வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
89ನೇ ಅಧ್ಯಾಯ
- Verse 1: ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು II
- Verse 2: ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
- Verse 3: ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ : II
- Verse 4: “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು I ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು” II
- Verse 5: ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು I ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು II
- Verse 6: ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
- Verse 7: ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು II ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು II
- Verse 8: ಪ್ರಭೂ, ಶಕ್ತಿಸ್ವರೂಪ, ನಿನ್ನ ಸುತ್ತುವರೆದಿದೆ ಸತ್ಯತೆ I ಸ್ವಾಮಿದೇವಾ, ಸರ್ವೇಶ್ವರಾ, ನಿನಗೆಲ್ಲಿಯದು ಸಮಾನತೆ? II
- Verse 9: ಕಡಲ ಕಲ್ಲೋಲಗಳನ್ನೆಲ್ಲ ಅಂಕೆಯಲಿ ಇಡುವವನು ನೀನು I ತರಂಗವೇಳುವಾಗಲು ಕೂಡ ತಡೆಹಿಡಿವವನು ನೀನು II
- Verse 10: ಚದರಿಸಿದೆ ನಿನ್ನ ಭುಜಬಲದಿಂದ ಶತ್ರುಗಳನು I ಛೇದಿಸಿ ಕೊಂದುಹಾಕಿದೆ ಆ ರಾಕ್ಷಸ ರಹಬನನು II
- Verse 11: ಆಕಾಶವು ನಿನ್ನದು ಪ್ರಭು, ಭೂಮಿಯೂ ನಿನ್ನದೇ I ಜಗವು, ಅದರಲ್ಲಿರುವುದೆಲ್ಲವು, ನಿನ್ನಿಂದಾದುದೇ II
- Verse 12: ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು I ಸ್ತುತಿಸುತ್ತವೆ ತಾಬೋರ್ ಹೆರ್ಮೊನ್ ನಿನ್ನ ನಾಮವನು II
- Verse 13: ನಿನ್ನ ಹಸ್ತ ಶಕ್ತಿಯುತ, ಬಲಗೈ ಮಹೋನ್ನತ I ನಿನ್ನ ಭುಜಬಲವಾದರೊ ಪರಾಕ್ರಮರೂಪಿತ II
- Verse 14: ನೀತಿನ್ಯಾಯ ನಿನ್ನ ಸಿಂಹಾಸನದಸ್ತಿವಾರ I ಪ್ರೀತಿಸತ್ಯತೆ ನಿನ್ನ ಸಾನ್ನಿಧ್ಯ ಪರಿವಾರ II
- Verse 15: ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II
- Verse 16: ಆನಂದಿಸುವರವರು ಸದಾ ನಿನ್ನ ನಾಮದಲಿ I ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II
- Verse 17: ಅವರ ಶಕ್ತಿಸಾಮರ್ಥ್ಯದ ಪ್ರತಿಭೆ ನಿನ್ನದೆ I ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ II
- Verse 18: ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ I ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ II
- Verse 19: ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: I “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ I ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ II
- Verse 20: “ನನ್ನ ದಾಸ ದಾವೀದನನು ಗುರುತಿಸಿರುವೆ I ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ II
- Verse 21: ನನ್ನ ಕೈಯ ಆಸರೆ ಅವನಿಗಿದೆ ಸತತ I ನನ್ನ ಭುಜಬಲವು ಅವನಿಗೆ ಶಕ್ತಿಯುತ II
- Verse 22: ಸಿಗನು ಶತ್ರುವಿನ ಕುತಂತ್ರಕೆ I ಕುಗ್ಗನು ಕೆಡುಕರಾ ದರ್ಪಕೆ II
- Verse 23: ಅವನ ಶತ್ರುಗಳನು ಸದೆಬಡಿವೆನು ಅವನ ಮುಂದೆಯೆ I ಅವನ ವಿರೋಧಿಗಳನು ಹತಮಾಡುವೆನು ಅಲ್ಲಿಯೇ II
- Verse 24: ನಿನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ I ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ II
- Verse 25: ತೊರೆನದಿಗಳಿಂದ ಸಾಗರದವರೆಗೆ I ಅಧಿಕಾರ ನೀಡುವೆ ಅವನ ಕೈಗೆ II
- Verse 26: ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’ I ಇಂತೆಂದೇ ನನ್ನನು ಸಂಬೋಧಿಸುವನವನು II
- Verse 27: ಮಾಡುವೆನವನನು ಜೇಷ್ಠಪುತ್ರನನ್ನಾಗಿ I ಭೂರಾಜರುಗಳೊಳು ಅತ್ಯುನ್ನತನನ್ನಾಗಿ I
- Verse 28: ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II
- Verse 29: ಉಳಿಸುವೆನು ಅವನ ಸಂತಾನವನು ನಿರಂತರವಾಗಿ I ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ II
- Verse 30: ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು I ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು II
- Verse 31: ಮೀರಿ ನಡೆದರಾದರೆ ನನ್ನ ಶಾಸನಗಳನು I ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು II
- Verse 32: ದಂಡಿಸುವೆನವರ ದ್ರೋಹವನು ದಂಡದಿಂದ I ಶಿಕ್ಷಿಸುವೆನವರ ಅಪರಾಧವನು ಚಾಟಿಯಿಂದ II
- Verse 33: ಆದರೆ ನನ್ನೊಲವು ಅವನನ್ನು ಕೈಬಿಡದು I ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು II
- Verse 34: ಭಂಗಪಡಿಸೆನು ಎನ್ನ ಒಡಂಬಡಿಕೆಯನು I ಮೀರೆನು ನಾನವನಿಗೆ ಕೊಟ್ಟ ಮಾತನು II
- Verse 35: ಮಾಡಿರುವೆ ಪ್ರಮಾಣ ನನ್ನ ಪವಿತ್ರತೆಯ ಮೇಲೆ I ಸುಳ್ಳಾಡಲಾರೆ ದಾವೀದನಿಗೀ ವಿಷಯದ ಮೇಲೆ II
- Verse 36: ರವಿಯಂತಿರುವುದು ಎನ್ನ ಮುಂದೆ ಅವನ ಗಾದಿ I ಚಿರ ಶಾಶ್ವತವಾಗಿರುವುದು ಅವನ ಸಂತತಿ II
- Verse 37: ಅಮರವಾಗಿರುವುದು ಚಂದ್ರನಂತೆ I ಆಗಸದಾ ಪ್ರಮಾಣ ಸಾಕ್ಷಿಯಂತೆ” II
- Verse 38: ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು I ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು II
- Verse 39: ಭಂಗಪಡಿಸಿರುವೆ ದಾಸನೊಡನೆ ಮಾಡಿದ ಒಡಂಬಡಿಕೆಯನು I ಮಣ್ಣುಪಾಲಾಗಿಸಿರುವೆ ಅವನ ಪಟ್ಟದ ಆ ಕಿರೀಟವನು II
- Verse 40: ಸೀಳಿಬಿಟ್ಟಿರುವೆ ಅವನಾ ಪೌಳಿಗೋಡೆಗಳನು I ಹಾಳುಮಾಡಿಬಿಟ್ಟಿರುವೆ ಕೋಟೆಕೊತ್ತಲಗಳನು II
- Verse 41: ಸುಲಿಗೆ ಮಾಡುತಿಹರವನನು ದಾರಿಗರೆಲ್ಲರು I ಪರಿಹಾಸ್ಯಕ್ಕೆ ಈಡುಮಾಡುತಿಹರು ನೆರೆಯವರು II
- Verse 42: ಮೇಲಾಗಿಸಿರುವೆ ಅವನ ವಿರೋಧಿಗಳ ಕೈಯನು I ಉಲ್ಲಾಸಗೊಳಿಸಿರುವೆ ಅವನೆಲ್ಲಾ ವೈರಿಗಳನು II
- Verse 43: ಮೊಂಡಾಗಿಸಿರುವೆ ಅವನ ಕತ್ತಿಯ ಮೊನೆಯನು I ಕಾಳಗಕೆ ನಿಲ್ಲದಂತಾಗಿಸಿರುವೆ ಅವನನು II
- Verse 44: ಕಿತ್ತುಹಾಕಿರುವೆ ಅವನ ರಾಜದಂಡವನು I ನೆಲಕ್ಕೆ ಉರುಳಿಸಿರುವೆ ಅವನ ಸಿಂಹಾಸನವನು II
- Verse 45: ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ I ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ II
- Verse 46: ಒಡೆಯಾ, ಚಿರಮರೆಯಾಗಿರುವೆ? ಇನ್ನೆಷ್ಟರವರೆಗೆ? I ನಿನ್ನ ಕೋಪಾಗ್ನಿ ಎಡೆಬಿಡದೆ ಉರಿಯುತ್ತಿರಬೇಕೆ? II
- Verse 47: ಎಷ್ಟು ಅಲ್ಪವಾದುದೆನ್ನ ಜೀವಮಾನಕಾಲ I ಎಷ್ಟು ನಶ್ವರ ನೀ ನಿರ್ಮಿಸಿದ ಮಾನವ ಕುಲ! II
- Verse 48: ಸಾಯದೆಯೇ ಜೀವಿಸಬಲ್ಲ ನರನಾರು? I ಆ ತಳದಿಂದ ತಪ್ಪಿಸಿಕೊಳ್ಳುವವನಾರು? II
- Verse 49: ದಾವೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ? I ಗತಕಾಲದಲಿ ನೀ ತೋರಿದಚಲ ಪ್ರೀತಿಯೆಲ್ಲಿ? II
- Verse 50: ನೆನೆಸಿಕೊ ಪ್ರಭು, ನಿನ್ನ ಅಪಮಾನಿತ ಸೇವಕನನು I ಸ್ಮರಿಸಿಕೊ ಆತ ಹೊತ್ತಿರುವ ಪರರ ನಿಂದೆಯನು II
- Verse 51: ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು I ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು I ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು II
- Verse 52: ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು I ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು I ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು II