पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
33ನೇ ಅಧ್ಯಾಯ
- Verse 1: ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ I ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ II
- Verse 2: ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ I ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ II
- Verse 3: ನೂತನ ಕೀರ್ತನೆಯನು ಆತನಿಗೆ ಹಾಡಿರಿ I ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ II
- Verse 4: ಸತ್ಯವಾದುದು ಆತನ ಪವಿತ್ರ ವಾಕ್ಯ I ಸ್ತುತ್ಯವಾದುದು ಆತನ ಪುನೀತ ಕಾರ್ಯ II
- Verse 5: ಸತ್ಯಸಂಧನು, ನ್ಯಾಯಪ್ರಿಯನು ಆತನು I ಅಚಲಪ್ರೀತಿಯಿಂದ ಜಗವನು ತುಂಬಿಹನು II
- Verse 6: ಸೃಷ್ಟಿಯಾಯಿತು ಗಗನ ಮಂಡಲ ಆತನ ನುಡಿಯೊಂದಕೆ I ರೂಪುಗೊಂಡಿತು ತಾರಾ ಮಂಡಲ ಅವನುಸಿರು ಮಾತ್ರಕೆ II
- Verse 7: ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ ಕುಡಿಕೆಯಲಿ I ಕೂಡಿಟ್ಟಿಹನು ಜಲಾಶಯಗಳನು ಬುವಿಯುಗ್ರಾಣದಲಿ II
- Verse 8: ಪೊಡವಿಯೆಲ್ಲವು ಭಯಪಡಲಿ ಪ್ರಭುವಿಗೆ I ಅಡಗಿ ನಡೆಯಲಿ ನಾಡಿಗರೆಲ್ಲ ಆತನಿಗೆ II
- Verse 9: ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ I ಸ್ಥಾಪನೆಯಾಯಿತು ಅವನ ಅಣತಿಯೊಂದಕೆ II
- Verse 10: ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು I ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು II
- Verse 11: ಪ್ರಭುವಿನ ಯೋಜನೆ ಶಾಶ್ವತ I ಅವನ ಸಂಕಲ್ಪ ಅನವರತ II
- Verse 12: ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ I ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ II
- Verse 13: ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ I ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ II
- Verse 14: ಸ್ಥಾವರ ಸಿಂಹಾಸನದಿಂದ ನೋಡುತಿಹನು I ಸರ್ವ ಭೂನಿವಾಸಿಗಳನು ಪರಿಶೀಲಿಸುತಿಹನು II
- Verse 15: ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು I ಅವರವರ ಕೃತ್ಯಗಳನು ಪರೀಕ್ಷಿಸುತಿಹನು II
- Verse 16: ಅರಸನಾವನು ವಿಜೇತನಾಗನು ಮಹಾ ಸೇನಾಬಲದಿಂದಲೆ I ಶೂರನಾವನು ಜಯಶೀಲನಾಗನು ಕೇವಲ ಭುಜಬಲದಿಂದಲೆ II
- Verse 17: ಪ್ರಾಣರಕ್ಷಣೆಗೆ ಸಾಲದು ಅಶ್ವದಳ I ಆತ್ಮರಕ್ಷಣೆಗೆ ಬಾರದು ಅಶ್ವಬಲ II
- Verse 18: ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II
- Verse 19: ತಪ್ಪಿಸುವನವನು ಪ್ರಾಣವನು ಮರಣದಿಂದ I ಉಳಿಸುವನು ಜೀವವನು ಕ್ಷಾಮಡಾಮರದಿಂದ II
- Verse 20: ಕಾದಿದೆ ಎನ್ನ ಮನ ಪ್ರಭುವಿಗಾಗಿ I ಆತನಿಹನು ಎನಗೆ ಗುರಾಣಿಯಾಗಿ II
- Verse 21: ನೆಮ್ಮದಿಯಿಂದಿದೆ ಎನ್ನ ಮನ ಆತನಲಿ I ನಂಬಿರುವೆವು ಆತನ ಶ್ರೀ ನಾಮದಲಿ II
- Verse 22: ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II