P. O. C ബൈബിള്
ಹಳೆಯ ಒಡಂಬಡಿಕೆ
2 ಅರಸುಗಳು
22ನೇ ಅಧ್ಯಾಯ
- Verse 1: ಯೋಷೀಯನು ಅರಸನಾದಾಗ ಅವನಿಗೆ ಎಂಟು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಅವನು ಆಳಿದ್ದು ಮೂವತ್ತೊಂದು ವರ್ಷ. ಬೊಚ್ಕತೂರಿನವಳೂ ಅದಾಯನ ಮಗಳೂ ಆದ ಯೆದೀದಾ ಎಂಬಾಕೆ ಅವನ ತಾಯಿ.
- Verse 2: ಅವನು ಎಡಕ್ಕಾಗಲಿ ಬಲಕ್ಕಾಗಲಿ ವಾಲದೆ ತನ್ನ ಪೂರ್ವಜ ದಾವೀದನ ಮಾರ್ಗದಲ್ಲಿ ನೇರವಾಗಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು.
- Verse 3: ಯೋಷೀಯನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಆದ ಶಾಫಾನನೆಂಬ ಲೇಖಕನನ್ನು ಕರೆದು,
- Verse 4: “ನೀನು ಪ್ರಧಾನ ಯಾಜಕ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ, ‘ದ್ವಾರಪಾಲಕರು ಸರ್ವೇಶ್ವರನ ಆಲಯಕ್ಕೆ ಬರುವ ಜನರಿಂದ ಸಂಗ್ರಹಿಸಿದ ಹಣವನ್ನು ಲೆಕ್ಕಮಾಡಿ ಆಲಯದ ಕೆಲಸ ಮಾಡಿಸುವ ಮೇಸ್ತ್ರಿಗಳಿಗೆ ಅದನ್ನು ಒಪ್ಪಿಸು,’ ಎಂದು ಹೇಳು.
- Verse 5: ಮೇಸ್ತ್ರಿಗಳು ಅದನ್ನು ಸರ್ವೇಶ್ವರನ ಆಲಯದ ದುರಸ್ತುಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಮೊದಲಾದವರ ಸಂಬಳಕ್ಕಾಗಿಯೂ ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು, ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಉಪಯೋಗಿಸಲಿ.
- Verse 6: ಮೇಸ್ತ್ರಿಗಳು ಅದನ್ನು ಸರ್ವೇಶ್ವರನ ಆಲಯದ ದುರಸ್ತುಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಮೊದಲಾದವರ ಸಂಬಳಕ್ಕಾಗಿಯೂ ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು, ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಉಪಯೋಗಿಸಲಿ.
- Verse 7: ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲಾಗುವ ಹಣದ ಲೆಕ್ಕವನ್ನು ಕೇಳಬಾರದು,” ಎಂದು ಆಜ್ಞಾಪಿಸಿ ಅವನನ್ನು ಸರ್ವೇಶ್ವರನ ಆಲಯಕ್ಕೆ ಕಳುಹಿಸಿದನು.
- Verse 8: ಪ್ರಧಾನ ಯಾಜಕ ಹಿಲ್ಕೀಯನು ಲೇಖಕ ಶಾಫಾನನಿಗೆ, “ಸರ್ವೇಶ್ವರನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ,” ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು; ಶಾಫಾನನು ಓದಿದನು.
- Verse 9: ಅನಂತರ ಅವನು ಹಿಂದಿರುಗಿ ಅರಸನ ಬಳಿಗೆ ಹೋಗಿ, “ನಿಮ್ಮ ಸೇವಕರು ದೇವಾಲಯಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮೇಸ್ತ್ರಿಗಳಿಗೆ ಒಪ್ಪಿಸಿದರು;
- Verse 10: ಇದಲ್ಲದೆ ಯಾಜಕ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ,” ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು.
- Verse 11: ಅರಸನು ಧರ್ಮೋಪದೇಶ ಗ್ರಂಥವಾಕ್ಯಗಳನ್ನು ಕೇಳಿದಾಗ,
- Verse 12: ದುಃಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು ಶಾಫಾನನ ಮಗ ಅಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವರಿಗೆ,
- Verse 13: “ನಮ್ಮ ಪೂರ್ವಜರು ನಮಗೆ ಸಿಕ್ಕಿರುವ ಈ ಗ್ರಂಥವಾಕ್ಯಗಳಿಗೆ ಕಿವಿಗೊಡದೆ ಹಾಗು ಅವುಗಳನ್ನು ಕೈಕೊಳ್ಳದೆಹೋದುದರಿಂದ ಸರ್ವೇಶ್ವರನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ,” ಎಂದು ಆಜ್ಞಾಪಿಸಿದನು.
- Verse 14: ಆಗ ಯಾಜಕ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ ಎಂಬವರು ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಗಂಡನು. ಈಕೆ ಜೆರುಸಲೇಮಿನ ಎರಡನೇ ಕೇರಿಯಲ್ಲಿ ವಾಸವಾಗಿದ್ದಳು.
- Verse 15: ಹುಲ್ದಳು ಅವರಿಗೆ, “ನಿಮ್ಮನ್ನು ಕಳುಹಿಸಿದವರಿಗೆ ಇಸ್ರಯೇಲ್ ದೇವರಾದ ಸರ್ವೇಶ್ವರನ ಮಾತುಗಳನ್ನು ತಿಳಿಸಿರಿ;
- Verse 16: ‘ಈ ನಾಡಿನ ಮೇಲೆ ಹಾಗು ಜನರ ಮೇಲೆ ಜುದೇಯದ ಅರಸನು ಓದಿಸಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಿಕ್ಷೆಯನ್ನು ಬರಮಾಡುವೆನು.
- Verse 17: ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯಹತ್ತಿ ಆರಿಹೋಗುವುದೇ ಇಲ್ಲ,’ ಎನ್ನುತ್ತಾರೆ ಸರ್ವೇಶ್ವರ.
- Verse 18: ತಾನು ಕೇಳಿದ ವಾಕ್ಯಗಳ ವಿಷಯವಾಗಿ ಸರ್ವೇಶ್ವರನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಜುದೇಯದ ಅರಸರಿಗೆ ನೀವು ತಿಳಿಸಬೇಕಾದ ಇಸ್ರಯೇಲ್ ದೇವರಾದ ಸರ್ವೇಶ್ವರನ ಮಾತು ಏನೆಂದರೆ,
- Verse 19: ‘ನಾನು ಈ ನಾಡನ್ನೂ ನಿವಾಸಿಗಳನ್ನೂ ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುದನ್ನು ನೀನು ಕೇಳಿದಾಗ, ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.
- Verse 20: ನಾನು ಈ ನಾಡಿಗೆ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮೃತಿಹೊಂದಿ ಸಮಾಧಿ ಸೇರುವಂತೆ ಅನುಗ್ರಹಿಸುವೆನು,’ ಎಂಬುದಾಗಿ ತಿಳಿಸಿರಿ,” ಎಂದು ಹೇಳಿದಳು. ಅವರು ಹಿಂದಿರುಗಿ ಬಂದು ಅರಸನಿಗೆ ಆ ಮಾತುಗಳನ್ನು ತಿಳಿಸಿದರು.