ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
6ನೇ ಅಧ್ಯಾಯ
- Verse 1: ಮಾನವಕುಲವು ಜಗದ ಮೇಲೆ ಹಬ್ಬಿಹರಡಿದಂತೆ ಅವರಿಗೆ ಹೆಣ್ಣುಮಕ್ಕಳು ಹುಟ್ಟಿದರು.
- Verse 2: ಈ ಮನುಷ್ಯಪುತ್ರಿಯರ ಚೆಲುವನ್ನು ಕಂಡು ದೇವಪುತ್ರರು ತಮಗೆ ಇಷ್ಟಬಂದವರನ್ನೆಲ್ಲ ಮದುವೆಯಾದರು.
- Verse 3: ಆಗ ಸರ್ವೇಶ್ವರ ಸ್ಸ್ವಾಮಿ, “ನನ್ನ ಆತ್ಮವು ಮನುಷ್ಯನಿಗೆ ಶಾಶ್ವತವಾಗಿ ಹೊಣೆಯಾಗಿರಲಾರದು. ಭ್ರಷ್ಟರಾದ ಅವರು ಮರ್ತ್ಯರು. ಅವರ ಆಯುಷ್ಯ ಕೇವಲ ನೂರಿಪ್ಪತ್ತು ವರ್ಷ ಇರಲಿ” ಎಂದರು.
- Verse 4: ದೇವಪುತ್ರರೂ ಮನುಷ್ಯಪುತ್ರಿಯರೂ ಕೂಡಿ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದನಂತರವೂ ಜಗದಲ್ಲಿ ‘ನೆಪೀಲಿಯರು’ ಇದ್ದರು. ಇವರೇ ಪ್ರಾಚೀನಕಾಲದ ಸುಪ್ರಸಿದ್ಧ ಪರಾಕ್ರಮಿಗಳು.
- Verse 5: ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು.
- Verse 6: ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು,
- Verse 7: “ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ, ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು.
- Verse 8: ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರ ಸ್ವಾಮಿಗೆ ಮೆಚ್ಚುಗೆಯಿತ್ತು.
- Verse 9: ನೋಹನ ಚರಿತ್ರೆಯಿದು: ಆತ ಸತ್ಪುರುಷ, ಅವನಂಥ ನಿರ್ದೋಷಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ದೇವರೊಡನೆ ಆತ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ.
- Verse 10: ಆತನಿಗೆ ಶೇಮ್, ಹಾಮ್ ಮತ್ತು ಯೆಫೆತ್ ಎಂಬ ಮೂರು ಮಂದಿ ಮಕ್ಕಳು.
- Verse 11: ಜಗತ್ತು ದೇವರ ದೃಷ್ಟಿಯಲ್ಲಿ ಕೆಟ್ಟುಹೋಗಿತ್ತು. ಹಿಂಸಾಚಾರದಿಂದ ತುಂಬಿತುಳುಕುತ್ತಿತ್ತು.
- Verse 12: ಭೂನಿವಾಸಿಗಳೆಲ್ಲರು ತಮ್ಮ ನಡತೆಯನ್ನು ಕೆಡಿಸಿಕೊಂಡಿದ್ದರು.
- Verse 13: ಜಗವಿಡೀ ಕೆಟ್ಟುಹೋಗಿರುವುದನ್ನು ಕಂಡ ದೇವರು, ನೋಹನಿಗೆ, “ನರಮಾನವರೆಲ್ಲರಿಗೆ ಸರ್ವನಾಶವನ್ನು ತೀರ್ಮಾನಿಸಿದ್ದೇನೆ. ಜಗವೆಲ್ಲವು ಹಿಂಸಾಚಾರದಿಂದ ತುಂಬಿಹೋಗಿದೆ. ನಾನು ಅವರನ್ನೂ ಜಗದಲ್ಲಿರುವುದೆಲ್ಲವನ್ನೂ ಅಳಿಸಿಬಿಡುತ್ತೇನೆ.
- Verse 14: ನೀನು ತುರಾಯಿಮರದಿಂದ ನಾವೆಯೊಂದನ್ನು ಮಾಡಿಕೊ; ಅದರ ತುಂಬ ಕೊಠಡಿಗಳಿರಲಿ; ಅದರ ಒಳಕ್ಕೂ ಹೊರಕ್ಕೂ ರಾಳಪದಾರ್ಥವನ್ನು ಹಚ್ಚು.
- Verse 15: ಅದನ್ನು ಹೀಗೆ ಮಾಡು: ಅದರ ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ ಇರಲಿ.
- Verse 16: ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿ ಇಡು, ಪಕ್ಕದಲ್ಲಿ ಬಾಗಿಲಿರಲಿ; ಒಂದರ ಮೇಲೆ ಒಂದರಂತೆ ನಾವೆಯಲ್ಲಿ ಮೂರು ಅಂತಸ್ತುಗಳನ್ನು ಮಾಡು.
- Verse 17: ನಾನು ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಲಿದ್ದೇನೆ. ಅದು ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವುದು. ಭೂಮಿಯಲ್ಲಿರುವ ಸಮಸ್ತವೂ ನಾಶವಾಗುವುದು.
- Verse 18: ಆದರೆ ನಿನ್ನೊಡನೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ನೀನು ಹೆಂಡತಿ, ಮಕ್ಕಳು ಹಾಗೂ ಸೊಸೆಯರ ಸಮೇತ ನಾವೆಯನ್ನು ಹತ್ತಬೇಕು.
- Verse 19: ಅಲ್ಲದೆ, ನಿನ್ನೊಡನೆ ಬದುಕಿಸಲು ಜೀವಿಗಳ ಪ್ರತಿಯೊಂದು ಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು ಹೀಗೆ ಒಂದೊಂದು ಜೊತೆಯನ್ನು ನಾವೆಯಲ್ಲಿ ಸೇರಿಸಿಕೊ.
- Verse 20: ಪ್ರಾಣಿಪಕ್ಷಿ, ಕ್ರಿಮಿಕೀಟ ಇವುಗಳ ಸಕಲ ಜಾತಿಗಳಲ್ಲಿ ಎರಡೆರಡು ಬದುಕಿಬಾಳಲು ನಿನ್ನೊಡನೆ ಬರಲಿ.
- Verse 21: ಎಲ್ಲ ತರಹದ ಭೋಜನಪದಾರ್ಥಗಳನ್ನು ಶೇಖರಿಸಿಟ್ಟುಕೊ. ಅದು ನಿನಗೂ ಪ್ರಾಣಿಗಳಿಗೂ ಆಹಾರವಾಗುವುದು,” ಎಂದು ಹೇಳಿದರು.
- Verse 22: ನೋಹನು ಹಾಗೆಯೇ ಮಾಡಿದನು. ದೇವರ ಆಜ್ಞಾನುಸಾರ ನಡೆದುಕೊಂಡನು.