ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
35ನೇ ಅಧ್ಯಾಯ
- Verse 1: ಮೋಶೆ ಇಸ್ರಯೇಲರ ಸಮಾಜವನ್ನೆಲ್ಲ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಸರ್ವೇಶ್ವರ ಹೀಗೆ ಆಜ್ಞಾಪಿಸಿದ್ದಾರೆ:
- Verse 2: ಆರು ದಿನಗಳು ದುಡಿಯಬೇಕು. ಏಳನೆಯ ದಿನ ಪರಿಶುದ್ಧವಾದ ದಿನ. ಅದು ಸರ್ವೇಶ್ವರನಿಗೆ ಮೀಸಲಾದ ಸಬ್ಬತ್ ದಿನ. ಆದ್ದರಿಂದ ನೀವು ಸಂಪೂರ್ಣವಾಗಿ ದುಡಿಮೆ ನಿಲ್ಲಿಸಬೇಕು. ಆ ದಿನ ದುಡಿಯುವವನಿಗೆ ಮರಣದಂಡನೆಯಾಗಬೇಕು.
- Verse 3: ನೀವು ವಾಸಿಸುವ ಯಾವ ಮನೆಯಲ್ಲೇ ಆಗಲಿ, ಸಬ್ಬತ್ ದಿನದಂದು ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
- Verse 4: ಮೋಶೆ ಇಸ್ರಯೇಲರ ಇಡೀ ಸಮಾಜವನ್ನು ಉದ್ದೇಶಿಸಿ: “ಸರ್ವೇಶ್ವರನ ಆಜ್ಞೆ ಇದು: ನೀವು ನಿಮ್ಮ ನಿಮ್ಮ ಆಸ್ತಿಪಾಸ್ತಿಯಿಂದ ಸರ್ವೇಶ್ವರನಿಗೆ ಕಾಣಿಕೆಯನ್ನು ಕೊಡಬೇಕು. ಮನಃಪೂರ್ವಕವಾಗಿ ಕೊಡಬೇಕು. ಸರ್ವೇಶ್ವರನಿಗೆ ತರಬೇಕಾದಂಥ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ,
- Verse 5: ನೀಲಿ, ಊದ, ಕಡುಗೆಂಪುವರ್ಣಗಳುಳ್ಳ ದಾರಗಳು,
- Verse 6: ನಯವಾದ ನಾರುಬಟ್ಟೆಗಳು, ಆಡುಕೂದಲಿನ ಬಟ್ಟೆಗಳು,
- Verse 7: ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲು ಹಂದಿಯ ತೊಗಲುಗಳು, ಜಾಲೀಮರ,
- Verse 8: ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಹಾಗು ಪರಿಮಳಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳು
- Verse 9: ಮಹಾಯಾಜಕನ ಕವಚಕ್ಕೆ ಬೇಕಾದ ರತ್ನಗಳು ಮತ್ತು ವಕ್ಷಪದಕದಲ್ಲಿ ಖಚಿಸಬೇಕಾದ ನಾನಾ ರತ್ನಗಳು.
- Verse 10: “ನಿಮ್ಮಲ್ಲಿರುವ ಶಿಲ್ಪಕಾರರೆಲ್ಲರು ಬಂದು ಸರ್ವೇಶ್ವರನು ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು.
- Verse 11: ಅವರು ಮಾಡಬೇಕಾದುವುಗಳು ಇವು: ದೇವದರ್ಶನದ ಗುಡಾರ,
- Verse 12: ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು, ಕೃಪಾಸನ, ಅದನ್ನು ಮರೆಮಾಡುವ ತೆರೆ,
- Verse 13: ಮೇಜು, ಅದರ ಗದ್ದಿಗೆಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ಕಾಣಿಕೆಯ ರೊಟ್ಟಿಗಳು,
- Verse 14: ದೀಪವೃಕ್ಷ ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ಧೂಪವೇದಿಕೆ, ಅದರ ಗದ್ದಿಗೆಗಳು,
- Verse 15: ಅಭಿಷೇಕ ತೈಲ, ಪರಿಮಳ ದ್ರವ್ಯ, ಗುಡಾರದ ಬಾಗಿಲಿನ ಪರದೆ,
- Verse 16: ಬಲಿಪೀಠ, ಅದರ ತಾಮ್ರದ ಜಾಳಿಗೆ, ಗದ್ದಿಗೆಗಳು, ಉಪಕರಣಗಳು, ನೀರಿನ ತೊಟ್ಟಿ, ಅದರ ಪೀಠ, ಅಂಗಳದ ತೆರೆಗಳು, ಕಂಬಗಳು,
- Verse 17: ಗದ್ದಿಗೆ ಕಲ್ಲುಗಳು,
- Verse 18: ಅಂಗಳದ ಬಾಗಿಲಿನ ಪರದೆ, ಗುಡಾರದ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು,
- Verse 19: ಪವಿತ್ರಸ್ಥಾನದ ಸೇವೆಗೆ ಸುಂದರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೆ ಹಾಗು ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳು.”
- Verse 20: ಇದಾದ ಮೇಲೆ ಇಸ್ರಯೇಲರ ಸಮಾಜದವರೆಲ್ಲರು ಮೋಶೆಯ ಹತ್ತಿರದಿಂದ ಹೊರಟುಹೋದರು.
- Verse 21: ಅವರಲ್ಲಿ ಉದಾರ ಹೃದಯಿಗಳು ಸ್ವಂತ ಇಷ್ಟದಿಂದ ಮುಂದೆ ಬಂದು ದೇವದರ್ಶನದ ಗುಡಾರದ ಕೆಲಸಕ್ಕೂ, ಅದರ ಸಮಸ್ತ ಸೇವೆಗೂ ಹಾಗೂ ದೀಕ್ಷಾವಸ್ತ್ರಗಳಿಗೂ ಬೇಕಾದುವುಗಳನ್ನು ಸರ್ವೇಶ್ವರನಿಗೆ ಕಾಣಿಕೆಯಾಗಿ ತಂದರು.
- Verse 22: ಹೆಂಗಸರು ಹಾಗು ಗಂಡಸರು ಧಾರಾಳ ಮನಸ್ಸಿನಿಂದ ಸರ್ವೇಶ್ವರನಿಗೆ ಚಿನ್ನದ ಕಾಣಿಕೆಗಳನ್ನು, ಅಂದರೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
- Verse 23: ಯಾರಲ್ಲಿ ನೀಲಿ, ಧೂಮ, ಹಾಗು ರಕ್ತವರ್ಣಗಳುಳ್ಳ ದಾರಗಳು, ನಯವಾದ ನಾರುಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲು ಹಾಗು ಕಡಲುಹಂದಿಯ ತೊಗಲು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
- Verse 24: ಯಾರಲ್ಲಿ ಬೆಳ್ಳಿ ಇಲ್ಲವೆ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಸರ್ವೇಶ್ವರನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.
- Verse 25: ನಿಪುಣೆಯರಾದ ಮಹಿಳೆಯರು ತಮ್ಮ ಕೈಗಳಿಂದ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ನೂಲನ್ನು ಹಾಗು ನಯವಾದ ನಾರಿನ ನೂಲನ್ನು ನೇಯ್ದು ಆ ನೂಲುಗಳನ್ನು ತಂದುಕೊಟ್ಟರು.
- Verse 26: ನಿಪುಣೆಯರಾದ ಬೇರೆ ಮಹಿಳೆಯರು ಆಡಿನ ತುಪ್ಪಟವನ್ನು ನೇಯ್ದು ತಂದುಕೊಟ್ಟರು.
- Verse 27: ಜನನಾಯಕರು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ವಕ್ಷ ಕವಚದಲ್ಲಿ ಖಚಿಸಬೇಕಾದ ರತ್ನಗಳನ್ನು,
- Verse 28: ದೀಪಕ್ಕೆ ಬೇಕಾದ ಎಣ್ಣೆಯನ್ನು, ಅಭಿಷೇಕ ತೈಲಕ್ಕೆ ಮತ್ತು ಪರಿಮಳ ಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳನ್ನು ತಂದುಕೊಟ್ಟರು.
- Verse 29: ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದ ಎಲ್ಲ ಕೆಲಸಕಾರ್ಯಗಳಿಗೆ ಬೇಕಾದವುಗಳನ್ನು ಇಸ್ರಯೇಲಿನ ಸ್ತ್ರೀಪುರುಷರೆಲ್ಲರು ಹೃದಯಪೂರ್ವಕವಾಗಿಯೇ ತಂದೊಪ್ಪಿಸಿದರು.
- Verse 30: ಮೋಶೆ ಇಸ್ರಯೇಲರಿಗೆ ಹೀಗೆಂದನು: “ಸರ್ವೇಶ್ವರ ಸ್ವಾಮಿ ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನೆಂಬುವನನ್ನು ಹೆಸರಿಸಿ ಆಯ್ಕೆ ಮಾಡಿದ್ದಾರೆ. ನಯನವಿರಾದ ಕೆಲಸಗಳನ್ನು ನಿಯೋಜಿಸುವುದಕ್ಕೂ,
- Verse 31: ಚಿನ್ನ, ಬೆಳ್ಳಿ, ತಾಮ್ರಗಳಿಂದ ಕೆಲಸ ನಡೆಸುವುದಕ್ಕೂ, ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ವಿಚಿತ್ರ ಕೆತ್ತನೆ ಕೆಲಸ ಮಾಡುವುದಕ್ಕೂ
- Verse 32: ಬೇರೆ ವಿವಿಧ ಶೃಂಗಾರದ ಕೆಲಸ ಮಾಡುವುದಕ್ಕೂ ಅವನನ್ನು ಆರಿಸಿಕೊಂಡಿದ್ದಾರೆ.
- Verse 33: ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು ಬೇಕಾದ ಜ್ಞಾನ, ವಿದ್ಯೆ, ವಿವೇಕ ಇವುಗಳನ್ನೂ ಸಕಲ ಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದಾರೆ.
- Verse 34: ಅದೂ ಅಲ್ಲದೆ, ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೆ ಮತ್ತು ದಾನ್ಕುಲದ ಅಹೀಸಾಮಾಕನ ಮಗ ಒಹೋಲೀಯಾಬನಿಗೆ ವಿಶೇಷ ವರವನ್ನು ಕೊಟ್ಟಿದ್ದಾರೆ.
- Verse 35: ಶಿಲ್ಪಿಗಳು, ಚಮತ್ಕಾರವಾದ ಕೆಲಸ ನಿಯೋಜಿಸುವವರು ಹಾಗು ನೀಲಿ, ಊದ ಹಾಗು ಕಡುಗೆಂಪು ವರ್ಣದ ದಾರದಿಂದಲೂ ನಯವಾದ ನಾರುಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲ ಕಸುಬುದಾರರು ನಡೆಸುವ ಕೆಲಸಗಳನ್ನು ನಿಯೋಜಿಸುವುದಕ್ಕೂ ಹಾಗು ಕಾರ್ಯಗತ ಮಾಡುವುದಕ್ಕೂ ಸರ್ವೇಶ್ವರ ಅವರಿಗೆ ಜ್ಞಾನವನ್ನು ಪೂರ್ತಿಯಾಗಿ ಅನುಗ್ರಹಿಸಿದ್ದಾರೆ.