ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
36ನೇ ಅಧ್ಯಾಯ
- Verse 1: ಬಳಿಕ ಎಲೀಹುವನು ಮುಂದುವರೆದು:
- Verse 2: “ತಾಳು, ನಾನು ಹೇಳುವುದನು ಇನ್ನೂ ಸ್ವಲ್ಪ ಕೇಳು ದೇವರ ಪರವಾಗಿ ಹೇಳತಕ್ಕವು ಇನ್ನು ಕೆಲವುಂಟು:
- Verse 3: ನನ್ನ ಸೃಷ್ಟಿಕರ್ತನು ಸತ್ಯಸ್ವರೂಪನೆಂದು ತೋರಲು ನನ್ನ ವಾದಗಳನ್ನು ಸವಿಸ್ತಾರಗೊಳಿಸುವೆನು:
- Verse 4: ನನ್ನ ಮಾತು ಸುಳ್ಳಲ್ಲವೆಂಬುದು ನಿಶ್ಚಯ ನಿನ್ನ ಬಳಿಯಿರುವನು ಜ್ಞಾನಪೂರ್ಣನೋರ್ವ.
- Verse 5: ದೇವರು ಸರ್ವಶಕ್ತನು, ಯಾರನ್ನೂ ತುಚ್ಛೀಕರಿಸನು ಆತನ ಬುದ್ಧಿಸಾಮರ್ಥ್ಯ ಅಪಾರವಾದುದು.
- Verse 6: ದುರುಳರ ಪ್ರಾಣವನ್ನು ಆತ ಉಳಿಸನು ನಿರ್ಗತಿಕರ ನ್ಯಾಯವನು ಸ್ಥಾಪಿಸುವನು.
- Verse 7: ತನ್ನ ಕಟಾಕ್ಷವನ್ನು ಸಜ್ಜನರ ಮೇಲೆ ಅಚಲವಾಗಿರಿಸುವನು ರಾಜರಂತೆ ಸಿಂಹಾಸನದ ಮೇಲೆ ಅವರನು ಕುಳ್ಳಿರಿಸುವನು ಅಮರವಾದ ಉನ್ನತ ಪದವಿಗೆ ಅವರನು ಏರಿಸುವನು.
- Verse 8: ಆದರೆ ಅವರು ಬಂಧನಕ್ಕೊಳಗಾದರೆ ಸಂಕಟ ಸಂಕೋಲೆಗಳಿಗೆ ಸಿಕ್ಕಿಕೊಂಡರೆ,
- Verse 9: ದೇವರು ಅವರ ದುಷ್ಕೃತ್ಯಗಳನು ತೋರಿಸುವನು ಸೊಕ್ಕಿನ ದ್ರೋಹಗಳನು ಸೂಚಿಸುವನು.
- Verse 10: ಶಿಕ್ಷಣ ಕೇಳುವಂತೆ ಅವರ ಕಿವಿಯನ್ನು ತೆರೆಯುವನು ಅಧರ್ಮವನ್ನು ಬಿಟ್ಟುಬಿಡುವಂತೆ ಆಜ್ಞಾಪಿಸುವನು.
- Verse 11: ಅದನ್ನು ಕೇಳಿ ಆತನ ಸೇವಾಸಕ್ತರಾದಲ್ಲಿ ತಮ್ಮ ದಿವಸಗಳನ್ನು ಕಳೆವರು ಸುಖದಲ್ಲಿ ತಮ್ಮ ವರುಷಗಳನು ಹರ್ಷಾನಂದದಲ್ಲಿ.
- Verse 12: ಕೇಳಿದಿದ್ದರೆ ಸಾಗರದಲ್ಲಿ ಮುಳುಗಿಹೋಗುವರು ಜ್ಞಾನಹೀನರಾಗಿಯೇ ಪ್ರಾಣ ಕಳೆದುಕೊಳ್ಳುವರು.
- Verse 13: ಕಪಟ ಹೃದಯಿಗಳು ಕೋಪಿಷ್ಠರಾಗುವರು ತಮ್ಮನ್ನು ಬಂಧಿಸುವಾಗಲು ಮೊರೆಯಿಡಲು.
- Verse 14: ಯೌವನ ಪ್ರಾಯದಲ್ಲೇ ಸಾಯುವರು ಪುರುಷಗಾಮಿಗಳ ಮಧ್ಯೆಯಲ್ಲೇ ಗತಿಸಿಹೋಗುವರು.
- Verse 15: ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು ಕಷ್ಟಾನುಭವಗಳ ಮೂಲಕವೆ ದೇವರು ಅವರ ಕಿವಿಯನ್ನು ತೆರೆಯುವನು.
- Verse 16: ಅಂತೆಯೆ, ಕಷ್ಟದಿಂದ ನಿನ್ನನ್ನು ತಪ್ಪಿಸಬೇಕೆಂಬುದು ಇಕ್ಕಟ್ಟಿಲ್ಲದ ಬಯಲಿಗೆ ನಿನ್ನನ್ನು ತರಬೇಕೆಂಬುದು ನಿನ್ನ ಊಟದ ಮೇಜು ಸಮೃದ್ಧಿಯಾಗಿರಬೇಕೆಂಬುದು ದೇವರ ಉದ್ದೇಶವಾಗಿರುವುದು.
- Verse 17: ನೀನೋ ದುಷ್ಟ ನಿರ್ಣಯಗಳಿಂದ ಭರಿತನಾಗಿರುವೆ ನ್ಯಾಯವಿಚಾರಣೆಗೂ ತೀರ್ಪಿಗೂ ಒಳಪಟ್ಟಿರುವೆ.
- Verse 18: ಸಿರಿಸಂಪತ್ತು ನಿನ್ನನು ಕುಚೋದ್ಯಕ್ಕೆ ನೂಕೀತು, ಎಚ್ಚರಿಕೆ! ಹೆಚ್ಚು ಲಂಚಕೋರತನದಿಂದ ವಂಚಿತನಾಗಬೇಡ.
- Verse 19: ಐಶ್ವರ್ಯವಾಗಲಿ, ಧನಸಾಮರ್ಥ್ಯವಾಗಲಿ ಕಷ್ಟಾನುಭವವಿಲ್ಲದೆ ನಿನಗೆ ಈಡಾಗವಿಲ್ಲಿ.
- Verse 20: ತಟ್ಟನೆ ಜನಾಂಗಗಳು ನಿರ್ಮೂಲವಾಗುವಂಥ ರಾತ್ರಿಯನು ಬಯಸಬೇಡ.
- Verse 21: ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ! ನಿನ್ನ ಕಷ್ಟಾನುಭವ ಅದನು ತಡೆಗಟ್ಟುತ್ತದೆ.
- Verse 22: ದೇವರ ಶಕ್ತಿ ಉನ್ನತೋನ್ನತ ಯಾರಿಹನು ಅವನಂಥ ಬೋಧಕ?
- Verse 23: ದೇವರಿಗೆ ಮಾರ್ಗತೋರಿಸಬಲ್ಲವನಾರು? ಆತನಿಗೆ ‘ನೀನು ಮಾಡಿರುವುದು ಅನ್ಯಾಯ,’ ಎನ್ನಬಲ್ಲವನಾರು?
- Verse 24: ಮಾನವರು ಸ್ತುತಿಸಿರುವ ಆತನ ಕಾರ್ಯಗಳನ್ನ ನೀನೂ ಕೂಡ ಹೊಗಳಲು ಮರೆಯಬೆಡ.
- Verse 25: ಮಾನವರೆಲ್ಲರು ಅದನ್ನು ಕಂಡಿರುವರು ನರರಾದ ನಾವು ದೂರದಿಂದ ನೋಡಬಹುದು.
- Verse 26: ದೇವರೆನಿತೋ ಮಹೋನ್ನತನು ನಮ್ಮ ಅರಿವಿಗಾತನು ಎಟುಕನು ಅಸಂಖ್ಯಾತ ಆತನ ವರುಷಗಳು.
- Verse 27: ನೀರಿನ ಹನಿಗಳನು ಹೀರಿಕೊಳ್ಳುತ್ತಾನೆ ಮಂಜಿನಿಂದ ತಿಳಿಮಳೆಯನು ಸುರಿಸುತ್ತಾನೆ.
- Verse 28: ಮೋಡಗಳು ಮಳೆಗರೆಯುತ್ತವೆ, ಹಲವಾರು ಜನರ ಮೇಲೆ ಅದನ್ನು ಚಿಮುಕಿಸುತ್ತವೆ.
- Verse 29: ಗ್ರಹಿಸುವವರಾರು ಮೇಘಗಳ ಹಬ್ಬುಗೆಯನು? ದೇವರ ಗುಡಾರದಲ್ಲಿನಾ ಗರ್ಜನೆಯನು?
- Verse 30: ಇಗೋ, ಪಸರಿಸುತ್ತಾನೆ ಸುತ್ತಲು ತನ್ನ ಬೆಳಕನ್ನು ಮುಚ್ಚಿಡುತ್ತಾನೆ ಕಡಲಿನ ಅಡಿಭಾಗವನು.
- Verse 31: ಹೀಗೆ ಜನಾಂಗಗಳನ್ನು ಪೋಷಣೆ ಮಾಡುತ್ತಾನೆ ಆಹಾರವನ್ನು ಧಾರಾಳವಾಗಿ ದಯಪಾಲಿಸುತ್ತಾನೆ.
- Verse 32: ಸಿಡಿಲನ್ನೇ ಕೈತುಂಬ ಹಿಡಿದು ಗುರಿಮುಟ್ಟಲೆಂದು ಆಜ್ಞೆಯಿಡುತ್ತಾನೆ.
- Verse 33: ಅದರ ಆರ್ಭಟವು ಆತನನ್ನು ಪ್ರಕಟಿಸುತ್ತದೆ ಆತನ ಆಗಮನವನು ದನಕರುಗಳಿಗೂ ತಿಳಿಸುತ್ತದೆ.”