ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
14ನೇ ಅಧ್ಯಾಯ
- Verse 1: “ಹೆಣ್ಣಿನಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನು, ದುಃಖಭರಿತನು.
- Verse 2: ಅರಳಿ ಬಾಡುವನು ಹೂವಿನಂತೆ ನಿಲ್ಲದೆ ಓಡುವನು ನೆರಳಿನಂತೆ.
- Verse 3: ಇಂಥವನಾದ ನನ್ನ ಮೇಲೆ ಕಣ್ಣಿಟ್ಟು ಬರಮಾಡುವೆಯಾ ನನ್ನನು ನಿನ್ನ ನ್ಯಾಯಸ್ಥಾನಕ್ಕೆ?
- Verse 4: ಅಶುದ್ಧತೆಯಿಂದ ಬಂದೀತೆ ಶುದ್ಧತೆ? ಇಲ್ಲ, ಎಂದಿಗೂ ಅದು ಅಸಾಧ್ಯವೆ.
- Verse 5: ಮಾನವನ ದಿನಗಳೆಷ್ಟೆಂದು ತೀರ್ಮಾನವಾಗಿದೆ ಅವನ ತಿಂಗಳುಗಳ ಲೆಕ್ಕ ನಿನಗೆ ಗೊತ್ತಿದೆ ನೀ ನೇಮಿಸಿರುವೆ ಅವನಿಗೆ ದಾಟಲಾಗದ ಗಡಿಗಳನೆ.
- Verse 6: ಇಂತಿರಲು ತಿರುಗಿಸಿಬಿಡು ಅವನಿಂದ ನಿನ್ನ ದೃಷ್ಟಿಯನು ಸವಿಯಲು ಬಿಡು ಕೂಲಿಯಾಳಂತೆ ದಿನಾಂತ್ಯದ ನಲಿವನು.
- Verse 7: ಮತ್ತೆ ಮೊಳೆಯುವೆನೆಂಬ, ಮರಳಿ ಚಿಗುರುವೆನೆಂಬ ನಂಬಿಕೆಯಿಂದಿದೆ ಅಲ್ಲವೆ ಕಡಿದ ವಟವೃಕ್ಷ?
- Verse 8: ಮರದ ಬೇರು ನೆಲದಲ್ಲಿ ಮುದಿಯಾಗಿದ್ದರೂ ಅದರ ಬುಡ ಮಣ್ಣಿನಲ್ಲಿ ಸತ್ತಿದ್ದರೂ
- Verse 9: ಮಳೆ ವಾಸನೆಯಿಂದಲೆ ಅದು ಮೊಳೆಯುವುದು ಗಿಡದ ಹಾಗೆ ಅದು ಕವಲೊಡೆದುಕೊಳ್ಳುವುದು.
- Verse 10: ಮನುಜನೋ ಬಿದ್ದಿರುತ್ತಾನೆ ಸತ್ತು ಕೊನೆಯುಸಿರೆಳೆದಾಗ ಎಲ್ಲವು ಮುಗಿಯಿತು.
- Verse 11: ಸರೋವರದ ನೀರು ಆರಿಹೋಗುವಂತೆ ನದಿಗಳು ಬತ್ತಿಹೋಗುವಂತೆ
- Verse 12: ಸತ್ತು ಮಲಗಿದ ಮನುಜ ಏಳುವಂತಿಲ್ಲ. ಅಳಿದುಹೋದರೂ ಆಕಾಶಮಂಡಲ ಅವನು ಎಚ್ಚರಗೊಳ್ಳುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.
- Verse 13: ಆಹಾ! ಬಚ್ಚಿಡಲಾರೆಯಾ ನನ್ನನ್ನು ಪಾತಾಳದೊಳಗೆ? ಅಲ್ಲಿ ಮರೆಮಾಚಿಡಲಾರೆಯಾ ನಿನ್ನ ಕೋಪ ಇಳಿಯುವವರೆಗೆ? ಕಾಲವನ್ನು ಗೊತ್ತುಮಾಡಲಾರೆಯಾ ನನ್ನನು ನೆನೆಯುವುದಕೆ?
- Verse 14: ಸತ್ತಮೇಲೆ ಮನುಜ ಮರಳಿ ಬದುಕುತ್ತಾನೆಯೇ? ಬದುಕುವುದಾದರೆ ಮುಕ್ತಿಹೊಂದುವವರೆಗೆ ನನ್ನ ವಾಯಿದೆಯ ದಿನವೆಲ್ಲ ನಾ ಕಾದಿರುವೆ.
- Verse 15: ಆಗ ನೀನು ಕರೆದರೆ ನಾನು ಉತ್ತರಕೊಡುವೆ ನಿನ್ನ ಈ ಸೃಷ್ಟಿಯ ಮೇಲೆ ಹುಟ್ಟೀತು ನಿನಗೆ ಮಮತೆ!
- Verse 16: ಆಗ ನನ್ನ ಹೆಜ್ಜೆಹೆಜ್ಜೆಗಳನು ನೀ ಲೆಕ್ಕಿಸುವೆ ನನ್ನ ಪಾಪ ಹುಡುಕಲು ನೀ ಕಾವಲು ಇಡಲಾರೆ.
- Verse 17: ಆಗ ನನ್ನ ದ್ರೋಹವನ್ನೆಲ್ಲ ಮೂಟೆಕಟ್ಟಿ ಮೂಲೆಗೆ ಹಾಕುವೆ ನನ್ನ ದೋಷವನ್ನು ಮುಚ್ಚಿ, ನೀ ಮರೆಮಾಡುವೆ.
- Verse 18: ಆದರೆ ಬೆಟ್ಟ ಕದಡಿ ಕರಗುವಂತೆ ಬಂಡೆ ತನ್ನ ಸ್ಥಳದಿಂದ ಜಾರುವಂತೆ.
- Verse 19: ಕಲ್ಲುಗಳನ್ನು ನೀರು ಸವೆಸುವಂತೆ ನೆಲದ ಮಣ್ಣನು ಪ್ರವಾಹ ಕೊಚ್ಚುವಂತೆ ಭಂಗವಾಗುವುದು ಮಾನವನ ನಿರೀಕ್ಷೆ.
- Verse 20: ನೀನು ಅವನನ್ನು ಶಾಶ್ವತವಾಗಿ ಸೋಲಿಸಿಬಿಡುವೆ ಅವನು ಗತಿಸಿಹೋಗುವನು. ಅವನನ್ನು ವಿಕಾರಗೊಳಿಸಿ ತೊಲಗಿಸಿಬಿಡುವೆ.
- Verse 21: ಅವನ ಮಕ್ಕಳು ಪ್ರಗತಿಹೊಂದಿದರೂ ಅವನಿಗೆ ತಿಳಿಯದು ಅವರು ಅಧೋಗತಿಗೆ ಇಳಿದರೂ ಅವನಿಗೆ ಗೋಚರವಾಗದು.
- Verse 22: ಅವನು ಅನುಭವಿಸುವುದು ತನ್ನ ದೇಹದ ನೋವನ್ನೇ ಅವನು ಅತ್ತು ಪ್ರಲಾಪಿಸುವುದು ತನಗಾಗಿಯೇ.”