P. O. C ബൈബിള്
ಹಳೆಯ ಒಡಂಬಡಿಕೆ
ಹೋಶೇಯ
5ನೇ ಅಧ್ಯಾಯ
- Verse 1: “ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜವಂಶದವರೇ ಕಿವಿಗೊಡಿ.
- Verse 2: ನೀವು ಮಿಚ್ಪದಲ್ಲಿ ಉರುಲಾಗಿದ್ದೀರಿ. ತಾಬೋರಿನಲ್ಲಿ ಬಲೆಯಾಗಿದ್ದೀರಿ. ಶಿಟ್ಟಿಮಿನಲ್ಲಿ ಆಳವಾದ ಕಂದಕವನ್ನು ತೋಡಿದ್ದೀರಿ. ನಿಮ್ಮ ವಿರುದ್ಧ ತೀರ್ಪುಬಂದಿದೆ. ನಿಮ್ಮೆಲ್ಲರನ್ನು ಶಿಕ್ಷಿಸುವೆನು.
- Verse 3: ಎಫ್ರಯಿಮನ್ನು ಬಲ್ಲೆನು; ಇಸ್ರಯೇಲ್ ನನಗೆ ಕಣ್ಮರೆಯಾಗಿಲ್ಲ. ಎಫ್ರಯಿಮ್, ನೀನು ವ್ಯಭಿಚಾರಿಣಿಯಾಗಿರುವೆ. ಇಸ್ರಯೇಲ್, ನೀನು ಹೊಲಸಾಗಿರುವೆ.”
- Verse 4: ಅವರು ತಮ್ಮ ದೇವರ ಬಳಿಗೆ ಹಿಂದಿರುಗದಂತೆ ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರ ಅವರಲ್ಲಿ ನೆಲೆಗೊಂಡಿದೆ. ಅವರು ಸರ್ವೇಶ್ವರನನ್ನು ಅರಿಯರು.
- Verse 5: ಇಸ್ರಯೇಲಿನ ಅಹಂಕಾರವೇ ಅದಕ್ಕೆ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಸ್ರಯೇಲ್ ಮತ್ತು ಎಫ್ರಯಿಮ್ ತಮ್ಮ ದುರ್ಮಾರ್ಗದಲ್ಲಿ ಮುಗ್ಗರಿಸಿ ಬೀಳುತ್ತವೆ. ಜುದೇಯವೂ ಅದರಂತೆಯೇ ಬೀಳಲಿದೆ.
- Verse 6: ಅವರು ತಮ್ಮ ದನಕುರಿಗಳೊಂದಿಗೆ ಸರ್ವೇಶ್ವರಸ್ವಾಮಿಯನ್ನು ಅರಸಿಹೋದರೂ, ಅವರನ್ನು ಕಾಣರು. ಸರ್ವೇಶ್ವರ ಅವರಿಂದ ಮರೆಯಾಗಿದ್ದಾರೆ.
- Verse 7: ಅವರು ವ್ಯಭಿಚಾರದಿಂದ ಸರ್ವೇಶ್ವರಸ್ವಾಮಿಗೆ ದ್ರೋಹವೆಸಗಿದ್ದಾರೆ. ಅವರ ಮಕ್ಕಳು ಆ ಸ್ವಾಮಿಯ ಮಕ್ಕಳಲ್ಲ; ಮುಂದಿನ ಅಮಾವಾಸ್ಯೆಯೊಳಗಾಗಿ ಅವರು ನಾಶವಾಗುವರು. ಅವರ ಸ್ವತ್ತೆಲ್ಲಾ ಅಳಿದುಹೋಗುವುದು.
- Verse 8: ಗಿಬ್ಯದಲ್ಲಿ ತುತೂರಿಯನ್ನು ಊದಿರಿ, ರಮಾದಲ್ಲಿ ಕೊಂಬನ್ನು ಮೊಳಗಿಸಿರಿ; ಬೇತಾವೆನಿನಲ್ಲಿ ಕಾಳಗದ ಕರೆನೀಡಿರಿ. ಬೆನ್ಯಾಮಿನೇ, ನಿನ್ನನ್ನು ಬೆನ್ನಟ್ಟಿಬರುತ್ತಿರುವವರನ್ನು ನೋಡು.
- Verse 9: ದಂಡನೆಯ ದಿನದಲ್ಲಿ ಎಫ್ರಯಿಮ್ ಹಾಳಾಗುವುದು. ಇಗೋ, ಇಸ್ರಯೇಲಿನ ಕುಲಗಳ ಭವಿಷ್ಯವನ್ನು ಖಚಿತವಾಗಿ ತಿಳಿಸಿದ್ದೇನೆ:
- Verse 10: “ಜುದೇಯದ ಮುಖಂಡರು, ಗಡಿದಾಟಿ ಆಕ್ರಮಣಮಾಡುವವರನ್ನು ಹೋಲುತ್ತಾರೆ. ಅವರ ಮೇಲೆ ನನ್ನ ಕೋಪಾಗ್ನಿಯನ್ನು ಸುರಿಸುತ್ತೇನೆ.
- Verse 11: ದುರಾಚಾರಗಳನ್ನು ಅನುಸರಿಸಲು ನಿರ್ಧರಿಸಿದ ಕಾರಣ, ಎಫ್ರಯಿಮ್ ನ್ಯಾಯತೀರ್ಪಿಗೆ ಗುರಿಯಾಗಿದೆ; ಹಿಂಸೆಗೀಡಾಗಿದೆ; ನುಚ್ಚುನೂರಾಗಿದೆ.
- Verse 12: ನಾನು ಎಫ್ರಯಿಮಿಗೆ ನುಸಿಯಾಗಿದ್ದೇನೆ; ಯೆಹೂದ ಕುಲಕ್ಕೆ ಕುಟ್ಟೆಯಾಗಿದ್ದೇನೆ.
- Verse 13: “ಎಫ್ರಯಿಮ್ ತನ್ನ ರೋಗವನ್ನು ಅರಿತುಕೊಂಡಿತು; ಜುದೇಯವು ತನ್ನ ಹುಣ್ಣನ್ನು ಕಂಡುಕೊಂಡಿತು. ಆಗ ಎಫ್ರಯಿಮ್ ಅಸ್ಸೀರಿಯಾದ ಕಡೆಗೆ ತಿರುಗಿಕೊಂಡು ಜಗಳಗಂಟಿಯಾದ ರಾಜನ ಬಳಿಗೆ ದೂತರನ್ನು ಕಳುಹಿಸಿತು. ಆದರೆ ಅವನು ನಿಮ್ಮ ರೋಗವನ್ನು ವಾಸಿಮಾಡಲಾರನು, ನಿಮ್ಮ ಹುಣ್ಣನ್ನು ಗುಣಪಡಿಸಲಾರನು.
- Verse 14: ಎಫ್ರಯಿಮಿಗೆ ನಾನು ಸಿಂಹ; ಯೆಹೂದ್ಯಕುಲಕ್ಕೆ ಪ್ರಾಯದ ಸಿಂಹ; ಅದನ್ನು ಸೀಳಿಬಿಡುವೆನು; ಎಳೆದುಕೊಂಡು ಹೋಗುವೆನು; ಯಾರೂ ಅದನ್ನು ನನ್ನಿಂದ ಬಿಡಿಸಿಕೊಳ್ಳಲಾರರು.
- Verse 15: “ನಾನು ನನ್ನ ನಿವಾಸಕ್ಕೆ ಹಿಂದಿರುಗುವೆನು. ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಸಾನಿಧ್ಯವನ್ನು ಹರಸುವ ತನಕ ಅಲ್ಲೇ ಇರುವೆನು. ಸಂಕಟದಲ್ಲಿ ಸಿಕ್ಕಿಕೊಂಡಾಗ, ಕೂಡಲೆ ಅವರು ನನ್ನನ್ನು ಆಶ್ರಯಿಸುವರು.”