ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜೆಕರ್ಯ
9ನೇ ಅಧ್ಯಾಯ
- Verse 1: ಹದ್ರಾಕ್ ನಾಡಿಗೂ ದಮಸ್ಕಪಟ್ಟಣಕ್ಕೂ ವಿರುದ್ಧ ಸರ್ವೇಶ್ವರ ನುಡಿದ ದೈವೋಕ್ತಿ: ಸರ್ವೇಶ್ವರಸ್ವಾಮಿ ನರಮಾನವರ ಮೇಲೆ ಕಣ್ಣಿಟ್ಟಿದ್ದಾರೆ. ಹೌದು ಇಸ್ರಯೇಲಿನ ಸಕಲ ಕುಲಗಳ ಮೇಲೆ ಕಣ್ಣಿಟ್ಟಿದ್ದಾರೆ.
- Verse 2: ಅಂತೆಯೇ ದಮಸ್ಕದ ಪಕ್ಕದಲ್ಲಿರುವ ಹಮಾತಿನ ಮೇಲೆ, ತಾವೇ ಜಾಣರೆಂದು ಕೊಚ್ಚಿಕೊಳ್ಳುತ್ತಿರುವ ಟೈರ್ ಮತ್ತು ಸಿದೋನ್ ಪಟ್ಟಣಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.
- Verse 3: ಟೈರ್ ಪಟ್ಟಣವು ತನ್ನ ಸುತ್ತಲೂ ಗೋಡೆಯನ್ನು ಕಟ್ಟಿಕೊಂಡಿದೆ. ಬೆಳ್ಳಿಯನ್ನು ಮಣ್ಣುಮಸಿಯಂತೆ, ಬಂಗಾರವನ್ನು ಕಡ್ಡಿಕಸದಂತೆ ರಾಶಿಮಾಡಿಟ್ಟುಕೊಂಡಿದೆ.
- Verse 4: ಆದರೆ ಸರ್ವೇಶ್ವರ ಅದರ ಆಸ್ತಿಪಾಸ್ತಿಯನ್ನು ಕಿತ್ತುಕೊಂಡು ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು. ಆ ಪಟ್ಟಣವು ಬೆಂಕಿಗೆ ಆಹುತಿಯಾಗುವುದು.
- Verse 5: ಇದನ್ನು ಕಂಡು ಅಷ್ಕೆಲೋನ್ ಭಯದಿಂದ ನಡುಗುವುದು. ಗಾಜಾ ಪಟ್ಟಣ ಸಂಕಟದಿಂದ ಗೋಳಾಡುವುದು; ಎಕ್ರೋನ್ ನಿರಾಶೆಯಿಂದ ಪ್ರಲಾಪಿಸುವುದು; ಗಾಜಾ ಪಟ್ಟಣಕ್ಕೆ ರಾಜನೇ ಇಲ್ಲದಂತಾಗುವುದು. ಅಷ್ಕೆಲೋನ್ ನಿರ್ಜನ ಪ್ರದೇಶವಾಗುವುದು;
- Verse 6: ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಮಾಡುವರು. ಸರ್ವೇಶ್ವರ ಇಂತೆನ್ನುತ್ತಾರೆ: “ಫಿಲಿಷ್ಟಿಯದ ಗರ್ವವನ್ನು ಅಡಗಿಸುವೆನು. ಅವರು ಸವಿಯುವ ರಕ್ತಸಿಕ್ತ ಮಾಂಸವನ್ನು ಅವರ ಬಾಯಿಂದ ಕಕ್ಕಿಸುವೆನು.
- Verse 7: ಅವರು ಕಚ್ಚುವ ನಿಷಿದ್ಧ ಪದಾರ್ಥಗಳನ್ನು ಅವರ ಹಲ್ಲುಗಳಿಂದ ಕಿತ್ತುಹಾಕುವೆನು. ಅವರು ಸಹ ಇಸ್ರಯೇಲಿನ ದೇವರಿಗೆ ಮೀಸಲಾದ ಜನರಾಗುವರು; ಯೆಹೂದ್ಯ ಕುಲಗಳಲ್ಲಿ ಒಂದಾಗುವರು. ಎಕ್ರೋಮಿನವರು ಯೆಬೂಸಿಯರಂತೆ ಆಗುವರು.
- Verse 8: ಶತ್ರುಗಳು ಅತ್ತ ಕಾಲಿಡದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಿರುವೆನು. ಯಾವ ಬಾಧಕನೂ ನನ್ನ ಜನರ ಮೇಲೆ ಧಾಳಿಮಾಡದಂತೆ ನಾನೇ ಕಣ್ಣಿಟ್ಟು ನೋಡಿಕೊಳ್ಳುವೆನು.”
- Verse 9: ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ, ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ ಜನಗಳೇ, ಇಗೋ, ಬರುತಿಹನು ನಿಮ್ಮ ಅರಸನು ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು.
- Verse 10: ಕಿತ್ತುಹಾಕುವೆನು ಎಫ್ರಯಿಮಿನ ರಥಬಲವನು ನಿಶ್ಶೇಷಮಾಡುವೆನು ಜೆರುಸಲೇಮಿನ ಅಶ್ವಬಲವನು ಮುರಿಯಲಾಗುವುದು ಯುದ್ಧದ ಬಿಲ್ಲುಗಳನು. ಘೋಷಿಸುವೆನು ಶಾಂತಿಯನು ರಾಷ್ಟ್ರಗಳಿಗೆ ಆತನ ರಾಜ್ಯಭಾರ ಸಮುದ್ರದಿಂದ ಸಮುದ್ರದವರೆಗೆ ಯೂಫ್ರೆಟಿಸ್ ನದಿಯಿಂದ ಭುವಿಯ ಕಟ್ಟಕಡೆಯವರೆಗೆ.
- Verse 11: ರಕ್ತ ಸುರಿಸಿ ನೀವು ನನ್ನೊಡನೆ ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಕರೆತರುವೆನು ನಿಮ್ಮವರನು ಸೆರೆಯಾಳತ್ವದಿಂದ ಮೇಲೆತ್ತುವೆನು ನಿಮ್ಮವರನು ಆ ಸೆರೆಬಾವಿಯಿಂದ.
- Verse 12: ನಂಬಿಕೆಯಿಂದ ಕಾದಿರುವ ಸೆರೆಯಾಳುಗಳೇ, ಹಿಂದಿರುಗಿರಿ ನಿಮ್ಮ ಸುಭದ್ರ ದುರ್ಗಸ್ಥಾನಕೆ ಇಗೋ, ಈಗಲೂ ಘೋಷಿಸುತ್ತಿರುವೆ: ನಿಮಗಿಮ್ಮಡಿ ಸೌಭಾಗ್ಯ ನೀಡುವೆ.
- Verse 13: ಬಗ್ಗಿಸಿಕೊಂಡಿರುವೆ ಜುದೇಯ ಎಂಬ ಬಿಲ್ಲನು ಹೂಡಿರುವೆ ಅದರಲಿ ಎಫ್ರಯಿಮೆಂಬ ಬಾಣವನು. ಸಿಯೋನ್, ಎತ್ತಿಕಟ್ಟಿರುವೆ ನಿನ್ನವರನು ಗ್ರೀಕರಿಗಿದಿರಾಗಿ ಮಾಡುವೆ ನಿನ್ನನು ಶೂರನ ಕತ್ತಿಯನ್ನಾಗಿ.
- Verse 14: ಸ್ವಜನರಿಗೆ ಸರ್ವೇಶ್ವರ ಪ್ರತ್ಯಕ್ಷನಾಗುವನು ಮಿಂಚಿನಂತೆ ಬಿಡುವನು ತನ್ನ ಬಾಣಗಳನು ಮೊಳಗಿಸುವನು ಕಾಳಗದ ತುತೂರಿಯನು ದಕ್ಷಿಣದ ಬಿರುಗಾಳಿಯೊಂದಿಗೆ ಮುನ್ನುಗ್ಗುವನು.
- Verse 15: ರಕ್ಷಿಸುವನು ಸೇನಾಧೀಶ್ವರ ಸರ್ವೇಶ್ವರ ತನ್ನ ಜನರನು ನಸುಕಿ ನಾಶಮಾಡುವರವರು ಕವಣೆಗಾರ ಶತ್ರುಗಳನು. ಭೋರ್ಗರೆಯುವರು ಕುಡಿದು ಅಮಲೇರಿದವರಂತೆ ಇರುವರು ತುಂಬಿ ತುಳುಕುವ ಬೋಗುಣಿಗಳಂತೆ ರಕ್ತತೋಯ್ದ ವೇದಿಯ ಮೂಲೆಮೂಲೆಗಳಂತೆ.
- Verse 16: ಸ್ವಜನರನು ದೇವ ಸರ್ವೇಶ್ವರ ಕಾಪಾಡುವನು ಮೇಷಪಾಲನಂತೆ ನಾಡಿನೊಳು ಥಳಥಳಿಸುವರವರು ಕಿರೀಟದ ರತ್ನಗಳಂತೆ.
- Verse 17: ಆಹಾ! ಎಷ್ಟು ಸುಂದರ, ಎಷ್ಟು ಮನೋಹರ ಆ ನಾಡಿನ ದೃಶ್ಯ! ಪುಷ್ಟಿಗೊಳಿಸುವುವು ಯುವಕಯುವತಿಯರನು ದ್ರಾಕ್ಷೆ, ದವಸಧಾನ್ಯ!