पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
66ನೇ ಅಧ್ಯಾಯ
- Verse 1: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
- Verse 2: ಹಾಡಲಿ ಆತನ ಶ್ರೀನಾಮ ಮಹಿಮೆಗೆ II
- Verse 3: “ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II
- Verse 4: ಜಗವೆಲ್ಲ ಪೂಜಿಪುದು ನಿನ್ನನು I ಪೊಗಳಿ ಮಾಳ್ಪುದು ಗುಣಗಾನವನು I ಕೀರ್ತಿಸುವುದು ನಿನ್ನ ನಾಮವನು” II
- Verse 5: ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II
- Verse 6: ಒಣನೆಲವಾಗಿ ಮಾರ್ಪಡಿಸಿದ ಕಡಲನು I ಕಾಲು ನಡೆಯಲೇ ದಾಟಿಸಿದ ನದಿಯನು I ಇದ ನಿಮಿತ್ತ ಪಡೆಯೋಣ ಆನಂದವನು II
- Verse 7: ಆತನಾಳ್ವಿಕೆ ಶಕ್ತಿಯುತ, ನಿರಂತರ I ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I ಜಂಬ ಕೊಚ್ಚದಿರಲಿ ದಂಗೆಕೋರ II
- Verse 8: ಜನಾಂಗಗಳೇ, ನಮಿಸಿರಿ ನಮ್ಮ ದೇವನನು I ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II
- Verse 9: ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I ಕಾಲೆಡವದಂತೆ ಕಾಪಾಡಿದನಯ್ಯಾ II
- Verse 10: ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ I ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ II
- Verse 11: ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ I ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ II
- Verse 12: ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ I ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ I ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ II
- Verse 13: ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ I ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ II
- Verse 14: ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು I ಸಂಕಟಕಾಲದಲಿ ನಾ ಮಾಡಿದ ವ್ರತವನು II
- Verse 15: ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ I ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ I ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ II
- Verse 16: ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II
- Verse 17: ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II
- Verse 18: ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II
- Verse 19: ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ I ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ II
- Verse 20: ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II