ದಾನೆ ಅನ್ಯರ ಕಟ್ಟುಗಾದೆಗೆ ನನ್ನ ಮುಖ ಗುರಿಯಾಗಿದೆ ಜನರ ಉಗುಳಾಟಕ್ಕೆ.
- Verse 7: ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ ಅಂಗಗಳೆಲ್ಲ ನೆರಳಂತೆ ನಿಸ್ಸಾರವಾಗಿವೆ.
- Verse 8: ಇದನ್ನು ಕಂಡು ಸಜ್ಜನರು ನಿಬ್ಬೆರಗಾಗಿದ್ದಾರೆ ದುರ್ಜನರ ಬಗ್ಗೆ ನಿರಪರಾಧಿ ಎಚ್ಚರಗೊಂಡಿದ್ದಾನೆ.
- Verse 9: ಸನ್ಮಾರ್ಗದಲ್ಲಿ ಮುಂದುವರೆವವನು ಸಜ್ಜನನು ಬಲಗೊಳ್ಳುತ್ತಲೇ ಇರುವನು ಶುದ್ಧಹಸ್ತನು.
- Verse 10: ನೀವೆಲ್ಲರೂ ಮತ್ತೆ ಬನ್ನಿ ವಾದಕ್ಕೆ ನಿಮ್ಮಲ್ಲಿ ಜ್ಞಾನಿಯೊಬ್ಬನನ್ನೂ ನಾ ಕಾಣೆ.
- Verse 11: ಮುಗಿದುಹೋದವು ನನ್ನ ದಿನಗಳು ಭಂಗವಾದವು ನನ್ನ ಗುರಿಧ್ಯೇಯಗಳು.
- Verse 12: ಇರುಳನ್ನು ಹಗಲೆಂದು ಸಾಧಿಸುತ್ತಿರುವರು ಕತ್ತಲಿಂದಲೇ ಬೆಳಕು ಬೇಗ ಬರಲಿದೆ ಎನ್ನುತ್ತಿರುವರು.
- Verse 13: ಪಾತಾಳವನ್ನೇ ನನ್ನ ಮನೆಯೆಂದು ನಾನು ಭಾವಿಸಿದೆನಾದರೆ ಕತ್ತಲಲ್ಲೇ ನನ್ನ ಹಾಸಿಗೆಯನ್ನು ಹಾಕಿಕೊಂಡೆನಾದರೆ,
- Verse 14: ಸಮಾಧಿಯನ್ನೇ ‘ನನ್ನ ತಂದೆ’ ಎಂದು ಕರೆದೆನಾದರೆ ಹುಳುವನ್ನೇ ‘ನನ್ನ ತಾಯಿ, ನನ್ನ ತಂಗಿ’ ಎಂದೆನಾದರೆ.
- Verse 15: ನನ್ನ ನಂಬಿಕೆ-ನಿರೀಕ್ಷೆ ಎಲ್ಲಿಯದು? ನನ್ನ ಭಾಗ್ಯವನ್ನು ಯಾರು ನೋಡಿಯಾರು?
- Verse 16: ಇವು ನನ್ನ ಸಂಗಡ ಪಾತಾಳಕ್ಕೆ ಬರಲಾದೀತೆ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”