ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
28ನೇ ಅಧ್ಯಾಯ
- Verse 1: ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II
- Verse 2: ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II
- Verse 3: ದುರುಳರೊಡನೆ ದೂಡಬೇಡ, ದುರ್ಜನರೊಡನೆ ವಿಸರ್ಜಿಸಬೇಡೆನ್ನನು I ಪರರಿಗವರು ನುಡಿವರು ಶಾಂತಿಯನು ಉದರದಲ್ಲಿಡುವರು ಕ್ರೋಧವನು II
- Verse 4: ಕೇಡಿಗರು ಪರರಿಗೆ ಮಾಡಿದುದ ತಾವೇ ಉಣ್ಣಮಾಡು I ಅವರ ದುಷ್ಟಕಾರ್ಯಗಳಿಗೆ ತಕ್ಕುದಾದ ಶಿಕ್ಷೆ ನೀಡು II
- Verse 5: ಅರಿಯರವರು ಪ್ರಭುವಿನ ಕಾರ್ಯಗಳನು, ಆತನ ಕೈಕೆಲಸಗಳನು I ಈ ಕಾರಣ ಕೆಡವಿಬಿಡುವನು ಪ್ರಭು, ಮರಳಿ ಏಳಬಿಡನವರನು II
- Verse 6: ಪ್ರಭುವಿಗೆನ್ನ ಕೃತಜ್ಞತಾ ವಂದನೆ I ಆಲಿಸಿದನವನು ನನ್ನ ವಿಜ್ಞಾಪನೆ II
- Verse 7: ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II
- Verse 8: ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II
- Verse 9: ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II