ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
20ನೇ ಅಧ್ಯಾಯ
- Verse 1: ಮರುವರ್ಷ, ಅರಸರು ಯುದ್ಧಕ್ಕೆ ಹೊರಡುವ ಕಾಲದಲ್ಲಿ ಯೋವಾಬನು ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅವನೊಡನೆ ಬಲವಾದ ಸೈನ್ಯವಿತ್ತು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದನ್ನು ಹಾಳುಮಾಡಿಬಿಟ್ಟನು.
- Verse 2: ದಾವೀದನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಸುಮಾರು ಮೂವತ್ತೈದು ಕಿಲೋಗ್ರಾಂ ತೂಕದ್ದು. ಅದರಲ್ಲಿ ಇದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ಅವನು ದೊಡ್ಡ ಕೊಳ್ಳೆಯನ್ನೇ ಕೊಂಡು ಹೊಯ್ದನು.
- Verse 3: ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೆ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರೆಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.
- Verse 4: ಬಳಿಕ ಫಿಲಿಷ್ಟಿಯರ ವಿರುದ್ಧ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದನು. ಫಿಲಿಷ್ಟಿಯರು ಇದರಿಂದ ಕುಗ್ಗಿಹೋದರು.
- Verse 5: ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮ ಲಹ್ಮೀಯನನ್ನು ಕೊಂದನು. ಈ ಲಹ್ಮೀಯನ ಬರ್ಜಿಯ ಹಿಡಿಕೆ ನೇಕಾರರ ಕುಂಟೆಯಷ್ಟು ದೊಡ್ಡದಾಗಿತ್ತು.
- Verse 6: ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷ ಇದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳು ಇದ್ದವು. ಅವನೂ ರೆಫಾಯನು.
- Verse 7: ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
- Verse 8: ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕನಿಂದಲೂ ಹತರಾದರು.