ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
28ನೇ ಅಧ್ಯಾಯ
- Verse 1: “ಬೆಳ್ಳಿ ಸಿಕ್ಕುವ ಗಣಿಯುಂಟು ಚಿನ್ನದ ಅದುರು ದೊರಕುವ ಎಡೆಯುಂಟು.
- Verse 2: ಕಬ್ಬಿಣವನ್ನು ತೆಗೆಯುತ್ತಾರೆ ಮಣ್ಣಿನಿಂದ ತಾಮ್ರವನ್ನು ಕಡೆಯುತ್ತಾರೆ ಕಲ್ಲನ್ನು ಕರಗಿಸುತಾ.
- Verse 3: ಮಾನವರು ಹೊರದೂಡುತ್ತಾರೆ ಕತ್ತಲನು ಕತ್ತಲು-ಕಾರ್ಗತ್ತಲಲ್ಲೂ ಹುಡುಕುತ್ತಾರೆ ಲೋಹಗಳನು. ತೋಡುತ್ತಿರುತ್ತಾರೆ ಅವು ದೊರಕುವವರೆಗು.
- Verse 4: ಗಣಿಯನ್ನು ತೋಡಿತೋಡಿ ಜನನಿವಾಸಿಗಳಿಗೆ ದೂರವಾಗಿ ಮೇಲ್ಗಡೆ ನಡೆದಾಡುವವರನ್ನು ಮರೆತುಹೋಗಿ ಅತ್ತಿತ್ತ ಅಲೆದಾಡುತ್ತಾರೆ ನರಲೋಕಕ್ಕೆ ಅನ್ಯರಾಗಿ.
- Verse 5: ಭೂಮಿ ಕೊಡುತ್ತದೆ ಆಹಾರವನು ಬೆಂಕಿಬಿದ್ದಂತೆ ಪಾಳಾಗಿರುತ್ತದೆ ಅದರ ಅಡಿಭಾಗವು.
- Verse 6: ನೀಲಿರತ್ನಗಳು ಸಿಗುತ್ತವೆ ಭುವಿಯ ಕಲ್ಲುಗಳಲಿ ಚಿನ್ನಚಿಗುರು ದೊರಕುತ್ತದೆ ಅದರ ಧೂಳಿನಲಿ.
- Verse 7: ಆ ದಾರಿ ತಿಳಿಯದು ಯಾವ ಹದ್ದಿಗೂ ಅದು ಬಿದ್ದಿಲ್ಲ ಯಾವ ಗಿಡುಗದ ಕಣ್ಣಿಗೂ.
- Verse 8: ಕಾಡುಮೃಗಗಳು ಅದನ್ನು ತುಳಿದಿಲ್ಲ ಸಿಂಹವು ಆ ಮಾರ್ಗದಲ್ಲಿ ಸುಳಿದಿಲ್ಲ.
- Verse 9: ಮಾನವನು ಕೈಮಾಡುತ್ತಾನೆ ಬಂಡೆಗಳ ಮೇಲೆ ಬೆಟ್ಟಗಳನ್ನು ಕೆಡವಿಬಿಡುತ್ತಾನೆ ಬುಡಮಟ್ಟಕೆ.
- Verse 10: ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ.
- Verse 11: ಕಂಡುಹಿಡಿಯುತ್ತಾನೆ ನದಿಗಳ ಮೂಲಗಳನು ಬೆಳಕಿಗೆ ತರುತ್ತಾನೆ ಮರೆಯಾಗಿದ್ದ ವಸ್ತುಗಳನು.
- Verse 12: ಆದರೆ ಸುಜ್ಞಾನ ಸಿಕ್ಕುವುದೆಲ್ಲಿ? ವಿವೇಕ ವಾಸಮಾಡುವುದೆಲ್ಲಿ?
- Verse 13: ಸುಜ್ಞಾನದ ಕ್ರಯ ಯಾರಿಗೂ ಗೊತ್ತಿಲ್ಲ ಜೀವಿತರಲ್ಲಿ ಅದನ್ನು ಕಂಡವರಿಲ್ಲ.
- Verse 14: ‘ಅದು ನನ್ನಲ್ಲಿಲ್ಲ’ ಎನ್ನುತ್ತದೆ ಪಾತಾಳ ‘ನನ್ನ ಬಳಿಯಲ್ಲಿಲ್ಲ’ ಎನ್ನುತ್ತದೆ ಸಮುದ್ರ.
- Verse 15: ಚೊಕ್ಕ ಬಂಗಾರಕೊಟ್ಟು ಅದನು ಕೊಂಡುಕೊಳ್ಳಲಾಗದು ಅದರ ಬೆಲೆಗೆ ಬೆಳ್ಳಿಯನು ತೂಕಮಾಡಲಾಗದು.
- Verse 16: ಓಫೀರ್ ದೇಶದ ಅಪರಂಜಿಯಿಂದಲೂ ಅಮೂಲ್ಯ ಗೋಮೇಧಿಕ-ಇಂದ್ರನೀಲದಿಂದಲೂ ಸುಜ್ಞಾನದ ಮೌಲ್ಯವನ್ನು ಗೊತ್ತುಮಾಡಲಾಗದು.
- Verse 17: ಹೊನ್ನಾಗಲಿ, ಗಾಜಾಗಲಿ ಅದಕ್ಕೆ ಸಮವಾದೀತೆ? ಚಿನ್ನಾಭರಣಗಳನ್ನು ಅದಕ್ಕೆ ಅದಲುಬದಲು ಮಾಡಿಕೊಡಲಾದೀತೆ?
- Verse 18: ಸುಜ್ಞಾನವಿರುವಲ್ಲಿ ಹವಳ-ಸ್ಫಟಿಕಗಳು ನೆನಪಿಗೆ ಬಾರವು ಮಾಣಿಕ್ಯಗಳ ಸಂಪಾದನೆಗಿಂತ ಅದರ ಸಂಪಾದನೆ ಶ್ರೇಷ್ಠವು.
- Verse 19: ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಲ್ಲ ಶುದ್ಧ ಕನಕದೊಡನೆ ಅದನು ತೂಕಮಾಡಲಾಗುವುದಿಲ್ಲ.
- Verse 20: ಇಂತಿರಲು ಸುಜ್ಞಾನ ಬರುವುದು ಎಲ್ಲಿಂದ? ವಿವೇಕ ದೊರಕುವುದು ಯಾವ ಸ್ಥಳದಿಂದ?
- Verse 21: ಅದು ಎಲ್ಲ ಜೀವಿಗಳ ಕಣ್ಣಿಗೆ ಅಗೋಚರ ಆಕಾಶದ ಪಕ್ಷಿಗಳಿಗೂ ಅದು ಅಪರಿಚಿತ.
- Verse 22: ‘ನಮ್ಮ ಕಿವಿಗೆ ಬಿದ್ದಿದೆ ಅದರ ಸುದ್ದಿ ಮಾತ್ರ’ ಎನ್ನುತ್ತವೆ ಅಧೋಲೋಕ ಹಾಗು ಮೃತ್ಯುಲೋಕ.
- Verse 23: ಸುಜ್ಞಾನದ ಮಾರ್ಗ ಬಲ್ಲವನು ದೇವರೇ ಅದರ ಸ್ಥಳಗೊತ್ತಿದೆ ಆತನೊಬ್ಬನಿಗೆ.
- Verse 24: ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಬಲ್ಲವನು ದೇವರೇ ಆಕಾಶದ ಕೆಳಗಿನ ಸಮಸ್ತವನು ನೋಡಬಲ್ಲವನು ಆತನೊಬ್ಬನೇ!
- Verse 25: ಗಾಳಿಗೆ ತಕ್ಕ ವೇಗವನು ನೇಮಿಸಿದಾಗ ಜಲಕ್ಕೆ ತಕ್ಕ ಜಾಗವನು ನಿರ್ಣಯಿಸಿದಾಗ,
- Verse 26: ಮಳೆಗೆ ಕಟ್ಟಳೆಯನು ವಿಧಿಸಿದಾಗ ಗುಡುಗು ಮಿಂಚಿಗೆ ಮಾರ್ಗವನ್ನೇರ್ಪಡಿಸಿದಾಗ,
- Verse 27: ದೇವರು ಆ ಜ್ಞಾನವನು ಕಂಡು ಪರಿಗಣಿಸಿದನು ಅದನು ಪರಿಶೋಧಿಸಿ ಪ್ರತಿಷ್ಠಾಪಿಸಿದನು.
- Verse 28: ಬಳಿಕ ಮಾನವನಿಗೆ ಇಂತೆಂದನು: ‘ಸರ್ವೇಶ್ವರನಲ್ಲಿ ಭಯಭಕ್ತಿ ಇಡುವುದೇ ಸುಜ್ಞಾನ ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ’.”