P. O. C ബൈബിള്
ಹೊಸ ಒಡಂಬಡಿಕೆ
1 ತಿಮೊಥೇಯನಿಗೆ
4ನೇ ಅಧ್ಯಾಯ
- Verse 1: ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೆ ಬಲಿಬಿದ್ದು, ದುರಾತ್ಮಗಳ ದುರುಪದೇಶಗಳಿಗೆ ಕಿವಿಗೊಟ್ಟು ವಿಶ್ವಾಸಭ್ರಷ್ಟರಾಗುವರೆಂದು ಪವಿತ್ರಾತ್ಮ ಸ್ಪಷ್ಟವಾಗಿ ತಿಳಿಸಿದ್ದಾರೆ.
- Verse 2: ಕಪಟಿಗಳು ದುರ್ಬೋಧನೆಗಳನ್ನು ಪ್ರಸರಿಸುತ್ತಾರೆ. ಬರೆಹಾಕಿದ ಚರ್ಮದಂತೆ ಅವರ ಮನಸ್ಸಾಕ್ಷಿಯು ಸುಟ್ಟುಹೋಗಿದೆ.
- Verse 3: ಮದುವೆಯಾಗಬಾರದು, ಇಂತಿಂಥ ಆಹಾರವನ್ನು ಸೇವಿಸಬಾರದು ಎಂದು ಬೋಧಿಸುತ್ತಾರೆ. ಆದರೆ ಸತ್ಯವನ್ನು ಅರಿತು ಯಾರು ವಿಶ್ವಾಸಿಗಳಾಗಿದ್ದಾರೋ ಅಂಥವರು ಎಲ್ಲ ಆಹಾರಪದಾರ್ಥಗಳನ್ನು ಕೃತಜ್ಞತಾಸ್ತುತಿಯೊಡನೆ ಸೇವಿಸಲೆಂದೇ ದೇವರು ಅವುಗಳನ್ನು ಸೃಷ್ಟಿಸಿದ್ದಾರೆ.
- Verse 4: ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದೇ. ಅವರಿಗೆ ಸ್ತುತಿಸಲ್ಲಿಸಿ ಸ್ವೀಕರಿಸಿದ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.
- Verse 5: ಏಕೆಂದರೆ, ದೇವರ ವಾಕ್ಯದಿಂದಲೂ ನಮ್ಮ ಪ್ರಾರ್ಥನೆಯಿಂದಲೂ ಅದು ಪಾವನಗೊಳ್ಳುತ್ತದೆ.
- Verse 6: ಈ ವಿಷಯಗಳನ್ನೆಲ್ಲಾ ಇತರ ಸಹೋದರರಿಗೆ ನೀನು ವಿವರಿಸುವವನಾದರೆ, ನೀನು ಕ್ರಿಸ್ತಯೇಸುವಿನ ಯೋಗ್ಯ ದಾಸನಾಗುವೆ, ನೀನು ಅನುಸರಿಸುತ್ತಾ ಬಂದಿರುವ ಸದ್ಬೋಧನೆಯಿಂದಲೂ ವಿಶ್ವಾಸದಿಂದಲೂ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುವೆ.
- Verse 7: ಪ್ರಾಪಂಚಿಕ ಹಾಗೂ ತಿರುಳಿಲ್ಲದ ಕಟ್ಟುಕತೆಗಳನ್ನು ತಳ್ಳಿಬಿಟ್ಟು, ನಿನ್ನ ಭಕ್ತಿಯನ್ನು ವೃದ್ಧಿಮಾಡಿಕೋ.
- Verse 8: ಅಂಗಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾದುದು; ಭಕ್ತಿಸಾಧನೆಯಾದರೋ ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನಕರವಾದುದು. ಭಕ್ತಿಸಾಧನೆಯಿಂದ ಇಹಪರಗಳೆರಡರಲ್ಲೂ ನಿತ್ಯಜೀವವನ್ನು ಪಡೆಯುವ ಭರವಸೆ ನಮಗಿದೆ.
- Verse 9: ಈ ಉಪದೇಶ ಸತ್ಯವಾದುದು ಹಾಗೂ ನಂಬಲರ್ಹವಾದುದು; ಎಲ್ಲರ ಅಂಗೀಕಾರಕ್ಕೂ ಯೋಗ್ಯವಾದುದು.
- Verse 10: ಸಕಲ ಮಾನವರ, ವಿಶೇಷವಾಗಿ ಕ್ರೈಸ್ತವಿಶ್ವಾಸಿಗಳ, ಉದ್ಧಾರಕರಾದ ಜೀವಸ್ವರೂಪ ದೇವರಲ್ಲಿಯೇ ನಾವು ಭರವಸೆಯಿಟ್ಟಿದ್ದೇವೆ; ಅದಕ್ಕಾಗಿಯೇ ನಾವು ಹೋರಾಡುತ್ತೇವೆ ಹಾಗೂ ಶ್ರಮಿಸುತ್ತೇವೆ.
- Verse 11: ಈ ಅಂಶಗಳನ್ನು ಆಜ್ಞಾಪಿಸಿ ಬೋಧಿಸು.
- Verse 12: ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳಿಗೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು.
- Verse 13: ನಾನು ಬರುವವರೆಗೂ ಪವಿತ್ರಗ್ರಂಥವನ್ನು ಪಠಿಸುವುದರಲ್ಲೂ ಪ್ರಬೋಧಿಸುವುದರಲ್ಲೂ ಉಪದೇಶಿಸುವುದರಲ್ಲೂ ಆಸಕ್ತನಾಗಿರು.
- Verse 14: ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?
- Verse 15: ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು;
- Verse 16: ಇವುಗಳಲ್ಲೇ ಮಗ್ನನಾಗಿರು. ಇದರಿಂದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.