पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
14ನೇ ಅಧ್ಯಾಯ
1 : “ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II
2 : ಮಾನವರನು ಪ್ರಭು ಸ್ವರ್ಗದಿಂದ ಸಮೀಕ್ಷಿಸುತಿಹನು I ದೇವರನು ಅರಸುವ ಸನ್ಮತಿಗಳಾರೆಂದು ವೀಕ್ಷಿಸುತಿಹನು II
3 : ದಾರಿತಪ್ಪಿಹೋದ ದ್ರೋಹಿಗಳು ಅವರೆಲ್ಲ I ಒಳಿತನ್ನು ಮಾಡುವವನಿಲ್ಲ; ಓರ್ವನೂ ಇಲ್ಲ II
4 : ದುರ್ಜನರೆನ್ನ ಜನರನು ಅನ್ನದಂತೆ ನುಂಗುವುದೇಕೆ? I ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ? I
5 : ಸಜ್ಜನರ ಸಂಗದೊಳು ದೇವನಿರಲು I ದುರ್ಜನರಿದೋ ದಿಗ್ಭ್ರಾಂತರಾಗುವರು II
6 : ಕೆಡಿಸಬಹುದವರು ಬಡಜನರ ಯೋಜನೆಯನು I ಪ್ರಭುವಾದರೊ ಅವರಿಗೆ ಆಶ್ರಯವಾಗಿರುವನು II
7 : ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ I ತರಲಿ ಪ್ರಭು ತನ್ನ ಪ್ರಜೆಗೆ ಮರಳಿ ಸಿರಿಸಂಪತ್ತ I ಸಿಗಲಿ ಯಕೋಬ - ಇಸ್ರಯೇಲ ಜನತೆಗೆ ಹರ್ಷಾನಂದ II