पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
22ನೇ ಅಧ್ಯಾಯ
- Verse 1: ದೇವಾ, ಓ ಎನ್ನ ದೇವಾ, ಏಕೆನ್ನ ಕೈಬಿಟ್ಟೆ? I ಕಿವಿಗೊಡದೆ ಏಕೆ ದೂರವಾಗಿಬಿಟ್ಟೆ? II
- Verse 2: ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ I ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ II
- Verse 3: ಆದರೂ ದೇವಾ, ನೀನಂತು ಪರಮಪೂಜ್ಯನು I ಇಸ್ರಯೇಲರ ಸ್ತುತ್ಯ ಸಿಂಹಾಸನದಲಿ ಆಸೀನನು II
- Verse 4: ನಿನ್ನಲಿ ಭರವಸೆಯಿತ್ತರು ನಮ್ಮ ಪೂರ್ವಜರು I ಉದ್ಧಾರವಾದರು ನಿನ್ನ ನಂಬಿದವರೆಲ್ಲರು II
- Verse 5: ನಿನಗೆ ಮೊರೆಯಿಟ್ಟವರು ವಿಮುಕ್ತರಾದರಯ್ಯಾ I ವಿಶ್ವಾಸವಿಟ್ಟು ಹತಾಶರಾಗಲಿಲ್ಲವಯ್ಯಾ II
- Verse 6: ಮನುಜ ನಾನು, ಕ್ರಿಮಿಕೀಟಕೆ ಸಮಾನನು I ಅಲಕ್ಷಿತನು, ಪರರಿಂದ ತಿರಸ್ಕೃತನು II
- Verse 7: ನೋಡುವವರೆಲ್ಲಾ ಎನ್ನನಣಕಿಸುತಿಹರು I ತುಟಿಯೋರೆ ಮಾಡಿ ತಲೆಯಾಡಿಸುತಿಹರು II
- Verse 8: “ಇತ್ತನಿವನು ಭರವಸೆ, ಪ್ರಭುವೆ ತನ್ನುದ್ಧಾರಕನೆಂದು I ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ” - ಇಂತೆಂದು II
- Verse 9: ಮಾತೆಯುದರದಿಂದ ಎನ್ನನು ಹೊರಬರಿಸಿದವನು ನೀನು I ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಲಿ ಇರಿಸಿದವನು ನೀನು II
- Verse 10: ಆಗರ್ಭದಿಂದಲೆ ನೀನೆನಗಧಾರ I ತಾಯಿ ಹೆತ್ತಂದಿನಿಂದಲೇ ಕರ್ತಾರ II
- Verse 11: ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ I ನನ್ನಿಂದ ನೀ ದೂರಸರಿವುದು ಸರಿಯಲ್ಲ II
- Verse 12: ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು I ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು II
- Verse 13: ಗರ್ಜಿಸುವ ಉಗ್ರಸಿಂಹಗಳಂತೆ ವೈರಿಗಳು I ಕಾದಿಹರು ಬಾಯಿ ತೆರೆದು ನನ್ನ ಕಬಳಿಸಲು II
- Verse 14: ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ I ಎಲುಬುಗಳು ಅಲುಗಿವೆ, ಎದೆ ಕರಗಿದೆ ಮೇಣದಂತೆ II
- Verse 15: ಎನ್ನ ಗೋಣು ಒಣಗಿಹೋಗಿದೆ ಒಡೆದ ಮಡಕೆಯಂತೆ I ಅಂಗುಳಕೆ ಜಿಹ್ವೆ ಅಂಟಿದೆ; ಮಣ್ಣಿಗೆನ್ನ ಸೇರಿಸಿದೆ II
- Verse 16: ಮುತ್ತಿದೆ ದುರುಳರ ಹಿಂಡು; ಸುತ್ತಿವೆ ಕುನ್ನಿಗಳು I ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು II
- Verse 17: ಎಣಿಸಬಹುದಿದೆ ನನ್ನೆಲುಬುಗಳೆಲ್ಲವನು I ಹಿಗ್ಗುತಿಹರು ದುರುಗುಟ್ಟಿ ನೋಡೆನ್ನನು II
- Verse 18: ನನ್ನ ಉಡುಗೆಗಳನ್ನು ಹಂಚಿಕೊಂಡರು I ನನ್ನ ಅಂಗಿಗೋಸ್ಕರ ಚೀಟುಹಾಕಿದರು II
- Verse 19: ನನ್ನಿಂದ ದೂರ ಸರಿಯಲುಬೇಡ, ಪ್ರಭು I ನೀನೆನ್ನ ಶಕ್ತಿ, ನೆರವಾಗಲು ತ್ವರೆಮಾಡು II
- Verse 20: ಕತ್ತಿಗೆ ತುತ್ತಾಗದಂತೆ ತಪ್ಪಿಸು I ಕುಕ್ಕುರಗಳಿಂದ ಪ್ರಾಣವನುಳಿಸು II
- Verse 21: ರಕ್ಷಿಸೆನ್ನನು ಸಿಂಹದ ಬಾಯಿಂದ I ಬಿಡಿಸು ಕಾಡುಕೋಣದ ಕೊಂಬಿನಿಂದ II
- Verse 22: ಸೋದರರಿಗೆ, ಸಾರುವೆ ನಿನ್ನ ನಾಮ ಮಹಿಮೆಯನ್ನು I ತುಂಬಿದ ಸಭೆಯಲಿ ಮಾಡುವೆ, ನಿನ್ನ ಸ್ತುತಿಯನ್ನು II
- Verse 23: ಮಣಿಯಿರಿ, ಪ್ರಭುವಿನಲಿ ಭಯಭಕುತಿಯುಳ್ಳವರೇ I ಭಜಿಸಿರಿ ಇಸ್ರಯೇಲರೇ, ಯಾಕೋಬ ಕುಲಜರೇ II
- Verse 24: ತೃಣೀಕರಿಸನು, ತಿರಸ್ಕರಿಸನು ದಲಿತನನು I ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು II
- Verse 25: ಪ್ರಭು, ನೀನೆ ಸ್ಪೂರ್ತಿ, ತುಂಬುಸಭೆಯಲಿ ನಾ ಮಾಳ್ಪ ಸ್ತುತಿಗೆ I ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ II
- Verse 26: ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ I ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ II
- Verse 27: ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುಗೆ I ಸಾಷ್ಟಾಂಗವೆರಗುವುವು ಧರೆಯ ಸರ್ವಜನಾಂಗಗಳು ಆತನಿಗೆ II
- Verse 28: ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವು I ಆತನದೆ ರಾಷ್ಟ್ರಗಳ ಒಡೆತನವೆಲ್ಲವು II
- Verse 29: ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು I ಅಡ್ಡಬೀಳುವರವನಿಗೆ ಮರ್ತ್ಯಮಾನವರೆಲ್ಲರು II
- Verse 30: ವಂದಿಪುದು ಪ್ರಭುವನು ಮುಂದಿನ ಪೀಳಿಗೆ I ಸಾರುವುದಾತನ ವದಂತಿಯನು ಜನರಿಗೆ II
- Verse 31: ಸಾರುವರು ಮುಂದಿನ ಜನತೆಗುದ್ಧಾರವನು I ಅರುಹುವರು ಆತನೆಸಗಿದ ಮಹತ್ಕಾರ್ಯವನು II