पवित्र बाइबिल
ಹೊಸ ಒಡಂಬಡಿಕೆ
ಮಾರ್ಕ
15ನೇ ಅಧ್ಯಾಯ
- Verse 1: ಬೆಳಗಾದ ಕೂಡಲೆ, ಮುಖ್ಯಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯಸಭೆಯ ಇತರ ಸದಸ್ಯರೂ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪ್ಪಿಸಿದರು.
- Verse 2: ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು.
- Verse 3: ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸುತ್ತಿದ್ದರು.
- Verse 4: ಆದುದರಿಂದ ಪಿಲಾತನು ಪುನಃ ಯೇಸುವನ್ನು, “ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೆ?” ಎಂದು ಕೇಳಿದನು.
- Verse 5: ಆದರೆ ಯೇಸು ಇನ್ನೊಂದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು.
- Verse 6: ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ, ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು.
- Verse 7: ದಂಗೆಯೊಂದರಲ್ಲಿ ಕೊಲೆ ಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎಂಬವನೂ ಸೆರೆಯಲ್ಲಿದ್ದನು.
- Verse 8: ಜನರ ಗುಂಪು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟುಕೊಡಬೇಕೆಂದು ಕೇಳಿದಾಗ ಪಿಲಾತನು,
- Verse 9: “ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?" ಎಂದು ಅವರನ್ನು ಕೇಳಿದನು.
- Verse 10: ಏಕೆಂದರೆ, ಮುಖ್ಯಯಾಜಕರು ಅಸೂಯೆಯಿಂದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು.
- Verse 11: ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮುಖ್ಯಯಾಜಕರು ಜನರನ್ನು ಪ್ರಚೋದಿಸಿದರು.
- Verse 12: ಆಗ ಪಿಲಾತನು ಪುನಃ, “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು.
- Verse 13: ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆಹಾಕಿದರು.
- Verse 14: “ಏಕೆ ಇವನೇನು ಮಾಡಿದ್ದಾನೆ?” ಎಂದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, “ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿದರು.
- Verse 15: ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ, ಶಿಲುಬೆಗೇರಿಸುವುದಕ್ಕೆ ಒಪ್ಪಿಸಿಬಿಟ್ಟನು.
- Verse 16: ಅನಂತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅಂಗಣದೊಳಕ್ಕೆ ಕೊಂಡೊಯ್ದು, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಕರೆದರು.
- Verse 17: ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು.
- Verse 18: ತರುವಾಯ, “ಯೆಹೂದ್ಯರ ಅರಸನಿಗೆ ಜಯವಾಗಲಿ,” ಎಂದು ನಾಟಕೀಯವಾಗಿ ವಂದಿಸಿದರು.
- Verse 19: ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು.
- Verse 20: ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡುಹೋದರು.
- Verse 21: ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು.
- Verse 22: ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ.
- Verse 23: ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ.
- Verse 24: ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅವರ ಬಟ್ಟೆಗಳನ್ನು ಯಾವುಯಾವುದು ಯಾರು ಯಾರಿಗೆ ಸಿಗಬೇಕೆಂದು ತಿಳಿಯಲು ಚೀಟುಹಾಕಿ ತಮ್ಮತಮ್ಮೊಳಗೆ ಹಂಚಿಕೊಂಡರು.
- Verse 25: ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯಾಗಿತ್ತು.
- Verse 26: ಅವರ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ‘ಈತ ಯೆಹೂದ್ಯರ ಅರಸ’ ಎಂದು ಬರೆಯಲಾಗಿತ್ತು.
- Verse 27: ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.
- Verse 28: (ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು).
- Verse 29: ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ,
- Verse 30: ಶಿಲುಬೆಯಿಂದ ಇಳಿದುಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು.
- Verse 31: ಅದೇ ಪ್ರಕಾರ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸೇರಿ ಅವರನ್ನು ಅಪಹಾಸ್ಯಮಾಡುತ್ತಾ, “ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು;
- Verse 32: ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದುಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು.
- Verse 33: ಆಗ ನಡುಮಧ್ಯಾಹ್ನ. ಆ ಹೊತ್ತಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
- Verse 34: ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
- Verse 35: ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!” ಎಂದರು.
- Verse 36: ಆಗ ಅವರಲ್ಲೊಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ, ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಡುತ್ತಾ, “ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ,” ಎಂದನು.
- Verse 37: ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
- Verse 38: ಆಗ ಮಹಾದೇವಾಲಯದ ತೆರೆ ಮೇಲಿನಿಂದ ಕೆಳಗಿನವರೆಗೂ ಇಬ್ಭಾಗವಾಗಿ ಸೀಳಿಹೋಯಿತು.
- Verse 39: ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು.
- Verse 40: ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಕೆಲವು ಮಹಿಳೆಯರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಸಲೋಮೆ ಇದ್ದರು.
- Verse 41: ಇವರು, ಯೇಸು ಗಲಿಲೇಯದಲ್ಲಿ ಇದ್ದಾಗ ಅವರನ್ನು ಹಿಂಬಾಲಿಸಿ, ಉಪಚಾರ ಮಾಡಿದ್ದರು. ಯೇಸುವಿನ ಸಂಗಡ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಮಹಿಳೆಯರು ಅಲ್ಲಿದ್ದರು.
- Verse 42: ಅಷ್ಟರಲ್ಲೇ ಸಂಜೆಯಾಗಿತ್ತು. ಸಬ್ಬತ್ತಿನ ಹಿಂದಿನ ದಿನವಾಗಿದ್ದ ಅಂದು ‘ಸಿದ್ಧತೆ’ಯ ದಿನ ಆಗಿತ್ತು. ಆದುದರಿಂದ ಅರಿಮತಾಯ ಊರಿನ ಜೋಸೆಫ್ ಎಂಬಾತನು ಧೈರ್ಯತಂದುಕೊಂಡು, ಪಿಲಾತನ ಸಾನ್ನಿಧ್ಯಕ್ಕೆ ಹೋಗಿ, ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು
- Verse 43: ತನಗೆ ಕೊಡಿಸಬೇಕೆಂದು ಪಿಲಾತನನ್ನು ಕೇಳಿಕೊಂಡನು. ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದ ಈತನು ಯೆಹೂದ್ಯರ ನ್ಯಾಯಸಭೆಯ ಸನ್ಮಾನಿತ ಸದಸ್ಯನಾಗಿದ್ದನು.
- Verse 44: ಯೇಸು ಇಷ್ಟುಬೇಗನೆ ಸತ್ತಿದ್ದಾರೆಂದು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಅವನು ಶತಾಧಿಪತಿಯನ್ನು ಕರೆಯಿಸಿ, “ಯೇಸು ಈಗಾಗಲೇ ಮೃತನಾದನೋ?” ಎಂದು ವಿಚಾರಿಸಿದನು.
- Verse 45: ಯೇಸು ಸತ್ತಿದ್ದಾರೆಂದು ಅವನಿಂದ ತಿಳಿದುಕೊಂಡು ಪಾರ್ಥಿವ ಶರೀರವನ್ನು ಜೋಸೆಫನಿಗೆ ಕೊಡಿಸಿದನು.
- Verse 46: ಜೋಸೆಫನು ನಾರುಮಡಿ ವಸ್ತ್ರವನ್ನು ಕೊಂಡುಕೊಂಡು ಬಂದು, ಯೇಸುವನ್ನು ಶಿಲುಬೆಯಿಂದ ಇಳಿಸಿ, ಆ ವಸ್ತ್ರದಿಂದ ಸುತ್ತಿದನು. ಅನಂತರ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಅದನ್ನಿರಿಸಿ, ಸಮಾಧಿಯ ದ್ವಾರಕ್ಕೆ ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಿದನು.
- Verse 47: ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿ ಮರಿಯಳು ಯೇಸುವಿನ ಪಾರ್ಥಿವ ಶರೀರವನ್ನು ಸಮಾಧಿಮಾಡಿದ್ದ ಸ್ಥಳವನ್ನು ಗುರುತಿಸಿಕೊಂಡರು.