ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಅರಸುಗಳು
24ನೇ ಅಧ್ಯಾಯ
- Verse 1: ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರ್ಷಗಳಾದ ನಂತರ ಅವನಿಗೆ ವಿರುದ್ಧ ದಂಗೆಯೆದ್ದನು.
- Verse 2: ಸರ್ವೇಶ್ವರ, ತನ್ನ ದಾಸರಾದ ಪ್ರವಾದಿಗಳ ಮುಖಾಂತರ ಮುಂತಿಳಿಸಿದ ಪ್ರಕಾರ ಜುದೇಯ ರಾಜ್ಯವನ್ನು ಹಾಳುಮಾಡುವುದಕ್ಕಾಗಿ ಬಾಬಿಲೋನಿಯ, ಸಿರಿಯ, ಮೋಬಾವ, ಅಮ್ಮೋನ್ ದೇಶೀಯರಾದ ಸುಲಿಗೆಗಾರರನ್ನು ಕಳುಹಿಸಿದರು.
- Verse 3: ನಿರಪರಾಧಿಗಳ ಹತ್ಯೆಯಿಂದ ಜೆರುಸಲೇಮನ್ನು ರಕ್ತಮಯವಾಗಿಸಿದ್ದ ಮನಸ್ಸೆಯ ದುಷ್ಕೃತ್ಯಗಳನ್ನು ಸರ್ವೇಶ್ವರ ಕ್ಷಮಿಸದೆ ಹೋದರು;
- Verse 4: ಅವುಗಳಿಗಾಗಿ ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದುದರಿಂದ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಈ ಶಿಕ್ಷೆ ಅವರಿಗೆ ವಿಧಿಸಲಾಯಿತು.
- Verse 5: ಯೆಹೋಯಾಕೀಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
- Verse 6: ಅವನು ಮೃತನಾಗಿ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಯೆಹೋಯಾಖೀನನು ಅರಸನಾದನು.
- Verse 7: ಬಾಬಿಲೋನಿನ ಅರಸನು ಈಜಿಪ್ಟಿನ ಪ್ರವಾಹಕ್ಕೂ ಯೂಫ್ರಟಿಸ್ ನದಿಗೂ ಮಧ್ಯದಲ್ಲಿದ್ದ ಈಜಿಪ್ಟ್ ರಾಜನ ಎಲ್ಲಾ ದೇಶವನ್ನು ಸ್ವಾಧೀನ ಮಾಡಿಕೊಂಡನು. ಅಂದಿನಿಂದ ಈಜಿಪ್ಟಿನ ಅರಸನು ತನ್ನ ದೇಶದಿಂದ ಈಚೆಗೆ ಬರಲೇ ಇಲ್ಲ.
- Verse 8: ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ.
- Verse 9: ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
- Verse 10: ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು.
- Verse 11: ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು.
- Verse 12: ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು.
- Verse 13: ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು.
- Verse 14: ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ.
- Verse 15: ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ,
- Verse 16: ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು.
- Verse 17: ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.
- Verse 18: ಚಿದ್ಕೀಯನು ಇಪ್ಪತ್ತೊಂದು ವರ್ಷ ತುಂಬಿದ ಮೇಲೆ ಅರಸನಾಗಿ ಜೆರುಸಲೇಮನ್ನು ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆ.
- Verse 19: ಚಿದ್ಕೀಯನು ಯೆಹೋಯಾಕೀಮನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿ ಇದ್ದನು.
- Verse 20: ಸರ್ವೇಶ್ವರಸ್ವಾಮಿ ಬಹಳ ಕೋಪಗೊಂಡು ಜೆರುಸಲೇಮಿನವರ ಮೇಲೂ ಬೇರೆ ಎಲ್ಲ ಯೆಹೂದ್ಯರ ಮೇಲೂ ಇದನ್ನೆಲ್ಲ ಬರಮಾಡಿ, ಕಡೆಗೆ ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.