ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಲೂಕ
18ನೇ ಅಧ್ಯಾಯ
- Verse 1: ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು:
- Verse 2: “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
- Verse 3: ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು.
- Verse 4: ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ;
- Verse 5: ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.”
- Verse 6: ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾದೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ?
- Verse 7: ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ?
- Verse 8: ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?’ ಎಂದರು.
- Verse 9: ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು:
- Verse 10: “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು.
- Verse 11: ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ.
- Verse 12: ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.’
- Verse 13: ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ.
- Verse 14: “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.
- Verse 15: ಕೆಲವರು ತಮ್ಮ ಹಸುಳೆಗಳನ್ನು ಯೇಸುಸ್ವಾಮಿ ಮುಟ್ಟಿ ಹರಸಬೇಕೆಂದು ಅಲ್ಲಿಗೆ ಕರೆತಂದರು. ಇದನ್ನು ಕಂಡ ಶಿಷ್ಯರು ಅವರನ್ನು ಗದರಿಸಿದರು.
- Verse 16: ಆಗ ಯೇಸು ಆ ಹಸುಳೆಗಳನ್ನು ತಮ್ಮ ಬಳಿಗೆ ಕರೆತರಿಸಿ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ!
- Verse 17: ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ,” ಎಂದರು.
- Verse 18: ಅಧಿಕಾರಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, “ಒಳ್ಳೆಯ ಗುರುವೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು.
- Verse 19: “ನೀನು ನನ್ನನ್ನು ಒಳ್ಳೆಯವನೆಂದು ಕರೆದುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ;
- Verse 20: ದೈವಾಜ್ಞೆಗಳು ನಿನಗೆ ತಿಳಿದೇ ಇವೆ; ‘ವ್ಯಭಿಚಾರ ಮಾಡಬೇಡ, ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು’,” ಎಂದು ಯೇಸು ಅವನಿಗೆ ಉತ್ತರವಿತ್ತರು.
- Verse 21: ಅದಕ್ಕೆ ಅವನು, “ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದನು.
- Verse 22: ಇದನ್ನು ಕೇಳಿದ ಯೇಸು, “ನೀನು ಮಾಡಬೇಕಾದ ಕಾರ್ಯ ಇನ್ನೂ ಒಂದು ಉಳಿದಿದೆ; ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
- Verse 23: ಈ ಮಾತುಗಳನ್ನು ಕೇಳಿದ್ದೇ ಅವನಿಗೆ ತುಂಬ ವ್ಯಥೆಯಾಯಿತು. ಏಕೆಂದರೆ, ಅವನು ಬಹಳ ಸಿರಿವಂತನಾಗಿದ್ದನು.
- Verse 24: ಅವನು ವ್ಯಥೆಗೀಡಾದುದನ್ನು ಕಂಡ ಯೇಸು, “ಸಿರಿವಂತರಿಗೆ ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟೊಂದು ಕಷ್ಟ!
- Verse 25: ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆ ಸೂಜಿಗಣ್ಣಿನಲ್ಲಿ ನುಸುಳುವುದು ಸುಲಭ!” ಎಂದರು.
- Verse 26: ಇದನ್ನು ಕೇಳಿದವರು, “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎನ್ನಲು
- Verse 27: ಯೇಸು, “ಮಾನವರಿಗೆ ಅಸಾಧ್ಯವಾದುದು ದೇವರಿಗೆ ಸಾಧ್ಯ,” ಎಂದು ಹೇಳಿದರು.
- Verse 28: ಆಗ ಪೇತ್ರನು, “ನೋಡಿ, ನಾವು ನಮ್ಮ ಮನೆಮಾರುಗಳನ್ನು ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲಾ,” ಎಂದನು.
- Verse 29: ಅದಕ್ಕೆ ಯೇಸು, “ನಿಮಗೆ ಖಂಡಿತವಾಗಿ ಹೇಳುತ್ತೇನೆ: ಯಾವನು ದೇವರ ಸಾಮ್ರಾಜ್ಯದ ನಿಮಿತ್ತ ಮನೆಯನ್ನಾಗಲಿ, ಮಡದಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳು ಮರಿಯನ್ನಾಗಲಿ ತ್ಯಜಿಸುತ್ತಾನೋ
- Verse 30: ಅವನು ಈ ಕಾಲದಲ್ಲಿ ಅದಕ್ಕಿಂತಲೂ ಮಿಗಿಲಾದುದನ್ನೂ ಮುಂದಿನ ಲೋಕದಲ್ಲಿ ಅಮರಜೀವವನ್ನೂ ಪಡೆಯುವನು,” ಎಂದರು.
- Verse 31: ಯೇಸುಸ್ವಾಮಿ ಹನ್ನೆರಡುಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ನರಪುತ್ರನ ವಿಷಯವಾಗಿ ಪ್ರವಾದಿಗಳು ಬರೆದಿರುವುದೆಲ್ಲವೂ ನೆರವೇರುವುದು.
- Verse 32: ಆತನನ್ನು ಪರಕೀಯರ ಕೈಗೊಪ್ಪಿಸಲಾಗುವುದು; ಅವರು, ಅವನನ್ನು ಪರಿಹಾಸ್ಯ ಮಾಡುವರು, ಅಪಮಾನಪಡಿಸುವರು, ಉಗಿಯುವರು.
- Verse 33: ಕೊರಡೆಗಳಿಂದ ಹೊಡೆಯುವರು ಮತ್ತು ಕೊಂದುಹಾಕುವರು. ಆತನಾದರೋ ಮೂರನೆಯ ದಿನ ಪುನರುತ್ಥಾನ ಹೊಂದುವನು,” ಎಂದರು.
- Verse 34: ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಿಕೊಳ್ಳಲಿಲ್ಲ. ಈ ಹೇಳಿಕೆ ಅವರಿಗೆ ಒಗಟಾಗಿತ್ತು. ಎಂದೇ ಯೇಸುವಿನ ಮಾತುಗಳು ಅವರಿಗೆ ಅರ್ಥವಾಗಲಿಲ್ಲ.
- Verse 35: ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು.
- Verse 36: ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು.
- Verse 37: “ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು.
- Verse 38: ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು.
- Verse 39: ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು.
- Verse 40: ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು.
- Verse 41: ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾಮೀ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು.
- Verse 42: ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು.
- Verse 43: ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.