पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
109ನೇ ಅಧ್ಯಾಯ
- Verse 1: ಹೇ ದೇವಾ, ನೀ ಸ್ತುತಿಗೆ ಯೋಗ್ಯ I ನೀನು ಸುಮ್ಮನಿರುವುದು ಸರಿಯಾ? II
- Verse 2: ತೆರೆದಿಹರು ಬಾಯಿ ದುರುಳರು, ವಂಚಕರು ನನಗೆದುರಾಗಿ I ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ ವಿರುದ್ಧವಾಗಿ II
- Verse 3: ಹಾಕಿಹರು ದ್ವೇಷತುಂಬಿದ ಮಾತುಗಳ ಮುತ್ತಿಗೆ I ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ II
- Verse 4: ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ I ಆದರೂ ಮಾಡುತ್ತಿರುವೆ ಅವರಿಗಾಗಿ ಪ್ರಾರ್ಥನೆ II
- Verse 5: ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II
- Verse 6: ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ ಬಲಗಡೆಗೆ I ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ ತೀರ್ಪಿಗೆ II
- Verse 7: ಅಪರಾಧಿಯಾಗಲಿ ಅವನು ನ್ಯಾಯವಿಚಾರಣೆಯಲಿ I ಅವನ ಪ್ರಾರ್ಥನೆಯೂ ಪಾಪವಾಗಿ ಎಣಿಸಲ್ಪಡಲಿ II
- Verse 8: ಅಲ್ಪವಾಗಿರಲಿ ಅವನ ಜೀವನಾವಧಿ I ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ II
- Verse 9: ತಬ್ಬಲಿಗಳಾಗಲಿ ಅವನ ಮಕ್ಕಳುಮರಿ I ವಿಧವೆಯಾಗಲಿ ಅವನ ನಾರಿಮಣಿ II
- Verse 10: ತಿರುಕರಂತೆ ಅಲೆಯಲಿ ಅವನ ಮಕ್ಕಳು ಭಿಕ್ಷೆಬೇಡುತ I ಹೊರದೂಡಲ್ಪಡಲಿ ತಮ್ಮ ಪಾಳುಬಿದ್ದಾಮನೆಗಳಿಂದ II
- Verse 11: ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು I ಸುಲಿದುಕೊಳ್ಳಲಿ ಪರರು ಅವನ ಕಷ್ಟಾರ್ಜಿತವನು II
- Verse 12: ಕರುಣೆತೋರುವವನಾರೂ ಅವನಿಗಿಲ್ಲವಾಗಲಿ I ಅವನ ತಬ್ಬಲಿ ಮಕ್ಕಳನಾರೂ ಕನಿಕರಿಸದಿರಲಿ II
- Verse 13: ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II
- Verse 14: ಮರೆಯದಿರಲಿ ಪ್ರಭು ಅವನಾ ಹಿರಿಯರ ದೋಷವನು I ಪರಿಹರಿಸದಿರಲಿ ಅವನ ತಾಯಿಯು ಗೈದ ಪಾಪವನು II
- Verse 15: ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ I ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ II
- Verse 16: ಯಾರೊಬ್ಬನಿಗು ಮರುಕತೋರೆ ಮರೆತುಬಿಟ್ಟನವನು I ಕೊಲ್ಲಲು ಯತ್ನಿಸಿದನು ದೀನರನು, ಮನಗುಂದಿದವರನು II
- Verse 17: ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II
- Verse 18: ಶಪಿಸುವುದೆಂದರೆ ಅವನಿಗೆ ಉಡಿಗೆತೊಡಿಗೆಯಂತೆ I ಇಳಿಯಲಿ ಅದೀಗ ಅವನ ದೇಹಕೆ ನೀರಿನಂತೆ I ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ II
- Verse 19: ಅವನಿಗಿರಲಿ ಶಾಪ ಹೊದಿಕೆಯಂತೆ I ಅದುವೆ ಅನುದಿನದ ನಡುಗಟ್ಟಂತೆ II
- Verse 20: ನನಗೆದುರಾಡಿ ತಪ್ಪು ಹೊರಿಸುವವರಿಗೆ I ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ II
- Verse 21: ಹೇ ಪ್ರಭು, ದೇವಾ, ನನ್ನನಾದರಿಸು ಅಕ್ಕರೆಯಿಂದ I ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ II
- Verse 22: ಬಡವ ನಾನು, ನನಗಿದೆ ಕುಂದುಕೊರತೆ I ನನ್ನ ಎದೆಗೆ ಅಲಗೇ ನಾಟಿದಂತಿದೆ II
- Verse 23: ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ I ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ II
- Verse 24: ಬಡಕಲಾಯಿತೆನ್ನ ದೇಹ ಬರಡಿಲ್ಲದೆ I ನಡುಕ ಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ II
- Verse 25: ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ I ನೋಡುವವರು ತಲೆಯಾಡಿಸಿ ಮಾಡುವ ನಿಂದೆಗೆ II
- Verse 26: ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ I ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ II
- Verse 27: ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರರಿಯಲಿ I ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು ಖಚಿತವಾಗಲಿ II
- Verse 28: ಅವರೆನ್ನನು ಶಪಿಸಿದರೂ ನೀನೆನ್ನನು ಹರಸು I ನನ್ನೆದುರಾಳಿಗೆ ಅಪಮಾನವನು ಹೊರಿಸು I ನಿನ್ನ ದಾಸನೆನಗೆ ಆನಂದವನು ಪಾಲಿಸು II
- Verse 29: ಮಾನಭಂಗವಾಗಲಿ ನನ್ನಾ ನಿಂದಕರಿಗೆ I ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ II
- Verse 30: ಕೊಂಡಾಡುವೆನು ಪ್ರಭುವನು ಬಹಳವಾಗಿ I ಕೀರ್ತಿಸುವೆನು ಆತನನು ಸಾಮೂಹಿಕವಾಗಿ II
- Verse 31: ನಿಂತಿರುವನು ಪ್ರಭು ಬಡವನ ಬಲಗಡೆ I ವಿಧಿಸುವವರಿಂದ ತಪ್ಪಿಸುವನು ಮರಣದಂಡನೆ II