P. O. C ബൈബിള്
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
15ನೇ ಅಧ್ಯಾಯ
- Verse 1: ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ.
- Verse 2: ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು.
- Verse 3: ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು.
- Verse 4: ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು.
- Verse 5: ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.
- Verse 6: ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹುಮಂದಿ ಇಂದಿಗೂ ಬದುಕಿದ್ದಾರೆ.
- Verse 7: ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು.
- Verse 8: ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.
- Verse 9: ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು.
- Verse 10: ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ.
- Verse 11: ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು ನಂಬಿದ್ದೀರಿ.
- Verse 12: ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ?
- Verse 13: ಸತ್ತವರಿಗೆ ಪುನರುತ್ಥಾನ ಇಲ್ಲವೆಂಬುದು ನಿಜವಾದರೆ ಕ್ರಿಸ್ತಯೇಸು ಪುನರುತ್ಥಾನ ಹೊಂದಲಿಲ್ಲ ಎಂದ ಹಾಗಾಯಿತು.
- Verse 14: ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು.
- Verse 15: ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂಬುದು ನಿಜವಾದರೆ ದೇವರು ಕ್ರಿಸ್ತಯೇಸುವನ್ನು ಪುನರುತ್ಥಾನಗೊಳಿಸಿಲ್ಲ ಎಂದಂತಾಯಿತು. ದೇವರು ಕ್ರಿಸ್ತಯೇಸುವನ್ನು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆ ಎಂದು ಸಾಕ್ಷಿ ಹೇಳಿದ ನಾವು ಆಗ ದೇವರ ಬಗ್ಗೆಯೇ ಸುಳ್ಳುಸಾಕ್ಷಿ ಹೇಳಿದಂತಾಯಿತು.
- Verse 16: ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು.
- Verse 17: ಕ್ರಿಸ್ತಯೇಸುವೇ ಪುನರುತ್ಥಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ;
- Verse 18: ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು.
- Verse 19: ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ.
- Verse 20: ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.
- Verse 21: ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು.
- Verse 22: ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ.
- Verse 23: ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ.
- Verse 24: ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.
- Verse 25: ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.
- Verse 26: ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ.
- Verse 27: “ದೇವರು ಎಲ್ಲವನ್ನು ಅಧೀನಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ,” ಎಂದು ಲಿಖಿತವಾಗಿದೆ. “ಎಲ್ಲವನ್ನೂ ಅಧೀನಪಡಿಸಲಾಗಿದೆ,” ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅವರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.
- Verse 28: ಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇ, ಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆ. ಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ.
- Verse 29: ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರಲ್ಲಾ ಅದರ ಉದ್ದೇಶವೇನು? ಸತ್ತವರಿಗೆ ಪುನರುತ್ಥಾನವೇ ಇಲ್ಲವಾದರೆ ಅವರಿಗೋಸ್ಕರ ದೀಕ್ಷಾಸ್ನಾನ ಪಡೆಯುವುದರ ಪ್ರಯೋಜನ ಏನು?
- Verse 30: ನಾವು ಕೂಡ ಏಕೆ ಪ್ರತಿಕ್ಷಣದಲ್ಲಿಯೂ ಆಪತ್ತು ವಿಪತ್ತುಗಳನ್ನು ಎದುರಿಸುತ್ತಿದ್ದೇವೆ?
- Verse 31: ಹೌದು ಸಹೋದರರೇ, ಪ್ರತಿದಿನವೂ ನಾನು ಸಾವಿನ ದವಡೆಯಲ್ಲಿದ್ದೇನೆ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಿಮ್ಮ ಬಗ್ಗೆ ನನಗಿರುವ ಹೆಮ್ಮೆಯಿಂದ ಇದನ್ನು ಪ್ರಮಾಣವಾಗಿ ಹೇಳುತ್ತಿದ್ದೇನೆ.
- Verse 32: ಲೋಕ ಪ್ರಶಂಸೆಗಾಗಿ ನಾನು ಈ ಎಫೆಸದ ‘ಕಾಡುಮೃಗ’ಗಳೊಡನೆ ಹೋರಾಡಿದೆನಾದರೆ, ಅದರಿಂದ ಬರುವ ಲಾಭವಾದರೂ ಏನು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, “ಬನ್ನಿರಿ, ತಿನ್ನೋಣ, ಕುಡಿಯೋಣ, ಕಾದಿದೆಯಲ್ಲ ನಾಳೆ ಮರಣ,” ಎಂಬ ನಾಣ್ನುಡಿಯಂತೆ ನಡೆಯಬಹುದಲ್ಲಾ.
- Verse 33: ಮೋಸಹೋಗದಿರಿ. ಏಕೆಂದರೆ, “ದುರ್ಜನರ ಸಂಗ ಸದಾಚಾರದ ಭಂಗ,”
- Verse 34: ಜಾಗೃತರಾಗಿರಿ, ದುರ್ಮಾರ್ಗವನ್ನು ಬಿಟ್ಟುಬಿಡಿ, ಸನ್ಮತಿಯುಳ್ಳವರಾಗಿರಿ. ದೇವರನ್ನು ಅರಿಯದ ಮೂಢರು ನಿಮ್ಮಲ್ಲಿ ಕೆಲವರು ಇದ್ದಾರೆ. ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.
- Verse 35: ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.
- Verse 36: ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.
- Verse 37: ನೀನು ಬಿತ್ತುವುದು ಗೋದಿಯನ್ನು ಅಥವಾ ಇನ್ನಾವುದೋ ಕಾಳನ್ನು; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ.
- Verse 38: ದೇವರು ತಮ್ಮ ಚಿತ್ತಾನುಸಾರ ಅದಕ್ಕೆ ದೇಹಾಕೃತಿಯನ್ನು ಕೊಡುತ್ತಾರೆ. ಒಂದೊಂದು ಬೀಜಕ್ಕೂ ಅದರದರ ದೇಹಾಕೃತಿಯನ್ನು ಕೊಡುತ್ತಾರೆ.
- Verse 39: ಎಲ್ಲಾ ಶರೀರಗಳು ಒಂದೇ ವಿಧವಾಗಿಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳ ಶರೀರ ಬೇರೆ.
- Verse 40: ಸ್ವರ್ಗೀಯ ಶರೀರಗಳೂ ಇವೆ. ಪೃಥ್ವಿಯ ಶರೀರಗಳೂ ಇವೆ. ಆದರೆ ಒಂದರ ಸ್ವರೂಪ ಮತ್ತೊಂದರಂತೆ ಇಲ್ಲ.
- Verse 41: ಸೂರ್ಯನ ಪ್ರಕಾಶ ಒಂದಾದರೆ, ಚಂದ್ರನ ಪ್ರಕಾಶವೇ ಇನ್ನೊಂದು; ನಕ್ಷತ್ರದ ಪ್ರಕಾಶವೇ ಬೇರೊಂದು. ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು.
- Verse 42: ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನಹೊಂದುವಂಥದ್ದು, ಬಲಿಷ್ಠವಾದುದು.
- Verse 43: ಬಿತ್ತಿದ್ದು ಕುರೂಪಿಯಾದುದು; ಪುನರುತ್ಥಾನಹೊಂದುವುದು ಕೋಮಲವಾದುದು.
- Verse 44: ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದೂ ಸತ್ಯ.
- Verse 45: ಪವಿತ್ರಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ.
- Verse 46: ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು.
- Verse 47: ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು.
- Verse 48: ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ.
- Verse 49: ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ.
- Verse 50: ಸಹೋದರರೇ, ನಾನು ನಿಮಗೆ ಹೇಳುವುದೇನೆಂದರೆ: ರಕ್ತಮಾಂಸವು ದೇವರ ಸಾಮ್ರಾಜ್ಯಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ. ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.
- Verse 51: ಇಗೋ, ಕೇಳೀ! ಇದುವರೆಗೂ ನಿಗೂಢವಾಗಿದ್ದ ರಹಸ್ಯವನ್ನು ನಾನು ನಿಮಗೆ ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಅಂತಿಮ ಕಹಳೆಯು ಮೊಳಗಿದಾಗ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರಲ್ಲಿ ನಾವೆಲ್ಲರೂ ಮಾರ್ಪಡುವೆವು. ಹೌದು, ಕಹಳೆ ಮೊಳಗುವುದು. ಸತ್ತವರು ಪುನರುತ್ಥಾನಹೊಂದಿ ಅಮರರಾಗುವರು ಮತ್ತು ನಾವು ಮಾರ್ಪಡುವೆವು.
- Verse 52: ಇಗೋ, ಕೇಳೀ! ಇದುವರೆಗೂ ನಿಗೂಢವಾಗಿದ್ದ ರಹಸ್ಯವನ್ನು ನಾನು ನಿಮಗೆ ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಅಂತಿಮ ಕಹಳೆಯು ಮೊಳಗಿದಾಗ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರಲ್ಲಿ ನಾವೆಲ್ಲರೂ ಮಾರ್ಪಡುವೆವು. ಹೌದು, ಕಹಳೆ ಮೊಳಗುವುದು. ಸತ್ತವರು ಪುನರುತ್ಥಾನಹೊಂದಿ ಅಮರರಾಗುವರು ಮತ್ತು ನಾವು ಮಾರ್ಪಡುವೆವು.
- Verse 53: ಏಕೆಂದರೆ, ಅಳಿದುಹೋಗುವ ಶರೀರ ಅಮರತ್ವವನ್ನು ಧರಿಸಲೇಬೇಕು. ಮರ್ತ್ಯವಾದ ಶರೀರ ಅಮರತ್ವವನ್ನು ಧರಿಸಲೇಬೇಕು.
- Verse 54: ಅಳಿದುಹೋಗುವಂಥದ್ದು ಅಮರತ್ವವನ್ನೂ ಮರ್ತ್ಯವಾದುದು ಅಮರ್ತ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ಈ ವಾಕ್ಯ ನೆರವೇರುವುದು:
- Verse 55: ಸಾವಿಗೆ ಸೋಲಾಯಿತು, ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ?
- Verse 56: ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ.
- Verse 57: ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತೋತ್ರ ಸಲ್ಲಲಿ!
- Verse 58: ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿರಿ; ನಿಶ್ಚಲರಾಗಿರಿ. ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಫಲವಾಗದು. ಆದ್ದರಿಂದ ಅವರ ಸೇವೆಯಲ್ಲಿ ನಿರಂತರ ಶ್ರದ್ಧೆಯುಳ್ಳವರಾಗಿರಿ.