ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ರೋಮನರಿಗೆ
12ನೇ ಅಧ್ಯಾಯ
- Verse 1: ಆದುದರಿಂದ ಸಹೋದರರೇ, ದೇವರ ಅಪಾರ ಕೃಪೆಯನ್ನು ನಿಮ್ಮ ನೆನಪಿಗೆ ತಂದು ನಾನು ಬೇಡಿಕೊಳ್ಳುವುದೇನೆಂದರೆ: ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವವಾದ ಬಲಿಯಾಗಿ ಸಮರ್ಪಿಸಿಕೊಳ್ಳಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ.
- Verse 2: ಇಹಲೋಕದ ಆಚಾರವಿಚಾರಗಳಿಗೆ ಮಾರುಹೋಗಬೇಡಿ. ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು, ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.
- Verse 3: ದೇವರು ನನಗೆ ದಯಪಾಲಿಸಿರುವ ಸೇವೆಯ ನಿಮಿತ್ತ ನಾನು ನಿಮಗೆ ಹೇಳುವ ಬುದ್ಧಿಮಾತಿದು: ನಿಮ್ಮಲ್ಲಿ ಯಾರೂ ತನ್ನನ್ನೇ ಅತಿಯಾಗಿ ಭಾವಿಸಿಕೊಳ್ಳದಿರಲಿ. ದೇವರು ತನಗೆ ಇತ್ತಿರುವ ವಿಶ್ವಾಸದ ಪರಿಮಾಣದ ಮೇರೆಗೆ ಪ್ರತಿಯೊಬ್ಬನೂ ತನ್ನ ಬಗ್ಗೆ ಸರಿಯಾದ ಅಭಿಪ್ರಾಯ ಹೊಂದಿರಲಿ.
- Verse 4: ನಮಗಿರುವುದು ಒಂದೇ ದೇಹ. ಆದರೂ ಅದರಲ್ಲಿ ಅನೇಕ ಅಂಗಗಳಿವೆ. ಈ ಅಂಗಗಳೆಲ್ಲವೂ ತಮ್ಮದೇ ಆದ ನಿರ್ದಿಷ್ಟಕಾರ್ಯವನ್ನು ನಿರ್ವಹಿಸುತ್ತವೆ.
- Verse 5: ಅಂತೆಯೇ, ನಾವು ಅನೇಕ ಮಂದಿ ಇದ್ದರೂ ಕ್ರಿಸ್ತಯೇಸುವಿನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ಒಬ್ಬರಿಗೊಬ್ಬರು ದೇಹದ ವಿವಿಧ ಅಂಗಗಳಂತೆ ಹೊಂದಿಕೊಂಡಿದ್ದೇವೆ.
- Verse 6: ದೇವರು ಅನುಗ್ರಹಿಸಿರುವ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ನಾವು ಹೊಂದಿರುವ ವರವು ಪ್ರವಾದನೆಯ ವರವಾಗಿದ್ದರೆ ನಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಬೇಕು.
- Verse 7: ಸೇವಕನು ಸೇವೆಯಲ್ಲಿಯೂ ಬೋಧಕನು ಬೋಧಿಸುವುದರಲ್ಲಿಯೂ
- Verse 8: ಉಪದೇಶಕನು ಉಪದೇಶಿಸುವುದರಲ್ಲಿಯೂ ನಿರತನಾಗಿರಲಿ. ದಾನಮಾಡುವವನು ಧಾರಾಳವಾಗಿ ದಾನ ಮಾಡಲಿ. ಅಧಿಕಾರ ನಡೆಸುವವನು ನಿಷ್ಠೆಯಿಂದ ನಡೆಸಲಿ. ಕರುಣಾಪೂರಿತ ಕಾರ್ಯಗಳನ್ನು ಕೈಗೊಳ್ಳುವವನು ಹರ್ಷಚಿತ್ತನಾಗಿರಲಿ.
- Verse 9: ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ.
- Verse 10: ಸಹೋದರ ಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.
- Verse 11: ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ.
- Verse 12: ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ.
- Verse 13: ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿಸತ್ಕಾರದಲ್ಲಿ ತತ್ಪರರಾಗಿರಿ.
- Verse 14: ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ.
- Verse 15: ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ.
- Verse 16: ನಿಮ್ಮನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ.
- Verse 17: ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡದಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಮಾನ್ಯವೋ ಅದನ್ನೇ ಮಾಡಿರಿ.
- Verse 18: ಸಾಧ್ಯವಾದ ಮಟ್ಟಿಗೆ ಸರ್ವರೊಂದಿಗೂ ಸಮಾಧಾನದಿಂದ ಬಾಳಿರಿ.
- Verse 19: ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸಬೇಡಿ. ಅದನ್ನು ದೇವರಿಗೇ ಬಿಟ್ಟುಬಿಡಿ. ಏಕೆಂದರೆ, “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ಎಲ್ಲರಿಗೂ ತಕ್ಕ ಪ್ರತಿಫಲವನ್ನು ಕೊಡುವವನು ನಾನೇ,” ಎಂಬ ಪ್ರಭುವಿನ ವಾಕ್ಯ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
- Verse 20: ಅದಕ್ಕೆ ಬದಲು, ನಿನ್ನ ಶತ್ರು ಹಸಿದಿದ್ದರೆ ಉಣಲು ಬಡಿಸು; ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಉರಿಯುವ ಕೆಂಡಗಳನ್ನು ಸುರಿಸಿದಂತಾಗುವುದು.
- Verse 21: ಕೇಡಿಗೆ ಸೋಲದೆ, ಒಳಿತಿನಿಂದ ಕೇಡನ್ನು ಸೋಲಿಸು.