ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
14ನೇ ಅಧ್ಯಾಯ
- Verse 1: ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.
- Verse 2: ಸನ್ಮಾರ್ಗಿಯು ಸರ್ವೇಶ್ವರನಿಗೆ ಭಯಪಡುತ್ತಾನೆ; ದುರ್ಮಾರ್ಗಿಯು ಆತನನ್ನು ಅಸಡ್ಡೆಮಾಡುತ್ತಾನೆ.
- Verse 3: ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು.
- Verse 4: ಎತ್ತುಗಳಿಲ್ಲದಿರುವಾಗ ಗೋದಲಿ ಶುದ್ಧ; ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ಉತ್ಪನ್ನ.
- Verse 5: ಸತ್ಯಸಾಕ್ಷಿ ಸುಳ್ಳಾಡದ ವ್ಯಕ್ತಿ; ಸುಳ್ಳು ಸಾಕ್ಷಿ ಅಬದ್ಧಪ್ರಿಯ ವ್ಯಕ್ತಿ.
- Verse 6: ಕುಚೋದ್ಯನಿಗೆ ಜ್ಞಾನ ಹುಡುಕಿದರೂ ಸಿಕ್ಕದು; ವಿವೇಕಿಗೆ ತಿಳುವಳಿಕೆ ಸುಲಭವಾಗಿ ದಕ್ಕುವುದು.
- Verse 7: ಮೂರ್ಖನಿಂದ ದೂರವಿರು; ಜ್ಞಾನವಚನ ಅವನಲ್ಲಿ ಕಾಣಸಿಗದು.
- Verse 8: ವಿವೇಕಿಯ ಜ್ಞಾನ ಸನ್ಮಾರ್ಗದಲ್ಲಿ ನಡೆಸುತ್ತದೆ; ಮೂಢರ ಮೂರ್ಖತನ ಮೋಸಗೊಳಿಸುತ್ತದೆ.
- Verse 9: ಪಾಪಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.
- Verse 10: ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.
- Verse 11: ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.
- Verse 12: ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.
- Verse 13: ನಗೆಯಲ್ಲೂ ಅಳು ಉಂಟು; ನಲಿವು ನೋವಾಗಿ ಕೊನೆಗೊಳ್ಳುವುದುಂಟು.
- Verse 14: ಕೆಟ್ಟವನು ತನ್ನ ಕರ್ಮದ ಕಹಿಫಲದಿಂದ ತಿಂದು ತೇಗುವನು; ಒಳ್ಳೆಯವನು ತನ್ನ ಕಾರ್ಯದ ಸತ್ಫಲದಿಂದ ತೃಪ್ತನಾಗುವನು.
- Verse 15: ಪೆದ್ದನು ಕಿವಿಗೆ ಬಿದ್ದುದೆಲ್ಲವನ್ನು ನಂಬಿಬಿಡುವನು; ಜಾಣನು ವಿವೇಚನೆ ಮಾಡಿ ಹೆಜ್ಜೆ ಇಡುವನು.
- Verse 16: ಬುದ್ಧಿವಂತನು ಕೇಡಿಗೆ ಅಂಜಿ ಓರೆಯಾಗುವನು; ಬುದ್ಧಿಹೀನನು ಸೊಕ್ಕಿನಿಂದ ಅದರತ್ತ ಧಾವಿಸುವನು.
- Verse 17: ಮುಂಗೋಪಿಗೆ ಬುದ್ಧಿಮಟ್ಟುಂಟು; ವಿವೇಕಿಗಾದರೊ ಸಹನೆಯುಂಟು.
- Verse 18: ದಡ್ಡರ ಸೊತ್ತು ಮೂಢತನ; ಜಾಣರಿಗೆ ಜ್ಞಾನವೆ ಭೂಷಣ.
- Verse 19: ಕೆಟ್ಟವರು ಒಳ್ಳೆಯವರಿಗೆ ಬಾಗಬೇಕಾಗುವುದು; ದುಷ್ಟರು ಸಜ್ಜನರ ಬಾಗಿಲಿಗೆ ಅಡ್ಡಬೀಳಬೇಕಾಗುವುದು.
- Verse 20: ಬಡವನನ್ನು ನೆರೆಯವರೂ ತುಚ್ಛವಾಗಿ ಕಾಣುವರು; ಹಣವಂತನಿಗಾದರೊ ಬಹುಜನ ಮಿತ್ರರು.
- Verse 21: ಹಸಿದವನನ್ನು ತಿರಸ್ಕರಿಸುವವನು ಪಾಪಿಷ್ಠನು; ದಲಿತರಿಗೆ ದಯೆ ತೋರಿಸುವವನು ಭಾಗ್ಯವಂತನು.
- Verse 22: ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.
- Verse 23: ದುಡಿಮೆಯಿಂದ ಸದಾ ಲಾಭವುಂಟು; ಬರಿ ಮಾತಿನಿಂದ ಬಡತನ ಬರುವುದುಂಟು.
- Verse 24: ಬುದ್ಧಿವಂತರ ಕಿರೀಟ ಅವರ ಜ್ಞಾನವೇ; ದಡ್ಡರ ಶಿರಮುಕುಟ ಅವರ ದಡ್ಡತನವೆ.
- Verse 25: ಸತ್ಯವಾಡುವವನ ಸಾಕ್ಷಿ ಪ್ರಾಣಕ್ಕೆ ರಕ್ಷಣೆ; ಸುಳ್ಳಾಡುವವನ ಮಾತು ಬರೀ ವಂಚನೆ.
- Verse 26: ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಇದೆ ದೃಢಭರವಸೆ; ಆತನ ಮಕ್ಕಳಿಗೆ ಆಶ್ರಯ ಇದ್ದೇ ಇರುತ್ತದೆ.
- Verse 27: ಸರ್ವೇಶ್ವರನಲ್ಲಿ ಭಯಭಕ್ತಿಯು ಜೀವಜಲದ ಚಿಲುಮೆಯು; ಮರಣಪಾಶದಿಂದ ತಪ್ಪಿಸಿಕೊಳ್ಳಲು ಅದುವೆ ಸಾಧನವು.
- Verse 28: ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.
- Verse 29: ದೀರ್ಘಶಾಂತನು ಬಹು ಬುದ್ಧಿವಂತನು; ಉಗ್ರಕೋಪಿ ಎತ್ತಿಹಿಡಿವನು ಮೂರ್ಖತನವನ್ನು.
- Verse 30: ಶಾಂತಗುಣವು ದೇಹಕ್ಕೆ ಆರೋಗ್ಯದಾಯಕವು; ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ ರೋಗವು.
- Verse 31: ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ನಿರ್ಗತಿಕನಿಗೆ ದಯೆತೋರಿಸುವವನು ಆತನನ್ನು ಘನಪಡಿಸುತ್ತಾನೆ.
- Verse 32: ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.
- Verse 33: ಬುದ್ಧಿವಂತರ ಹೃದಯ ಜ್ಞಾನದ ಆಶ್ರಯ; ಬುದ್ಧಿಹೀನರ ಹೃದಯ ಜ್ಞಾನದ ಶೂನ್ಯ.
- Verse 34: ಸದಾಚಾರದಿಂದ ನಾಡಿನ ಉನ್ನತಿ; ಅನಾಚಾರದಿಂದ ಅದರ ಅವನತಿ.
- Verse 35: ಜಾಣನಾದ ಸೇವಕನ ಮೇಲೆ ರಾಜನ ಕೃಪೆಯಿರುತ್ತದೆ; ಲಜ್ಜಾಸ್ಪದ ಸೇವಕನ ಮೇಲೆ ಅವನ ಕೋಪ ಎರಗುತ್ತದೆ.