P. O. C ബൈബിള്
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
45ನೇ ಅಧ್ಯಾಯ
- Verse 1: ನೀವು ನಾಡನ್ನು ಸೊತ್ತುಸೊತ್ತಾಗಿ ಹಂಚುವಾಗ ಒಂದು ಭಾಗವನ್ನು ಮೀಸಲಾಗಿ ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸಮರ್ಪಿಸಬೇಕು; ಅದರ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹತ್ತು ಕಿಲೋಮೀಟರ್; ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿ ಇರಬೇಕು.
- Verse 2: ಇದರಲ್ಲಿ 250 ಮೀಟರ್ ಉದ್ದದ, 250 ಮೀಟರ್ ಅಗಲದ ಚಚ್ಚೌಕವಾದ ಸ್ಥಳವು ಪವಿತ್ರಾಲಯಕ್ಕೆ ನಿವೇಶನವಾಗಿರುವುದು; ಅದರ ಸುತ್ತ ಇಪ್ಪತ್ತೈದು ಮೀಟರ್ ಅಗಲ ಉಳದ ಭೂಮಿ ಇರುವುದು.
- Verse 3: ಮೊದಲು ಅಳೆದ ಕ್ಷೇತ್ರದಲ್ಲಿ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಒಂದು ಭಾಗವನ್ನು ಅಳೆ; ಇದರಲ್ಲಿ ಅತಿಪರಿಶುದ್ಧವಾದ ಪವಿತ್ರಾಲಯ ಇರಬೇಕು.
- Verse 4: ಇದು ನಾಡಿನಲ್ಲೇ ಪರಿಶುದ್ಧಭಾಗ; ಇದು ಪವಿತ್ರಾಲಯದ ಅರ್ಚಕರೂ ಸರ್ವೇಶ್ವರನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿ ಹಾಗು ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿ ಇರುವುದು.
- Verse 5: ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಐದು ಕಿಲೋಮೀಟರ್ ಅಗಲದ ಕ್ಷೇತ್ರವು ಅವರಿಗೆ ಸೊತ್ತಾಗುವುದು.
- Verse 6: ನೀವು ಸಮರ್ಪಿಸುವ ಪರಿಶುದ್ಧಭಾಗದ ಅಕ್ಕಪಕ್ಕದಲ್ಲಿ ಎರಡುವರೆ ಕಿಲೋಮೀಟರ್ ಅಗಲದ, ಹನ್ನೆರಡುವರೆ ಕಿಲೋಮೀಟರ್ ಉದ್ದದ ಕ್ಷೇತ್ರವನ್ನು ರಾಜಧಾನಿಗೆ ಒಳಪಟ್ಟ ಭೂಮಿಯನ್ನಾಗಿ ನೇಮಿಸಬೇಕು; ಅದರಲ್ಲಿ ಇಸ್ರಯೇಲ್ ವಂಶದವರಿಗೆಲ್ಲಾ ಹಕ್ಕಿರುವುದು.
- Verse 7: ರಾಜನ ಸೊತ್ತು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಗೂ ಉಭಯ ಪಾರ್ಶ್ವಗಳಲ್ಲಿರುವುದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಪಶ್ಚಿಮದಲ್ಲಿ ಅದು ಪಶ್ಚಿಮ ಕಡೆಗೆ ಹರಡುವುದು. ಪೂರ್ವದಲ್ಲಿ ಪೂರ್ವದ ಕಡೆಗೆ ಹರಡುವುದು. ಅದರ ಉದ್ದ ಪಶ್ಚಿಮದಿಂದ ಪೂರ್ವಕ್ಕೆ ಒಂದು ಕುಲದ ಸೊತ್ತಿನ ಉದ್ದಕ್ಕೆ ಸರಿಸಮಾನವಾಗಿರುವುದು.
- Verse 8: ಅದು ಅವನಿಗೆ ಇಸ್ರಯೇಲಿನಲ್ಲಿ ಭೂಸೊತ್ತಾಗುವುದು; ಇನ್ನು ಮೇಲೆ ರಾಜರುಗಳು ನನ್ನ ಪ್ರಜೆಗಳನ್ನು ಹಿಂಸಿಸರು; ನಾಡಿನ ಭೂಮಿಯನ್ನು ಇಸ್ರಯೇಲರಿಗೆ ಕುಲಕುಲಕ್ಕೂ ಹಂಚುವರು.
- Verse 9: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: :ಇಸ್ರಯೇಲಿನ ರಾಜರುಗಳೇ, ಇನ್ನು ಸಾಕು, ಸಾಕು; ಕೊಳ್ಳೆಯನ್ನೂ ಹಿಂಸಾಚಾರವನ್ನೂ ತ್ಯಜಿಸಿ ನೀತಿನ್ಯಾಯಗಳನ್ನು ನಡೆಸಿರಿ; ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿ; ಇದು ಸರ್ವೇಶ್ವರನಾದ ದೇವರ ನುಡಿ.
- Verse 10: ನಿಮ್ಮ ತಕ್ಕಡಿಯೂ ಧಾನ್ಯದ ಅಳತೆಯೂ ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು.
- Verse 11: ಏಫಾ ಎಂಬ ಧಾನ್ಯದ ಅಳತೆ ಮತ್ತು ಬತ್ ಎಂಬ ರಸದ್ರವ್ಯದ ಅಳತೆ ಒಂದೇ ಪ್ರಮಾಣವಾಗಿರತಕ್ಕದ್ದು; ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಏಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು.
- Verse 12: ಒಂದು ಶೇಕೆಲ್ ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು ಅಥವಾ ಹದಿನೈದು ಶೆಕೆಲ್ ತೂಕದ್ದಾಗಿರಲಿ.
- Verse 13: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯನೈವೇದ್ಯವನ್ನೂ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡುವುದಕ್ಕಾಗಿ ಸಮರ್ಪಿಸತಕ್ಕದೇನೆಂದರೆ: ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು;
- Verse 14: ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗ ಎಷ್ಟಂದರೆ, ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ ಒಂದು ಕೋರ್ ಅಂದರೆ, ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು; (ಹತ್ತು ಬತ್ ಅಂದರೆ ಒಂದು ಹೋಮೆರ್);
- Verse 15: ಇನ್ನೂರು ಕುರಿಗಳಲ್ಲಿ ಇಸ್ರಯೇಲಿನ ನೀರಾವರಿಯ ಹುಲ್ಲುಗಾವಲಿನ ಒಂದು ಕುರಿ;
- Verse 16: ಇವುಗಳನ್ನು ದೇಶದ ಸಕಲ ಜನರು ಇಸ್ರಯೇಲಿನ ರಾಜನಿಗೆ ಒಪ್ಪಿಸತಕ್ಕದ್ದು,
- Verse 17: ಉತ್ಸವಗಳಲ್ಲೂ ಅಮಾವಾಸ್ಯೆಗಳಲ್ಲೂ ಸಬ್ಬತ್ತುಗಳಲ್ಲೂ ಇಸ್ರಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲೂ ದಹನಬಲಿ ಪ್ರಾಣಿ, ಧಾನ್ಯನೈವೇದ್ಯ, ಪಾನನೈವೇದ್ಯ, ಇವುಗಳನ್ನು ಒದಗಿಸುವುದು ರಾಜನ ಕರ್ತವ್ಯ; ಇಸ್ರಯೇಲ್ ವಂಶದ ದೋಷನಿವಾರಣೆಗಾಗಿ ಅವನು ದೋಷಪರಿಹಾರಕ ಬಲಿಪ್ರಾಣಿ, ಧಾನ್ಯನೈವೇದ್ಯ, ದಹನಬಲಿಪ್ರಾಣಿ, ಶಾಂತಿಸಮಾಧಾನ ಬಲಿಪ್ರಾಣಿ ಇವುಗಳನ್ನು ಒಪ್ಪಿಸತಕ್ಕದ್ದು.”
- Verse 18: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಕಳಂಕರಹಿತವಾದ ಹೋರಿಯನ್ನು ಆರಿಸಿ ಅದರಿಂದ ಪವಿತ್ರಾಲಯವನ್ನು ಶುದ್ಧೀಕರಿಸಬೇಕು.
- Verse 19: ಆಗ ಯಾಜಕನು ಆ ದೋಷಪರಿಹಾರಕ ಬಲಿಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ ಬಲಿಪೀಠದ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಣ ಪ್ರಾಕಾರದ ಹೆಬ್ಬಾಗಿಲ ನಿಲವುಕಂಬಗಳಿಗೂ ಹಚ್ಚಬೇಕು.
- Verse 20: ಅದೇ ಮೇರೆಗೆ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಬಲಿದಾನಮಾಡಿ ಯಾರಾದರೂ ಅಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ, ಬುದ್ಧಿಹೀನರ ಅವಿವೇಕದಿಂದಾಗಲಿ, ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು.
- Verse 21: “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಏಳು ದಿವಸದ ಪಾಸ್ಕಹಬ್ಬವನ್ನು ಆಚರಿಸತೊಡಗಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು.
- Verse 22: ಆ ದಿನದಲ್ಲಿ ರಾಜನು ತನ್ನ ನಿಮಿತ್ತ ಹಾಗು ನಾಡಿನ ಜನರೆಲ್ಲರ ನಿಮಿತ್ತ ದೋಷಪರಿಹಾರಕಬಲಿಗಾಗಿ ಒಂದು ಹೋರಿಯನ್ನು ಒಪ್ಪಿಸಲಿ.
- Verse 23: ಹಬ್ಬದ ಏಳು ದಿನಗಳಲ್ಲಿಯೂ ಸರ್ವೇಶ್ವರನಿಗೆ ಸಮರ್ಪಿಸತಕ್ಕ ದಹನಬಲಿಗಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಕಳಂಕರಹಿತವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಒದಗಿಸಲಿ, ಮತ್ತು ದೋಷಪರಿಹಾರಕಬಲಿಗಾಗಿ ದಿನವಹಿ ಒಂದು ಹೋತವನ್ನು ಕೊಡಲಿ.
- Verse 24: ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಮೂವತ್ತು ಸೇರು ಗೋದಿಹಿಟ್ಟನ್ನೂ ಆರಾರು ಸೇರು ಎಣ್ಣೆಯನ್ನೂ ಧಾನ್ಯ ನೈವೇದ್ಯಕ್ಕಾಗಿ ಒಪ್ಪಿಸಬೇಕು.
- Verse 25: “ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿವಸಗಳಲ್ಲಿಯೂ ಅವನು ದೋಷಪರಿಹಾರಕಬಲಿಪ್ರಾಣಿ, ದಹನಬಲಿಪ್ರಾಣಿ, ಧಾನ್ಯನೈವೇದ್ಯ, ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.”