ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
73ನೇ ಅಧ್ಯಾಯ
- Verse 1: ದೇವನು ಎನಿತೋ ಒಳ್ಳೆಯವನು ಇಸ್ರಯೇಲಿಗೆ I ದಯಾಪರನಾತನು ಶುದ್ಧಹೃದಯಿಗಳಿಗೆ II
- Verse 2: ದುರ್ಜನರು ಧನಿಕರಾಗುವುದ ಕಂಡಾಗ I ಗರ್ವಿಗಳ ನೋಡಿ ನಾನಸೂಯೆಗೊಂಡಾಗ II
- Verse 3: ತಡವರಿಸಿದವು ನನ್ನ ಕಾಲುಗಳು I ಜಾರಿ ಬೀಳಲಿದ್ದವು ಹೆಜ್ಜೆಗಳು II
- Verse 4: ಆ ಜನರಿಗೆ ನೋವುಕಾವೆಂಬುದಿಲ್ಲ I ಅವರ ದೇಹ ಸಬಲವಾಗಿದೆಯಲ್ಲ! II
- Verse 5: ಇತರರಂತೆ ಅವರಿಗೆ ಸಂಕಟವಿಲ್ಲವಲ್ಲಾ! I ರೋಗರುಜೆ ಅವರಿಗಂಟುವುದಿಲ್ಲವಲ್ಲಾ! II
- Verse 6: ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ I ಹಿಂಸಾಚಾರವೇ ಅವರಿಗೆ ಬಟ್ಟೆಬರೆ II
- Verse 7: ದೋಷ ಹೊರಸೂಸುತ್ತಿದೆ ಕೊಬ್ಬಿನಾ ಕಣ್ಗಳಿಂದ I ದುಷ್ಕಲ್ಪನೆಗಳು ತುಳುಕುತಿವೆ ಹೃನ್ಮನಗಳಿಂದ II
- Verse 8: ಕೇಡು ಮಾತು, ಕೆಣಕು ಮಾತು ಅವರದು I ಜೊತೆಗೆ ಬಲಾತ್ಕಾರದ ಸೊಕ್ಕು ಮಾತು II
- Verse 9: ನಾಕವನೆ ತಾಕುತಿದೆ ಅವರ ಗರ್ವದ ನುಡಿ I ಜಗದಲಿ ಹರಡುತಿದೆ ಅವರ ದರ್ಪದ ನುಡಿ II
- Verse 10: ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು I ನೀರಂತೆ ಅವರ ಮಾತನು ಹೀರಿಕೊಳ್ಳುವರು II
- Verse 11: “ಆ ದೇವನೆಂತು ಕಂಡುಹಿಡಿದಾನು?” ಎಂಬರು I “ಪರಾತ್ಪರನು ಪರಿಜ್ಞನೆ?” ಎಂದುಕೊಳ್ವರು II
- Verse 12: ದುರ್ಜನರಿದೊ ನಿಶ್ಚಿಂತರಾಗಿಹರು I ಸಿರಿಮೇಲೆ ಸಿರಿಯ ಶೇಖರಿಸುತಿಹರು II
- Verse 13: ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? I ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? II
- Verse 14: ಏಕೆನೆ, ದಿನವಿಡಿ ನಾ ಬಾಧೆಪಡುತ್ತಿರುವೆ I ದಿನದಿನವು ದಂಡನೆಗೆ ಗುರಿಯಾಗುತ್ತಿರುವೆ II
- Verse 15: ನಾ ಬಾಯ್ದೆರೆದು ನುಡಿದಿದ್ದೆನಾದರೆ ಈ ಪರಿ I ನಿನ್ನ ಭಕ್ತಕುಲಕೆ ನಾ ದ್ರೋಹಿಯೇ ಸರಿ II
- Verse 16: ಇದರ ಮರ್ಮವನು ನಾ ಬಗೆಹರಿಸಲು ಯತ್ನಿಸೆ I ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ II
- Verse 17: ಆದರೆ ದೇವಾಲಯವನು ಹೊಕ್ಕು ನಿಂತಾಗ I ಆ ಜನರ ಅಂತಿಮ ಗತಿಯನಾಲೋಚಿಸಿದಾಗ I ಋಜುವಾದ ಜ್ಞಾನೋದಯ ಆಯಿತೆನಗಾಗ II
- Verse 18: ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ I ನಿಶ್ಚಯವಾಗಿ ನೀ ಬೀಳಿಸಿ ಅವರನು ನಾಶಮಾಡುವೆ II
- Verse 19: ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II
- Verse 20: ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II
- Verse 21: ಹೃದಯ ನೊಂದು ಬೆಂದಿರಲು I ಮನದಲಿ ಅಲಗು ನಾಟಿರಲು II
- Verse 22: ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ I ನಾ ವನ್ಯಮೃಗನಂತಿದ್ದೆ ನಿನ್ನ ಮುಂದೆ II
- Verse 23: ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ I ನೀ ಹಿಡಿದಿರುವೆ ನನ್ನ ಬಲಗೈಯನು ಭದ್ರವಾಗಿ II
- Verse 24: ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು I ಅಂತ್ಯದಲಿ ನಿನ್ನ ಮಹಿಮೆಗೆನ್ನ ಸೇರ್ಪಡಿಸು II
- Verse 25: ನನಗೆ ನೀನಲ್ಲದೆ ಇನ್ನಾರಿಹರು ಪರದಲಿ I ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ II
- Verse 26: ನನ್ನ ತನುಮನಗಳೆಲ್ಲವೂ ಸೊರಗಿಹೋದರೂ I ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು II
- Verse 27: ವಿನಾಶವಾಗುವರು ನಿನ್ನಿಂದ ದೂರ ಸರಿವವರು I ಧ್ವಂಸವಾಗುವರು ನಿನಗೆ ದ್ರೋಹವೆಸಗಿದವರು II
- Verse 28: ನಿನ್ನ ಸಾನ್ನಿಧ್ಯ ಸ್ವಾಮಿದೇವಾ, ನನಗೆಂಥ ಸೌಭಾಗ್ಯ I ನಿನ್ನ ಸತ್ಕಾರ್ಯಗಳ ಸಾರಲೆಂದೆ ನಿನ್ನನಾಶ್ರಯಿಸಿಕೊಂಡೆನಯ್ಯಾ II