P. O. C ബൈബിള്
ಹಳೆಯ ಒಡಂಬಡಿಕೆ
ಯಾಜಕಕಾಂಡ
11ನೇ ಅಧ್ಯಾಯ
- Verse 1: ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಹೀಗೆಂದು ಆಜ್ಞಾಪಿಸಿದರು:
- Verse 2: “ನೀವು ಇಸ್ರಯೇಲರಿಗೆ ತಿಳಿಸಬೇಕಾದ ವಿಷಯಗಳು ಇವು -
- Verse 3: ಭೂಮಿಯ ಮೇಲಿರುವ ಚತುಷ್ಪಾದ ಪ್ರಾಣಿಗಳಲ್ಲಿ ಈ ಕೆಳಕಂಡವುಗಳ ಮಾಂಸವನ್ನು ನೀವು ತಿನ್ನಬಹುದು: ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.
- Verse 4: ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ ಒಂಟೆ ಮೆಲುಕುಹಾಕುವಂಥದ್ದಾದರೂ ಅದಕ್ಕೆ ಸೀಳು ಗೊರಸು ಇಲ್ಲ. ಆದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದು ತಿಳಿಯಬೇಕು.
- Verse 5: (ಬಿಲದ ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳು ಗೊರಸು ಇಲ್ಲವಾದ್ದರಿಂದ ಅದು ನಿಮಗೆ ಅಶುದ್ಧ.
- Verse 6: ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದು ನಿಮಗೆ ಅಶುದ್ಧ.)
- Verse 7: ಹಂದಿಯ ಗೊರಸು ಸೀಳಿದೆ. ಆದರೂ ಅದು ಮೆಲುಕು ಹಾಕುವುದಿಲ್ಲ. ಆದ್ದರಿಂದ ಅದು ನಿಮಗೆ ಅಶುದ್ಧ.
- Verse 8: ಇಂಥವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣವನ್ನು ಮುಟ್ಟಬಾದರು. ಅವುಗಳನ್ನು ಅಶುದ್ಧವೆಂದೆಣಿಸಬೇಕು.
- Verse 9: ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ - ಸಮುದ್ರದಲ್ಲಿಯಾಗಲಿ, ನದಿಯಲ್ಲಿಯಾಗಲಿ, ಬೇರೆ ಜಲಾಶಯದಲ್ಲಿಯಾಗಲಿ, ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು.
- Verse 10: ಆದರೆ ಸಮುದ್ರದಲ್ಲಿದ್ದರೂ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಪರೆಪರೆಯಾದ ಮೈಯೂ ಇರುವುದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು.
- Verse 11: ಅಂಥವು ಸಂಪೂರ್ಣವಾಗಿ ನಿಷಿದ್ಧವಾಗಿರುವುದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಹೇಯವಾಗಿರಬೇಕು.
- Verse 12: ಜಲಜಂತುಗಳಲ್ಲಿ ಯಾವುದಕ್ಕೆ ರೆಕ್ಕೆಗಳೂ ಪರೆಪರೆಯಾದ ಮೈಯೂ ಇಲ್ಲವೋ ಅವು ನಿಮಗೆ ಹೇಯವಾಗಿರಬೇಕು.
- Verse 13: ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವು; ಗರುಡ, ಬೆಟ್ಟದ ಹದ್ದು,
- Verse 14: ಕ್ರೌಂಚ, ಹದ್ದು,
- Verse 15: ಸಕಲ ವಿಧವಾದ ಗಿಡಗ, ಎಲ್ಲಾ ವಿಧವಾದ ಕಾಗೆ,
- Verse 16: ಉಷ್ಟ್ರಪಕ್ಷಿ, ಉಲೂಕ, ಕಡಲ ಹಕ್ಕಿ,
- Verse 17: ಸಕಲ ವಿಧವಾದ ಡೇಗೆ, ಗೂಬೆ, ಹೆಗ್ಗೂಬೆ, ಕರೇಟು,
- Verse 18: ಚೀಲಮೂಗಿ, ರಣಹದ್ದು, ನೀರು ಕಾಗೆ, ಕೊಕ್ಕರೆ,
- Verse 19: ಎಲ್ಲ ವಿಧವಾದ ಬಕ, ಹೆಡೆ ಹಕ್ಕಿ, ಕಣ್ಣಕಪಡಿ, ಇವುಗಳ ಮಾಂಸವನ್ನು ತಿನ್ನಬಾರದು; ಇವು ಹೇಯವಾಗಿರಬೇಕು.
- Verse 20: ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
- Verse 21: ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವುದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು.
- Verse 22: ಸಕಲವಿಧವಾದ ಮಿಡತೆಗಳನ್ನೂ, ಬೋಳ ಮಿಡತೆಗಳನ್ನೂ, ಜಿಟ್ಟಿ ಮಿಡತೆಗಳನ್ನೂ, ಸಣ್ಣ ಮಿಡತೆಗಳನ್ನೂ ಇವುಗಳನ್ನೆಲ್ಲಾ ತಿನ್ನಬಹುದು.
- Verse 23: ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲ ವಿಧವಾದ ಕ್ರಿಮಿಕೀಟಗಳು ನಿಮಗೆ ನಿಷಿದ್ಧವು.
- Verse 24: ಇದಲ್ಲದೆ ಈ ಕೆಳಗೆ ಹೇಳಿರುವ ಜಂತುಗಳಿಂದ ನಿಮಗೆ ಅಪವಿತ್ರತೆಯುಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
- Verse 25: ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು, ಮತ್ತು ಸಾಂಯಂಕಾಲದವರೆಗೂ ಅಶುದ್ಧನಾಗಿರುವನು.
- Verse 26: ಅವು ಯಾವುವೆಂದರೆ, ಯಾವ ಪ್ರಾಣಿ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳು ಯಾವನಿಗೆ ಸೋಂಕುವುವೋ ಅವನು ಅಶುದ್ಧನಾಗುವನು.
- Verse 27: ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವುವುಗಳೆಲ್ಲಾ ನಿಮಗೆ ಅಶುದ್ಧವಾಗಿರುವುವು. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
- Verse 28: ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ.
- Verse 29: ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ಇವು ನಿಮಗೆ ಅಶುದ್ಧವಾಗಿರಬೇಕು: ಯಾವುವೆಂದರೆ - ಮುಂಗುಸಿ, ಇಲಿ, ಸಕಲವಿಧವಾದ ಉಡ, ಹಾವುರಾಣಿ,
- Verse 30: ಊಸುರುವಳ್ಳಿ, ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ.
- Verse 31: ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವು ಯಾರಿಗೆ ಸೋಂಕುವುದೋ ಅವರು ಸಾಯಂಕಾಲದವರೆಗೂ ಅಶುದ್ಧರಾಗಿರುವರು.
- Verse 32: ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತು ಅಶುದ್ಧವಾಗಿರುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಗೋಣಿಯಾಗಲಿ ಅದು ಎಂಥದಾದರೂ ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಸಾಯಂಕಾಲದವರೆಗೂ ಅಶುದ್ಧವಾಗಿರುವುದು; ತರುವಾಯ ಶುದ್ಧಿಯಾಗುವುದು.
- Verse 33: ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವುದೆಲ್ಲಾ ಅಶುದ್ಧವಾಗಿರುವುದು. ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು.
- Verse 34: ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದದ್ದಾಗಿದ್ದರೆ ಅಶುದ್ಧವಾಗುವುದು. ಪಾನದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವುದು.
- Verse 35: ಆ ಜಂತುಗಳ ಹೆಣ ಯಾವ ವಸ್ತುಗಳ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗುವುದು. ಒಲೆಗಳಲ್ಲಿ ಅದು ಒಂಟಿ ಒಲೆಯಾಗಿದ್ದರೂ ಜೋಡಿ ಒಲೆಯಾಗಿದ್ದರೂ ಅದು ಅಶುದ್ಧವಾದುದರಿಂದ ಅದನ್ನು ಒಡೆದುಬಿಡಬೇಕು. ಅದು ಅಶುದ್ಧವೇ.
- Verse 36: ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು.
- Verse 37: ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವುದಿಲ್ಲ.
- Verse 38: ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ.
- Verse 39: ಆಹಾರಕ್ಕೆ ಯೋಗ್ಯವಾಗಿರುವ ಪ್ರಾಣಿ ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
- Verse 40: ಆ ಹೆಣದಲ್ಲಿ ಸ್ವಲ್ಪ ತಿಂದವನು ಸಹ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
- Verse 41: ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೆಲ್ಲಾ ಹೇಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು.
- Verse 42: ಹೊಟ್ಟೆಯಿಂದ ನಡೆಯುವಂಥದನ್ನೂ ಕಾಲಿನಿಂದ ಹರಿದಾಡುವಂಥದನ್ನೂ ಬಹಳ ಕಾಲುಳ್ಳದ್ದನ್ನೂ ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನೂ ನೀವು ತಿನ್ನಬಾರದು; ಅವು ಹೇಯವಾಗಿವೆ.
- Verse 43: ನೀವು ಅಂತ ಯಾವ ಸಣ್ಣ ಜೀವಿಯನ್ನೂ ತಿಂದು ನಿಮ್ಮನ್ನು ನೀವೇ ಹೇಸಿಕೆಮಾಡಿಕೊಂಡು ಅಶುದ್ಧರಾಗಬಾರದು.
- Verse 44: ಏಕೆಂದರೆ ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.
- Verse 45: ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದ ಸರ್ವೇಶ್ವರ ನಾನು; ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.
- Verse 46: ಇದೇ ಪಶು, ಪಕ್ಷಿ, ಜಲಚರ ಹಾಗು ಕ್ರಿಮಿಕೀಟಗಳ ವಿಷಯವಾದ ವಿಧಿ.
- Verse 47: ಇದರಿಂದ ಶುದ್ಧಾಶುದ್ಧಗಳನ್ನೂ, ಭಕ್ಷ್ಯಾಭಕ್ಷ್ಯಗಳನ್ನೂ ವಿವೇಚಿಸುವುದಕ್ಕೆ ನಿಮ್ಮಿಂದಾಗುವುದು