P. O. C ബൈബിള്
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
11ನೇ ಅಧ್ಯಾಯ
- Verse 1: ನಾನು ಕ್ರಿಸ್ತಯೇಸುವನ್ನು ಅನುಸರಿಸುವಂತೆ, ನೀವೂ ನನ್ನನ್ನೂ ಅನುಸರಿಸಿರಿ.
- Verse 2: ನೀವು ಸದಾ ನನ್ನನ್ನು ಸ್ಮರಿಸಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಸಾಂಪ್ರದಾಯಿಕ ರೀತಿನೀತಿಗಳನ್ನು ಸರಿಯಾಗಿ ಪಾಲಿಸಿಕೊಂಡು ಬರುತ್ತಿದ್ದೀರಿ; ಇದಕ್ಕಾಗಿ ನಿಮ್ಮನ್ನು ಮೆಚ್ಚುತ್ತೇನೆ.
- Verse 3: ಒಂದು ವಿಷಯ ನಿಮಗೆ ತಿಳಿದಿರಲಿ. ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಸ್ತಯೇಸುವೇ ಶಿರಸ್ಸು. ಪ್ರತಿಯೊಬ್ಬ ಸ್ತ್ರೀಗೂ ಪುರುಷನೇ ಶಿರಸ್ಸು. ಕ್ರಿಸ್ತೇಸುವಿಗೆ ದೇವರೇ ಶಿರಸ್ಸು.
- Verse 4: ಪುರುಷನು ತಲೆಯ ಮೇಲೆ ಮುಸುಕು ಹಾಕಿಕೊಂಡು ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಕ್ರಿಸ್ತಯೇಸುವಿಗೆ ಅವಮಾನ ತರುತ್ತಾನೆ.
- Verse 5: ಸ್ತ್ರೀಯು ತಲೆಯ ಮೇಲೆ ಮುಸುಕು ಹಾಕದೆ ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಪತಿಗೆ ಅವಮಾನ ತರುತ್ತಾಳೆ. ಮುಸುಕು ಹಾಕದ ಸ್ತ್ರೀ ತಲೆಯನ್ನು ಮುಂಡನ ಮಾಡಿಸಿಕೊಂಡಂತೆಯೇ.
- Verse 6: ಹಾಗೆ ಮುಸುಕು ಹಾಕದ ಸ್ತ್ರೀ ತನ್ನ ತಲೆಗೂದಲನ್ನು ತೆಗೆದುಬಿಡಲಿ. ಸ್ತ್ರೀಗೆ ತಲೆಗೂದಲನ್ನು ಕತ್ತರಿಸುವುದಾಗಲಿ, ಬೋಳಿಸುವುದಾಗಲಿ ಲಜ್ಜಾಸ್ಪದವಾಗಿದ್ದರೆ, ಆಕೆ ತಲೆಗೆ ಮುಸುಕು ಹಾಕಿಕೊಳ್ಳಲಿ.
- Verse 7: ಪುರುಷನು ತಲೆಯ ಮೇಲೆ ಮುಸುಕುಹಾಕಬೇಕಾಗಿಲ್ಲ. ಏಕೆಂದರೆ, ಅವನು ದೇವರ ರೂಪ ಹಾಗೂ ಅವರ ಮಹಿಮೆಯ ಪ್ರತಿಬಿಂಬ. ಸ್ತ್ರೀಯಾದರೋ, ಪುರುಷನ ಮಹಿಮೆಯ ಪ್ರತಿಬಿಂಬ.
- Verse 8: ಸ್ತ್ರೀಯಿಂದ ಪುರುಷನಲ್ಲ; ಪುರುಷನಿಂದ ಸ್ತ್ರೀ ಉತ್ಪತ್ತಿ ಆದಳು.
- Verse 9: ಅಂತೆಯೇ ಸ್ತ್ರೀಗಾಗಿ ಪುರುಷನಲ್ಲ; ಪುರುಷನಿಗಾಗಿ ಸ್ತ್ರೀ ಸೃಷ್ಟಿಯಾದಳು.
- Verse 10: ಹೀಗೆ ದೇವದೂತರ ಸಲುವಾಗಿಯಾದರೂ ಸ್ತ್ರೀಯು ಗೌರವ ಸೂಚಿಸಲು ಮುಸುಕನ್ನು ಹಾಕಬೇಕು.
- Verse 11: ಆದರೂ ಪ್ರಭುವಿನ ಮಟ್ಟಿಗೆ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀ ಇಲ್ಲದೆ ಪುರುಷನೂ ಇಲ್ಲ.
- Verse 12: ಏಕೆಂದರೆ ಸ್ತ್ರೀ ಪುರುಷನಿಂದ ಉತ್ಪತ್ತಿಯಾದಂತೆ ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಸಮಸ್ತವೂ ದೇವರಿಂದ ಹುಟ್ಟುತ್ತದೆ.
- Verse 13: ಸ್ತ್ರೀ ಮುಸುಕಿಲ್ಲದೆ ದೇವರನ್ನು ಪ್ರಾರ್ಥಿಸುವುದು ಲಕ್ಷಣವೇ? ನೀವೇ ತೀರ್ಮಾನಿಸಿರಿ.
- Verse 14: ಉದ್ದ ಕೂದಲು ಪುರುಷನಿಗೆ ಲಜ್ಜಾಸ್ಪದವೆಂಬುದೂ ನೀಳಕೂದಲು ಸ್ತ್ರೀಗೆ ಭೂಷಣವೆಂಬುದೂ ಸ್ವಭಾವಸಿದ್ಧವಲ್ಲವೇ? ಕೇಶರಾಶಿ ಸ್ತ್ರೀಗೆ ರಕ್ಷಾವರಣವಲ್ಲವೇ?
- Verse 15: ಉದ್ದ ಕೂದಲು ಪುರುಷನಿಗೆ ಲಜ್ಜಾಸ್ಪದವೆಂಬುದೂ ನೀಳಕೂದಲು ಸ್ತ್ರೀಗೆ ಭೂಷಣವೆಂಬುದೂ ಸ್ವಭಾವಸಿದ್ಧವಲ್ಲವೇ? ಕೇಶರಾಶಿ ಸ್ತ್ರೀಗೆ ರಕ್ಷಾವರಣವಲ್ಲವೇ?
- Verse 16: ಇದರ ಬಗ್ಗೆ ಯಾರಾದರೂ ತರ್ಕಿಸಿದರೆ ಅಂಥವನಿಗೆ ಇದು ತಿಳಿದಿರಲಿ: ಇಂಥ ಪದ್ಧತಿ ನಮ್ಮಲ್ಲಿ ಇಲ್ಲ: ಇನ್ನಾವ ಧರ್ಮಸಭೆಗಳಲ್ಲೂ ಇಲ್ಲ.
- Verse 17: ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ.
- Verse 18: ಮೊದಲನೆಯದಾಗಿ, ನೀವು ಸೇರುವ ಸಭೆಯಲ್ಲಿ ಪಂಗಡಗಳಿವೆಯಂತೆ. ಸ್ವಲ್ಪಮಟ್ಟಿಗಾದರೂ ಈ ಸಮಾಚಾರ ನಿಜವೆಂದು ನನಗನ್ನಿಸುತ್ತದೆ.
- Verse 19: ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗಿರುವಾಗಲೇ ಪ್ರಾಮಾಣಿಕರು ಯಾರೆಂದು ಕಂಡುಕೊಳ್ಳಲು ಸಾಧ್ಯ.
- Verse 20: ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ.
- Verse 21: ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ; ಇನ್ನೊಬ್ಬನು ಕುಡಿದು ಮತ್ತನಾಗುತ್ತಾನೆ.
- Verse 22: ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲೀ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ.
- Verse 23: ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ: ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು
- Verse 24: ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು.
- Verse 25: ಅಂತೆಯೇ ಭೋಜನದ ಕೊನೆಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು.
- Verse 26: ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
- Verse 27: ಯಾರಾದರೂ ಅಯೋಗ್ಯವಾಗಿ ಈ ರೊಟ್ಟಿಯನ್ನು ಭುಜಿಸಿದರೆ, ಅಥವಾ ಪ್ರಭುವಿನ ಪಾತ್ರೆಯಿಂದ ಪಾನಮಾಡಿದರೆ ಅವನು ಪ್ರಭುವಿನ ಶರೀರಕ್ಕೂ ರಕ್ತಕ್ಕೂ ದ್ರೋಹವೆಸಗುತ್ತಾನೆ.
- Verse 28: ಪ್ರತಿಯೊಬ್ಬನೂ ಮೊಟ್ಟಮೊದಲು ತನ್ನನ್ನು ಪರಿಶೋಧಿಸಿಕೊಂಡು ಅನಂತರ ಆ ರೊಟ್ಟಿಯನ್ನು ಭುಜಿಸಲಿ; ಮತ್ತು ಆ ಪಾತ್ರೆಯಿಂದ ಪಾನಮಾಡಲಿ.
- Verse 29: ಏಕೆಂದರೆ, ಅದು ಪ್ರಭುವಿನ ಶರೀರವೆಂದು ಪರಿಗ್ರಹಿಸದೆ, ಭುಜಿಸಿ ಪಾನಮಾಡುವಾತನು ನ್ಯಾಯತೀರ್ಪನ್ನು ತನ್ನ ಮೇಲೆ ಬರಮಾಡಿಕೊಳ್ಳುವುದಕ್ಕಾಗಿಯೇ ತಿನ್ನುತ್ತಾನೆ, ಕುಡಿಯುತ್ತಾನೆ.
- Verse 30: ನಿಮ್ಮಲ್ಲಿ ಅನೇಕರು ಈ ಕಾರಣದಿಂದಲೇ ದುರ್ಬಲರು, ಅಸ್ವಸ್ಥರು ಆಗಿದ್ದೀರಿ; ಮತ್ತು ಎಷ್ಟೋಮಂದಿ ಸತ್ತಿದ್ದಾರೆ.
- Verse 31: ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನಾವು ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ.
- Verse 32: ಹಾಗೇನಾದರೂ ಪ್ರಭುವಿನ ವಿಚಾರಣೆಗೆ ನಾವು ಒಳಪಟ್ಟರೆ ಅವರು ನಮ್ಮನ್ನು ದಂಡಿಸಿ ತಿದ್ದುತ್ತಾರೆ. ಪ್ರಪಂಚದೊಂದಿಗೆ ನಾವು ತಪ್ಪಿತಸ್ಥರಾಗದಂತೆ ಮಾಡುತ್ತಾರೆ.
- Verse 33: ಆದ್ದರಿಂದ ಪ್ರಿಯ ಸಹೋದರರೇ, ಪ್ರಭುವಿನ ಭೋಜನಕ್ಕಾಗಿ ನೀವು ಒಂದಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.
- Verse 34: ನೀವು ಹಸಿವು ನೀಗಿಸಿಕೊಳ್ಳುವುದಕ್ಕಾಗಿ ಸಭೆಗೆ ಬರುವುದಾದರೆ ಮನೆಯಲ್ಲೇ ಊಟಮಾಡಿ. ಆಗ ಸಭೆಸೇರಿ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. ಇನ್ನುಳಿದ ವಿಷಯಗಳನ್ನು ನಾನು ಬಂದು ಇತ್ಯರ್ಥ ಮಾಡುತ್ತೇನೆ.