పరిశుద్ధ గ్రంథము
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
20ನೇ ಅಧ್ಯಾಯ
- Verse 1: ಬಳಿಕ ನಾಮಾಥ್ಯನಾದ ಚೋಫರನು ಹೀಗೆಂದನು:
- Verse 2: “ನಿನಗೆ ಉತ್ತರಕೊಡಲು ನಾನು ತವಕಪಡುತ್ತಿರುವೆ ನನ್ನ ನೊಂದ ಮನ ನನಗೆ ಪ್ರತ್ಯುತ್ತರ ಹೇಳಿಕೊಡುತ್ತದೆ:
- Verse 3: ನನಗೆ ಅವಮಾನ ತರುವ ನಿನ್ನ ಖಂಡನೆಯನು ಕೇಳಿದ್ದೇನೆ ನನ್ನ ಮನ ತನ್ನ ವಿವೇಚನೆ ಕಲಿಸಿದ ಉತ್ತರವನು ತಿಳಿಸುತ್ತಿದೆ.
- Verse 4: ಆದಿಯಿಂದಲೆ, ನರನನ್ನು ಧರೆಯಮೇಲೆ ಇರಿಸಿದಂದಿನಿಂದಲೆ, ನಡೆದುಬರುತ್ತಿರುವ ಈ ವಿಷಯ ನಿನಗೆ ತಿಳಿಯದೆ?
- Verse 5: ದುಷ್ಟನ ಜಯಘೋಷ ಅಲ್ಪಕಾಲದ್ದು ಭ್ರಷ್ಟನ ಉಲ್ಲಾಸ ಕ್ಷಣಿಕವಾದದ್ದು.
- Verse 6: ಅವನ ಪ್ರತಿಷ್ಠೆ ಆಕಾಶಕ್ಕೆ ಏರಿದರೂ ಅವನ ತಲೆ ಮೋಡಗಳನು ಮುಟ್ಟಿದರೂ,
- Verse 7: ತನ್ನ ಮಲದ ಹಾಗೆ ನಿತ್ಯಕ್ಕು ಅವನು ನಶಿಸಿಹೋಗುವನು ಅವನನು ಅರಿತವರೆಲ್ಲರೂ “ಅವನೆಲ್ಲಿಯೋ!’ ಎಂದು ಹೇಳುವರು.
- Verse 8: ಸ್ವಪ್ನದಂತೆ ಅವನು ಸಿಗದೆ ಹಾರಿಹೋಗುವನು ರಾತ್ರಿಯ ಕನಸಿನಂತೆ ಓಡಿಹೋಗುವನು.
- Verse 9: ಕಂಡವನ ಕಣ್ಣಿಗೆ ಅವನು ಮತ್ತೆ ಕಾಣಿಸನು ಅವನ ನಿವಾಸ ಮತ್ತೆ ಅವನನು ನೋಡದು.
- Verse 10: ಅವನ ಮಕ್ಕಳು ಬಡವರಿಗೆ ಪರಿಹಾರವನು ತೆರುವರು ಅವನ ಕೈಗಳೆ ಅವನಾಸ್ತಿಯನು ಹಿಂತಿರುಗಿಸಬೇಕಾಗುವುದು.
- Verse 11: ಯೌವನ ಅವನ ದೇಹದಲ್ಲಿ ತುಂಬಿತ್ತು ಅದು ಕೂಡ ಅವನ ಸಮೇತ ಧೂಳಿನಲಿ ಮಲಗುವುದು.
- Verse 12: ಕೆಡಕುತನ ಸಿಹಿಯಾಗಿತ್ತು ಅವನ ಬಾಯಿಗೆ ಬಚ್ಚಿಟ್ಟುಕೊಂಡಿದ್ದನು ಅದನ್ನು ನಾಲಿಗೆ ಕೆಳಗೆ.
- Verse 13: ಅದನ್ನು ಬಿಟ್ಟುಕೊಡಲು ಅವನಿಗೆ ಇಷ್ಟವಿಲ್ಲ ಬಾಯಲ್ಲೇ ಇಟ್ಟುಕೊಳ್ಳುತ್ತಾನೆ ಚಪ್ಪರಿಸುತ್ತಾ.
- Verse 14: ಆದರೆ ಆ ತಿಂಡಿ ತಿಂದ ಮೇಲೆ ಮಾರ್ಪಡುವುದು ಅವನ ಕರುಳೊಳಗೆ ನಾಗರವಿಷವಾಗುವುದು.
- Verse 15: ನುಂಗಿದ ಗಂಟನು ಅವನು ಹೊರಗೆ ಕಕ್ಕುವನು ಹೊಟ್ಟೆಯಿಂದ ದೇವರು ಅದನು ಹೊರಡಿಸುವನು.
- Verse 16: ಅವನು ಹೀರುವುದು ನಾಗರವಿಷವನು ಸರ್ಪದ ನಾಲಿಗೆ ಕೊಲ್ಲುವುದು ಅವನನು.
- Verse 17: ಅವನು ನೋಡನು ಎಣ್ಣೆ ಹರಿವ ಕಾಲುವೆಗಳನು ಜೇನು ಹಾಲು ತುಂಬಿ ಹರಿವ ನದಿಗಳನು.
- Verse 18: ತಾನು ದುಡಿದು ಗಳಿಸಿದ್ದನ್ನು ತಿಂದು ಅನುಭವಿಸಲಾರನು ಅದು ಪರರ ಪಾಲಾಗುವುದು ವ್ಯಾಪಾರದಿಂದ ಬಂದ ವರಮಾನ ಅವನಿಗೆ ಆನಂದ ತರದು.
- Verse 19: ಏಕೆಂದರೆ ಬಡವರನು ತುಳಿದು ತೊರೆದುಬಿಟ್ಟ ತಾನು ಕಟ್ಟದ ಮನೆಯನು ಕಿತ್ತುಕೊಂಡುಬಿಟ್ಟ.
- Verse 20: ಅವನ ಆಕಾಂಕ್ಷೆಗೆ ತೃಪ್ತಿಯೇ ಇಲ್ಲ ಅವನ ಸಿರಿಸಂಪತ್ತು ಅವನನ್ನು ರಕ್ಷಿಸುವುದಿಲ್ಲ.
- Verse 21: ಏನನ್ನೂ ಬಿಡದೆ ಕಬಳಿಸಿದ ಅವನ ಸಂತಾನಕ್ಕೆ ಉಳಿಗಾಲವಿಲ್ಲ.
- Verse 22: ಸಮೃದ್ಧಿಯಿಂದಿರುವಾಗಲೇ ಕೊರತೆ ಅವನನ್ನು ಕಾಡುವುದು ಶ್ರಮಜೀವಿಗಳೆಲ್ಲರ ಕೈ ಅವನ ಮೇಲೆ ಎರಗುವುದು.
- Verse 23: ಅವನು ಹೊಟ್ಟೆಯನು ತುಂಬಿಸಿಕೊಳ್ಳುವಾಗಲೇ ದೇವರು ಸುರಿಸುವರು ಕೋಪಾಗ್ನಿಯನು ಆಹಾರದಂತೆ.
- Verse 24: ಕಬ್ಬಿಣದ ಆಯುಧಕ್ಕೆ ಹೆದರಿ ಓಡಿದ ಆದರೆ ಅವನನು ಇರಿಯಿತು ಕಂಚಿನ ಬಾಣ.
- Verse 25: ಆ ಬಾಣವನು ಕೀಳಲು ಅದು ಹೊರಬಂತು ಅವನ ಬೆನ್ನಿನಿಂದ ಅದರ ಮಿಂಚುಮೊನೆ ಆಚೆಬಂತು ಅವನ ಪಿತ್ತಕೋಶದಿಂದ ಅವನನು ಆವರಿಸಿಕೊಂಡಿತು ಭಯಭ್ರಾಂತ.
- Verse 26: ಅವನ ನಿಧಿನಿಕ್ಷೇಪಕ್ಕಾಗಿ ಕಾರಿರುಳು ಕಾದಿದೆ ಯಾರೂ ಹೊತ್ತಿಸದ ಬೆಂಕಿ ಅವನನು ಕಬಳಿಸಲಿದೆ ಅವನ ಗುಡಾರದಲಿ ಉಳಿದದ್ದೆಲ್ಲ ನಾಶವಾಗಲಿದೆ.
- Verse 27: ಆಕಾಶವೇ ಅವನ ದೋಷವನು ಪ್ರಕಟಿಸುವುದು ಭೂಲೋಕವೇ ಅವನ ವಿರುದ್ಧ ಸಾಕ್ಷಿನಿಲ್ಲುವುದು.
- Verse 28: ಅವನ ಮನೆಯ ಧನಧಾನ್ಯ ಹಾಳಾಗುವುದು ದೇವರ ಸಿಟ್ಟಿನಾದಿನ ನೀರುಪಾಲಾಗುವುದು.
- Verse 29: ಇದುವೆ ದುರುಳನಿಗೆ ದೇವರು ವಿಧಿಸುವ ಭಾಗ್ಯ ದೇವರಿಂದ ಅವನಿಗೆ ನೇಮಿಸಲಾಗಿರುವ ಸ್ವಾಸ್ತ್ಯ.”