पवित्र बाइबिल
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
8ನೇ ಅಧ್ಯಾಯ
- Verse 1: ಆಗ ಶೂಹ್ಯನಾದ ಬಿಲ್ದದನು ಇಂತೆಂದನು:
- Verse 2: “ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವೆ? ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ?
- Verse 3: ಅನ್ಯಾಯವಾದ ತೀರ್ಪನು ಕೊಡುತ್ತಾನೆಯೆ ದೇವರು? ಸತ್ಯವನ್ನು ಡೊಂಕುಮಾಡುತ್ತಾನೆಯೆ ಸರ್ವಶಕ್ತನು?
- Verse 4: ಬಹುಶಃ ನಿನ್ನ ಮಕ್ಕಳು ಆತನ ವಿರುದ್ಧ ಪಾಪಮಾಡಿರಬೇಕು ಎಂದೇ ಆತ ಅವರನು ಆ ದ್ರೋಹದ ನಿಮಿತ್ತ ದಂಡಿಸಿರಬೇಕು.
- Verse 5: ಶುದ್ಧನೂ ಸತ್ಯವಂತನೂ ನೀನಾಗಿದ್ದರೆ ದೇವರ ಪ್ರಸನ್ನತೆಯನು ಅರಸಿದೆಯಾದರೆ ಆ ಸರ್ವಶಕ್ತನನು ವಿಜ್ಞಾಪಿಸಿದೆಯಾದರೆ,
- Verse 6: ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು ಬರುವನು ಸತ್ಯವಂತನ ಮನೆಮಾರನು ಸಮೃದ್ಧಿಗೊಳಿಸುವನು.
- Verse 7: ಆಗ ನಿನ್ನ ಭವಿಷ್ಯ ಎಷ್ಟು ಉಜ್ವಲವಾಗಿರುತ್ತದೆಂದರೆ ನಿನ್ನ ಮೊದಲಿನ ಸ್ಥಿತಿ ಕೂಡ ಅತ್ಯಲ್ಪವಾಗಿ ಕಾಣುವುದು ನಿನಗೆ.
- Verse 8: ವಿಚಾರಿಸಿ ನೋಡು ಪುರಾತನ ಕಾಲವನು ಧ್ಯಾನಿಸಿ ನೋಡು ಪೂರ್ವಜರ ಅನುಭವವನು.
- Verse 9: ನಾವಾದರೋ ನಿನ್ನೆ ಹುಟ್ಟಿದವರು, ಏನೂ ಅರಿಯದವರು ಭೂಲೋಕದಲ್ಲಿನ ನಮ್ಮ ಬಾಳು ಕೇವಲ ನೆರಳು.
- Verse 10: ನಿನಗೆ ಬೋಧಿಸಿ ಬುದ್ಧಿಹೇಳುವರು ಪೂರ್ವಜರು ಅವರ ಅನುಭವದಿಂದ ಬಂದ ವಚನಗಳಿವು:
- Verse 11: ಕೆಸರಿಲ್ಲದೆ ಆಪುಹುಲ್ಲು ಬೆಳೆಯುವುದುಂಟೆ? ಜವುಗಿಲ್ಲದೆ ಜಂಬು ಹುಲ್ಲು ಮೊಳೆಯುವುದುಂಟೆ
- Verse 12: ಆದರೂ ಮಿಕ್ಕ ಎಲ್ಲ ಸಸಿಗಳಿಗಿಂತ ಬಲು ಮುಂಚಿತವಾಗಿಯೆ ಒಣಗಿಹೋಗುತ್ತವೆ ಅವು ಯಾರೂ ಕೊಯ್ಯದೆಯೆ.
- Verse 13: ದೇವರನ್ನು ಮರೆಯುವವರೆಲ್ಲರ ಗತಿ ಇದುವೆ ಭಕ್ತಿಹೀನನ ನಿರೀಕ್ಷೆ ನಿರರ್ಥಕವೆ.
- Verse 14: ಅಂಥವನ ಭರವಸೆ ಭಂಗವಾಗುವುದು ಅವನ ನಿವಾಸ ಜೇಡರ ಗೂಡಿನಂತಾಗುವುದು.
- Verse 15: ಒರಗಿಕೊಂಡರೆ ಆ ಮನೆ ನಿಲ್ಲದು ಹಿಡಿದುಕೊಂಡರೆ ಅದು ಬಿಗಿಯಿರದು.
- Verse 16: ಅಂಥವನು ಬಿಸಿಲಿನಲ್ಲೂ ಹಸಿರಾಗಿರುವ ಬಳ್ಳಿಯಂತೆ ಹರಡಿಕೊಳ್ಳುವನು ತೋಟದೊಳಗೆ ಕವಲೊಡೆದು;
- Verse 17: ಕಲ್ಲುಕುಪ್ಪೆಯ ಮೇಲೂ ಬೇರುಗಳನ್ನು ಹೆಣೆದುಕೊಳ್ವನು ಕಲ್ಲಿನ ಸಂದಿಗೊಂದಿಗಳ ನಡುವೆ ನುಗ್ಗಬಲ್ಲನು ಅವನು;
- Verse 18: ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ ಅವನನ್ನು ಕಂಡದ್ದೇ ಇಲ್ಲ ಎಂದು ಬೊಂಕುವುದು ಆ ಸ್ಥಳ.
- Verse 19: ಇದುವೇ ಅಂಥವನಿಗೆ ಗಿಟ್ಟುವ ಸುಖ ಬೇರೆಯವರು ಮೊಳೆವರು ಅವನಿದ್ದ ಆ ನೆಲದಿಂದ.
- Verse 20: ದೇವರು ನಿರ್ದೋಷಿಯನು ತ್ಯಜಿಸಿಬಿಡುವುದಿಲ್ಲ ಕೆಡುಕರಿಗೆ ನೆರವಾಗಲು ಆತ ಕೈ ನೀಡುವುದಿಲ್ಲ.
- Verse 21: ತುಂಬಿಸುವನಾತ ನಿನ್ನ ಬಾಯನು ನಗೆಯಿಂದ ನಿನ್ನ ತುಟಿಗಳನ್ನು ಉತ್ಸಾಹಧ್ವನಿಯಿಂದ.
- Verse 22: ಅವಮಾನ ಮುಸುಕುವುದು ನಿನ್ನ ಹಗೆಗಳನ್ನು ದುರುಳರಾ ನಿವಾಸವಾದರೋ ನಿರ್ಮೂಲವಾಗುವುದು.”