ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
29ನೇ ಅಧ್ಯಾಯ
- Verse 1: ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು.
- Verse 2: ಸಜ್ಜನರ ಅಧಿಕಾರದಿಂದ ಜನರಿಗೆ ನಲಿದಾಟ; ದುರ್ಜನರ ಆಳ್ವಿಕೆಯಿಂದ ಜನರಿಗೆ ನರಳಾಟ.
- Verse 3: ಜ್ಞಾನಪ್ರಿಯ ಮಗನಿಂದ ತಂದೆಗೆ ಸಂತೋಷ; ವೇಶ್ಯೆಯರ ಸಂಗದಿಂದ ಆಸ್ತಿ ವಿನಾಶ.
- Verse 4: ನ್ಯಾಯಪಾಲಕ ರಾಜನಿಂದ ನಾಡಿನ ಅಭಿವೃದ್ಧಿ; ಲಂಚಕೋರ ಅರಸನಿಂದ ದೇಶ ಹಿಡಿವುದು ವಿನಾಶದ ಹಾದಿ.
- Verse 5: ನೆರೆಯವನನ್ನು ಅಳತೆಮೀರಿ ಹೊಗಳುವವನು ಅವನ ಕಾಲಿಗೆ ಬಲೆಯನ್ನು ಒಡ್ಡುವನು.
- Verse 6: ಕೆಟ್ಟವನು ತನ್ನ ಪಾಪಪಾಶದಲ್ಲೆ ಸಿಕ್ಕಿಬೀಳುವನು; ಒಳ್ಳೆಯವನು ಉಲ್ಲಾಸದಿಂದ ಹಾಡಿ ಹರ್ಷಿಸುವನು.
- Verse 7: ನೀತಿವಂತನು ದಲಿತರ ಹಕ್ಕುಬಾಧ್ಯತೆಯನ್ನು ಕಾದಿರಿಸುವನು; ದುಷ್ಟರಿಗಿಲ್ಲ ಅದನ್ನು ಗ್ರಹಿಸುವಷ್ಟು ಅಕ್ಕರೆ.
- Verse 8: ಕುಚೋದ್ಯರು ಪಟ್ಟಣಕ್ಕೆ ಬೆಂಕಿ ಹಚ್ಚುವರು; ಜ್ಞಾನಿಗಳೊ ರೋಷಾಗ್ನಿಯನ್ನು ಆರಿಸುವರು.
- Verse 9: ಮೂರ್ಖನ ಸಂಗಡ ಜ್ಞಾನಿ ತರ್ಕಮಾಡಿದ್ದೆ ಆದರೆ ಆ ಮೂರ್ಖ ರೇಗಬಹುದು, ನಗಬಹುದು, ತರ್ಕಮಾತ್ರ ಮುಗಿಯದು.
- Verse 10: ಕೊಲೆಪಾತಕರು ನೀತಿವಂತನನ್ನು ದ್ವೇಷಿಸುವರು; ಅಂಥವನ ಪ್ರಾಣಕ್ಕೂ ಹೊಂಚುಹಾಕುವರು.
- Verse 11: ಮೂಢನು ತನ್ನ ಕೋಪವನ್ನೆಲ್ಲ ವ್ಯಕ್ತಪಡಿಸುವನು; ಜ್ಞಾನಿ ತನ್ನ ಕೋಪವನ್ನು ತಡೆಹಿಡಿದು ಶಮನಗೊಳ್ಳುವನು.
- Verse 12: ಸುಳ್ಳುವರದಿಗೆ ಕಿವಿಗೊಡುವ ರಾಜಸೇವಕರೆಲ್ಲರು ದುರುಳರು.
- Verse 13: ದಲಿತನೂ, ದಬ್ಬಾಳಿಕೆ ನಡೆಸುವವನೂ ಸ್ಥಿತಿಯಲ್ಲಿ ಎದುರುಬದುರು; ಆದರೆ ಸರ್ವೇಶ್ವರನೆ ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವವನು.
- Verse 14: ಬಡಬಗ್ಗರನ್ನು ನ್ಯಾಯವಾಗಿ ಆಳುವ ಅರಸನ ಸಿಂಹಾಸನ ಸದಾ ಸುಭದ್ರ.
- Verse 15: ಬೆತ್ತ ಬೆದರಿಕೆಗಳು ಜ್ಞಾನ ತರುತ್ತವೆ; ಶಿಕ್ಷಿಸದೆ ಬಿಟ್ಟ ಮಗನು ತಾಯಿಗೆ ತರುತ್ತಾನೆ ಅಪಕೀರ್ತಿ.
- Verse 16: ದುಷ್ಟರ ವೃದ್ಧಿ ಪಾಪಾಭಿವೃದ್ಧಿ; ಅವರ ಪತನವನ್ನು ಸಜ್ಜನರು ಕಣ್ಣಾರೆ ಕಾಣುವರು.
- Verse 17: ನಿನ್ನ ಮಗನನ್ನು ದಂಡಿಸಿ ಸರಿಪಡಿಸು; ಅವನು ನಿನ್ನನ್ನು ಸಂತೋಷಪಡಿಸುವನು, ಮನೋಲ್ಲಾಸಗೊಳಿಸುವನು.
- Verse 18: ಪ್ರವಾದನೆಗಳಿಲ್ಲದಿರುವಾಗ ಪ್ರಜೆಗಳು ಅಂಕೆಮೀರಿ ನಡೆಯುತ್ತಾರೆ, ಧರ್ಮಶಾಸ್ತ್ರಾನುಸಾರ ನಡೆಯುವವನು ಭಾಗ್ಯವಂತನು.
- Verse 19: ಮಾತಿನಿಂದ ಮಾತ್ರ ಸೇವಕನನ್ನು ತಿದ್ದಲಾಗದು; ಮಾತು ಕಿವಿಗೆ ಬಿದ್ದರೂ ಅದನ್ನು ಗ್ರಹಿಸಲಾರದು.
- Verse 20: ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲು ಮೂಢನ ಸುಧಾರಣೆ ಹೆಚ್ಚು ಸಾಧ್ಯ.
- Verse 21: ಬಾಲ್ಯದಿಂದ ಕೋಮಲವಾಗಿ ಸಾಕಲಾದ ಸೇವಕನು, ಕೊನೆಗೆ ಕುಮಾರನಂತೆ ನಿನ್ನದೆಲ್ಲವನ್ನು ಕಿತ್ತುಕೊಂಡಾನು.
- Verse 22: ಕೋಪಿಷ್ಠನು ಜಗಳವೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.
- Verse 23: ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ಇಳಿಸುವುದು; ನಮ್ರತೆ ಅವನನ್ನು ಗೌರವಸ್ಥಿತಿಗೆ ಏರಿಸುವುದು.
- Verse 24: ಚೋರರ ಮಿತ್ರ ಸ್ವಂತ ಪ್ರಾಣಕ್ಕೆ ಶತ್ರು, ಶಾಪ ಕಿವಿಗೆ ಬೀಳುತ್ತಿದ್ದರೂ ಆತ ಮೌನ ತಾಳುವನು.
- Verse 25: ಮಾನವರಿಗೆ ಹೆದರಿ ನಡೆವವನು ಬಲೆಗೆ ಸಿಕ್ಕಿಬೀಳುವನು; ಸರ್ವೇಶ್ವರನಲ್ಲಿ ನಂಬಿಕೆಯಿಟ್ಟವನು ಸಂರಕ್ಷಣೆ ಹೊಂದುವನು.
- Verse 26: ರಾಜ್ಯಾಧಿಕಾರಿಗಳಲ್ಲಿ ದಯೆ ಯಾಚಿಸುವವರು ಅನೇಕರು; ಪ್ರತಿಯೊಬ್ಬನಿಗೆ ಸರಿಯಾದ ನ್ಯಾಯ ದೊರಕಿಸುವವನು ಸರ್ವೇಶ್ವರನು.
- Verse 27: ಸಜ್ಜನರಿಗೆ ದುರ್ಮಾರ್ಗಿ ತಿರಸ್ಕೃತನು; ದುರ್ಜನರಿಗೆ ಸನ್ಮಾರ್ಗಿ ತಿರಸ್ಕೃತನು.