पवित्र बाइबिल
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
4ನೇ ಅಧ್ಯಾಯ
- Verse 1: ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ; ವಿವೇಕ ಸಂಪಾದನೆಯತ್ತ ಗಮನಕೊಡಿರಿ.
- Verse 2: ನಾನು ನಿಮಗೆ ನೀಡುವುದು ಸದುಪದೇಶ; ನೀವು ಅದನ್ನು ಕೈಬಿಡಬೇಡಿ.
- Verse 3: ನಾನೂ ಕೂಡ ತಂದೆಗೆ ಒಬ್ಬ ಚಿಕ್ಕ ಮಗುವಾಗಿದ್ದೆ, ತಾಯಿಗೆ ಏಕೈಕ ಕುಮಾರನೂ ಕೋಮಲನೂ ಆಗಿದ್ದೆ.
- Verse 4: ತಂದೆ ನನಗೆ ಹೀಗೆಂದು ಬೋಧನೆ ಮಾಡಿದ: “ನನ್ನ ಮಾತುಗಳು ಭದ್ರವಾಗಿರಲಿ ನಿನ್ನ ಮನದಲ್ಲಿ; ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು ಸುಖದಲ್ಲಿ.
- Verse 5: ಮರೆಯಬೇಡ, ನನ್ನ ಮಾತಿಗೆ ಓರೆಯಾಗಬೇಡ, ಜ್ಞಾನವನ್ನು ಪಡೆ. ವಿವೇಕವನ್ನು ಗಳಿಸಿಕೊ.
- Verse 6: ಜ್ಞಾನವನ್ನು ಕೈಬಿಡದಿದ್ದರೆ, ಅದು ನಿನ್ನನ್ನು ಕಾಪಾಡುವುದು; ನೀನದನ್ನು ಪ್ರೀತಿಸಿದೆಯಾದರೆ, ಅದು ನಿನ್ನನ್ನು ಕಾಯುವುದು.
- Verse 7: ಜ್ಞಾನ ಪಡೆಯಬೇಕೆಂಬುದೇ ಜ್ಞಾನಬೋಧೆಯ ಮೂಲಾಂಶ; ನಿನ್ನ ಸರ್ವಸಂಪತ್ತಿನಿಂದ ವಿವೇಕವನ್ನು ಗಳಿಸಿಕೊ.
- Verse 8: ಜ್ಞಾನವೆಂಬಾಕೆಯನ್ನು ಶ್ರೇಷ್ಠಳೆಂದು ಭಾವಿಸಿದೆಯಾದರೆ, ಆಕೆ ನಿನ್ನನ್ನು ಸನ್ಮಾನಿಸುವಳು. ನೀನು ಅವಳನ್ನು ಅಪ್ಪಿಕೊಂಡೆಯಾದರೆ, ಆಕೆ ನಿನ್ನನ್ನು ಘನಪಡಿಸುವಳು.
- Verse 9: ಅಂದದ ಪುಷ್ಪಮಾಲೆಯನ್ನು ಹಾಕುವಳು ನಿನ್ನ ಕೊರಳಿಗೆ, ಸುಂದರ ಕಿರೀಟವನ್ನು ಮುಡಿಸುವಳು ನಿನ್ನ ತಲೆಗೆ.”
- Verse 10: ಮಗನೇ, ನನ್ನ ಮಾತುಗಳನ್ನು ಆಲಿಸಿ ಕೇಳು; ಕೇಳಿದೆಯಾದರೆ ಹೆಚ್ಚುವುವು ನಿನ್ನ ಜೀವನದ ವರ್ಷಗಳು.
- Verse 11: ಜ್ಞಾನಮಾರ್ಗವನ್ನು ನಿನಗೆ ಉಪದೇಶಿಸುವೆನು. ಸತ್ಯಮಾರ್ಗದಲ್ಲಿ ನಿನ್ನನ್ನು ನಡೆಸುವೆನು.
- Verse 12: ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು, ನೀ ಓಡುವಾಗ ಮುಗ್ಗರಿಸಿ ಬೀಳಲಾಗದು.
- Verse 13: ಸದುಪದೇಶವನ್ನು ಬಿಗಿಹಿಡಿದುಕೊ; ಅದೇ ನಿನ್ನ ಜೀವ, ಅದನ್ನು ಕಾಪಾಡಿಕೊ.
- Verse 14: ದುಷ್ಟರ ಸಂಘದಲ್ಲಿ ಸೇರಬೇಡ, ಕೆಟ್ಟವರ ಹಾದಿಯಲ್ಲಿ ಕಾಲಿಡಬೇಡ.
- Verse 15: ಆ ದುರ್ಮಾರ್ಗದಿಂದ ಓರೆಯಾಗು, ದೂರವಾಗು; ಅದರಲ್ಲಿ ನಡೆಯದೆ ಮುಂದಕ್ಕೆ ಸಾಗು.
- Verse 16: ಕೇಡು ಮಾಡದಿದ್ದರೆ ಆ ದುರುಳರಿಗೆ ನಿದ್ರೆಬಾರದು, ವಂಚಿಸಿ ಬೀಳಿಸದಿದ್ದರೆ ಅವರಿಗೆ ನಿದ್ರೆ ಹತ್ತದು.
- Verse 17: ದುಷ್ಟತನವೇ ಅವರಿಗೆ ಅನ್ನ ಆಹಾರ; ಹಿಂಸಾಚಾರವೇ ಅವರಿಗೆ ಮದುಪಾನ.
- Verse 18: ಸಜ್ಜನರ ಮಾರ್ಗ ಪ್ರಾತಃಕಾಲದ ಬೆಳಕಿನಂತೆ; ಅದರ ಬೆಳಕು ಹೆಚ್ಚುತ್ತಿರುತ್ತದೆ ಬಟ್ಟ ಹಗಲವರೆಗೆ.
- Verse 19: ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.
- Verse 20: ಮಗನೇ, ನನ್ನ ಮಾತನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.
- Verse 21: ಅವು ನಿನ್ನ ಕಣ್ಣಿಗೆ ಮರೆಯಾಗದಿರಲಿ, ನಿನ್ನ ಹೃದಯದೊಳಗೆ ಭದ್ರವಾಗಿರಲಿ.
- Verse 22: ಕಂಡುಹಿಡಿಯಬಲ್ಲವನಿಗೆ ಅವು ಜೀವದಾಯಕ; ಇಡೀ ದೇಹಕ್ಕೆ ಅವು ಆರೋಗ್ಯಕರ.
- Verse 23: ನಿನ್ನ ಹೃದಯವನ್ನು ಕಾಪಾಡು ಜಾಗರೂಕತೆಯಿಂದ; ಏಕೆಂದರೆ ಜೀವಧಾರೆ ಹೊರಡುವುದು ಅದರಿಂದ.
- Verse 24: ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸು, ಕೆಟ್ಟನುಡಿಗಳನ್ನು ಬಾಯಿಂದ ದೂರಮಾಡು.
- Verse 25: ನಿನ್ನ ಕಣ್ಣುಗಳು ನೇರವಾಗಿ ನಾಟಿರಲಿ, ಕಣ್ಣು ರೆಪ್ಪೆಗಳು ಮುಂದಾಗಿ ತೆರೆದಿರಲಿ.
- Verse 26: ನೀ ನಡೆವ ದಾರಿ ಸಮನಾಗಿರಲಿ, ನೀ ಕೈಗೊಳ್ಳುವ ಹಾದಿ ದೃಢವಾಗಿರಲಿ.
- Verse 27: ತಿರುಗಬೇಡ ಎಡಕ್ಕಾಗಲಿ, ಬಲಕ್ಕಾಗಲಿ; ಕೇಡಿನಿಂದ ನಿನ್ನ ಕಾಲು ದೂರವಿರಲಿ.