ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಪರಮಗೀತೆ
6ನೇ ಅಧ್ಯಾಯ
- Verse 1: ಮಹಿಳಾಮಣಿಯೇ, ನಿನ್ನಿನಿಯನು ಹೋದುದೆಲ್ಲಿಗೆ? ಅವನನ್ನು ಹುಡುಕೋಣವೇ ನಾವು ನಿನ್ನೊಂದಿಗೆ? ಹೇಳು, ನಿನ್ನಿನಿಯನು ಹೋದುದೆಲ್ಲಿಗೆ? ನಲ್ಲೆ :
- Verse 2: ನನ್ನ ಕಾಂತನು ತೆರಳಿಹನು ಸುಗಂಧ ಸಸ್ಯಗಳಿರುವ ತೋಟಕೆ ಉದ್ಯಾನಗಳಲ್ಲಿ ಮಂದೆಯನು ಮೇಯಿಸುವುದಕೆ ಅಲ್ಲಿನ ನೆಲದಾವರೆಗಳನ್ನು ಕೊಯ್ದು ತರುವುದಕೆ.
- Verse 3: ಎನ್ನಿನಿಯನು ನನ್ನವನೇ, ನಾನು ಅವನವಳೇ ತನ್ನ ಮಂದೆಯ ಮೇಯಿಸುತ್ತಿಹನು ನೆಲದಾವರೆಗಳ ನಡುವೆ. ನಲ್ಲ :
- Verse 4: ನನ್ನ ಪ್ರಿಯಳೇ, ನೀನು ಸುಂದರಿ, ತಿರ್ಚನಗರದಂತೆ ಮನೋಹರಿ, ಜೆರುಸಲೇಮಿನಂತೆ ಭಯಂಕರಿ, ಪತಾಕಿನಿಯಂತೆ.
- Verse 5: ತಿರುಗಿಸು ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ನನ್ನ ಸೆರೆಹಿಡಿದು ಬಿಡುವವು ತಮ್ಮ ನೋಟದಿಂದ. ನಿನ್ನ ಕೇಶರಾಶಿಯ ನರ್ತನ ಗಿಲ್ಯಾದ್ ಗುಡ್ಡದಿಂದ ಇಳಿಯುವ ಆಡುಮಂದೆಗೆ ಸಮಾನ.
- Verse 6: ನಿನ್ನ ಹಲ್ಲುಗಳ ಹೊಳಪು ತೊಳೆದ ಕುರಿಮಂದೆಯ ಬಿಳುಪು ಮೇಲೇರುತ್ತವೆ ಅವು ಜೋಡಿಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ.
- Verse 7: ಮುಸುಕಿನಲಿ ನಿನ್ನ ಕೆನ್ನೆ ಮಾಗಿ ಒಡೆದಿರುವ ದಾಳಿಂಬೆ.
- Verse 8: ಅರಸನಿಗೆ ರಾಣಿಯರು ಅರವತ್ತು ಮಂದಿ ಉಪಪತ್ನಿಯರು ಎಂಬತ್ತು ಮಂದಿ ಯುವತಿಯರು ಲೆಕ್ಕವಿಲ್ಲದಷ್ಟು ಮಂದಿ.
- Verse 9: ನನ್ನ ಪಾರಿವಾಳ, ನನ್ನ ನಿರ್ಮಲೆ ಇವಳೇ ಏಕಮಾತ್ರ ಪುತ್ರಿ ತಾಯಿಗೆ ಮುದ್ದುಮಗಳು ಹೆತ್ತವಳಿಗೆ. ಈಕೆ ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ ರಾಣಿಯರು, ಉಪಪತ್ನಿಯರು ಕೊಂಡಾಡಿದರು ಈ ಪರಿ :
- Verse 10: “ಉದಯಿಸುತ್ತಿರುವಳಿವಳು ಅರುಣೋದಯದಂತೆ ಸುಂದರಿಯಾಗಿಹಳು ಚಂದ್ರನಂತೆ ಶುಭ್ರಳಾಗಿಹಳು ಸೂರ್ಯನಂತೆ ಭಯಂಕರಳು ಪತಾಕಿನಿಯಂತೆ ಎಂಥವಳಿರಬಹುದು ಇವಳು ಪೇಳೈ?
- Verse 11: ದ್ರಾಕ್ಷಾಬಳ್ಳಿ ಚಿಗುರಿದೆಯೋ ದಾಳಿಂಬೆಗಿಡ ಹೂಬಿಟ್ಟಿದೆಯೋ ಎಂದು ನೋಡಲಿಕೆ ಕಣಿವೆಯಲ್ಲಿರುವ ಕುಸುಮಗಳನು ಕಾಣಲಿಕೆ ನಾ ನಡೆದೆ ಬಾದಾಮಿಯ ತೋಟಕೆ.
- Verse 12: ಇದ್ದಕ್ಕಿದ್ದ ಹಾಗೆಯೇ ನಾಯಕನಾಗಿ ನನ್ನ ನಾಡಿಗೆ ನಾ ಕುಳಿತಿದ್ದೆ ರಥದ ಮೇಲೆ.
- Verse 13: ಶೂಲಮ್ ಊರಿನ ನಾರಿಯೇ ತಿರುಗು ಇತ್ತ, ತಿರುಗು ಅತ್ತ ನಾವು ನಿನ್ನನ್ನು ನೋಡುವಂತೆ ತಿರುಗು ಇತ್ತ, ತಿರುಗು ಅತ್ತ ! ನಲ್ಲೆ : ಎರಡು ಸಾಲಿನ ನರ್ತಕಿಯರ ನಡುವೆ ಕುಣಿಯುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನು ನೀನು ನೋಡುವುದೇಕೆ?