పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
1ನೇ ಅಧ್ಯಾಯ
- Verse 1: ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆಯ ದಿನ ನಾನು ಗಡೀಪಾರಾಗಿದ್ದ ಯೆಹೂದ್ಯರ ಮಧ್ಯೆ ಕೆಬಾರ್ ನದಿಯ ಹತ್ತಿರ ಇದ್ದೆ. ಆಗ ಆಕಾಶ ತೆರೆಯಿತು. ನನಗೆ ದೇವದರ್ಶನಗಳಾದವು.
- Verse 2: ಅದೇ ತಿಂಗಳಿನ ಐದನೆಯ ದಿನ, ಅಂದರೆ, ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷ,
- Verse 3: ಬಾಬಿಲೋನಿಯಾ ದೇಶದ ಕೇಬಾರ್ ನದಿಯ ಹತ್ತಿರ, ಬೂಜಿಯ ಮಗ ಹಾಗೂ ಯಾಜಕನಾದ ಯೆಜೆಕಿಯೇಲ ಎಂಬ ನನಗೆ ಸರ್ವೇಶ್ವರ ಸ್ವಾಮಿಯ ವಾಣಿ ನೇರವಾಗಿ ಕೇಳಿಸಿತು; ಅವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ.
- Verse 4: ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿ ಬೆಳಗಿತು.
- Verse 5: ಅದರ ಮಧ್ಯೆದಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು. ಅವುಗಳ ರೂಪ ಮನುಷ್ಯರೂಪದಂತಿತ್ತು.
- Verse 6: ಒಂದೊಂದಕ್ಕೆ ನಾಲ್ಕು ಮುಖಗಳು, ನಾಲ್ಕು ರೆಕ್ಕೆಗಳು ಇದ್ದವು.
- Verse 7: ಇವುಗಳ ಕಾಲು ನೆಟ್ಟಗಿದ್ದವು; ಪಾದಗಳು ಕರುವಿನ ಗೊರಸಿನಂತೆ ಇದ್ದವು; ಬೆಳಗಿದ ಕಂಚಿನಂತೆ ಮಿನುಮಿನುಗುತ್ತಿದ್ದವು.
- Verse 8: ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯ ಹಸ್ತದಂಥ ಹಸ್ತಗಳಿದ್ದವು. ಆ ನಾಲ್ಕು ಜೀವಿಗಳ ಮುಖಗಳೂ ರೆಕ್ಕೆಗಳೂ ಹೇಗಿದ್ದವೆಂದರೆ -
- Verse 9: ರೆಕ್ಕೆಗಳು ಒಂದಕ್ಕೊಂದು ತಗಲುತ್ತಿದ್ದವು; ಆ ಜೀವಿಗಳು ಹಿಂತಿರುಗಿ ನೋಡದೆ ಹೊರಟ ಮುಖವಾಗಿಯೇ ಹೋಗುತ್ತಿದ್ದವು.
- Verse 10: ಅವುಗಳ ಮುಖ ಲಕ್ಷಣಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖ ಮನುಷ್ಯ ಮುಖದಂತಿತ್ತು; ಬಲಗಡೆಯ ಮುಖ ಸಿಂಹನಂತಿತ್ತು; ಎಡಗಡೆಯ ಮುಖ ಹೋರಿಯ ಮುಖದಂತಿತ್ತು; ಹಿಂದಿನ ಮುಖ ಗರುಡ ಪಕ್ಷಿಯ ಮುಖದಂತಿತ್ತು.
- Verse 11: ಅವುಗಳ ರೆಕ್ಕೆಗಳು ಮೇಲಕ್ಕೆ ಹರಡಿಕೊಂಡಿದ್ದವು. ಒಂದೊಂದು ಜೀವಿಯ ಎರಡು ರೆಕ್ಕೆಗಳು ಪಕ್ಕದ ಜೀವಿಗಳ ರೆಕ್ಕಗಳಿಗೆ ತಗುಲುತ್ತಿದ್ದವು. ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು.
- Verse 12: ಆ ಜೀವಿಗಳೆಲ್ಲ ಹೊರಟ ಮುಖವಾಗಿಯೇ ಹೋಗುತ್ತಿದ್ದವು; ಹಿಂದಿರುಗಿನೋಡದೆ, ದೇವರಾತ್ಮ ಸಾಗಿಸಿದ ಕಡೆಗೇ ಸಾಗುತ್ತಿದ್ದವು.
- Verse 13: ಆ ಜೀವಿಗಳ ಮಧ್ಯೆ ಅದ್ಭುತಕಾಂತಿಯೊಂದು ಉರಿಯುವ ಕೆಂಡಗಳೋ ಪಂಜುಗಳೋ ಎಂಬಂತೆ ಕಾಣಿಸಿತು. ಅದು ಆ ಜೀವಿಗಳ ನಡುವೆ ಓಲಾಡುತ್ತಿತ್ತು; ಆ ಉರಿ ತೇಜೋಮಯವಾಗಿತ್ತು. ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
- Verse 14: ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ ಹಿಂದಕ್ಕೂ ಸರಿದಾಡುತ್ತಿದ್ದವು.
- Verse 15: ಇಗೋ, ನಾನು ಆ ಜೀವಿಗಳನ್ನು ನೋಡುತ್ತಿದ್ದಂತೆ ಒಂದೊಂದು ಕಡೆಯಲ್ಲೂ ಆ ಜೀವಿಗಳ ಪಕ್ಕದಲ್ಲಿ ನೆಲಸೋಕುವ ಚಕ್ರಗಳು ಕಾಣಿಸಿದವು.
- Verse 16: ಆ ಚಕ್ರಗಳ ವರ್ಣರಚನೆ ಹೇಗಿತ್ತೆಂದರೆ: ಅವುಗಳ ವರ್ಣ ಪೀತರತ್ನದ ಹಾಗೆ ಥಳಥಳಿಸುತ್ತಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು; ಆ ನಾಲ್ಕು ಚಕ್ರಗಳು ಒಂದೇ ಮಾದರಿಯಾಗಿದ್ದವು.
- Verse 17: ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು. ಓರೆಯಾಗಿ ಹೊರಳುತ್ತಿರಲಿಲ್ಲ.
- Verse 18: ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ ಭಯಂಕರವಾಗಿಯೂ ಇದ್ದವು; ಈ ಭಾಗಗಳ ಎಲ್ಲಾ ಕಡೆಯಲ್ಲೂ ಅನೇಕಾನೇಕ ಮಿನುಗು ಕಣ್ಣುಗಳಿದ್ದವು;
- Verse 19: ಜೀವಿಗಳು ಮುಂದರಿಯುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಮುಂದುವರಿಯುತ್ತಿದ್ದವು; ಜೀವಿಗಳು ನೆಲದಿಂದ ಮೇಲಕ್ಕೇಳುವಾಗ ಚಕ್ರಗಳೂ ಏಳುತ್ತಿದ್ದವು;
- Verse 20: ದೇವರಾತ್ಮವು ಸಾಗಿಸಿದ ಕಡೆಗೇ ಅವು ಸಾಗುತ್ತಿದ್ದವು. ಆ ಜೀವಿಗಳಲ್ಲಿದ್ದ ಆತ್ಮವು ಚಕ್ರಗಳಲ್ಲಿಯೂ ಇದ್ದ ಕಾರಣ ಚಕ್ರಗಳು ಅವುಗಳ ಪಕ್ಕದಲ್ಲಿ ಏಳುತ್ತಿದ್ದವು.
- Verse 21: ಆ ಜೀವಿಗಳು ಮುಂದುವರಿಯುವಾಗ ಚಕ್ರಗಳೂ ಮುಂದುವರಿಯುತ್ತಿದ್ದವು, ಅವು ನಿಂತುಹೋಗುವಾಗ ಇವೂ ನಿಂತುಹೋಗುತ್ತಿದ್ದವು. ಅವು ನೆಲದಿಂದ ಮೇಲಕ್ಕೆ ಏಳುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು; ಏಕೆಂದರೆ ಆ ಜೀವಿಗಳ ಆತ್ಮ ಚಕ್ರಗಳಲ್ಲಿಯೂ ಇತ್ತು.
- Verse 22: ಮಂಜುಗಡ್ಡೆಯಂತೆ ಥಳಥಳಿಸುವ ಒಂದು ತೆರೆದ ಆಶ್ಚರ್ಯಕರವಾದ ಗವಿಯಾಕೃತಿ ಆ ಜೀವಿಗಳ ತಲೆಯ ಮೇಲ್ಗಡೆ ಇತ್ತು.
- Verse 23: ಅದರ ಕೆಳಗೆ ಆ ಜೀವಿಗಳ ರೆಕ್ಕೆಗಳು ಮಟ್ಟಸವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.
- Verse 24: ಅವು ಮುಂದುವರಿಯುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ, ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.
- Verse 25: ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲಿಂದ ಒಂದು ಧ್ವನಿ ನನ್ನ ಕಿವಿಗೆ ಬಿತ್ತು.
- Verse 26: ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರನ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು.
- Verse 27: ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆ; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆ; ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು.
- Verse 28: ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲು ಪ್ರಕಾಶ ಹೊಳೆಯುತ್ತಿತ್ತು. ಹೀಗೆ ಸರ್ವೇಶ್ವರನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡು ನಾನು ಅಡ್ಡಬಿದ್ದೆ; ಮಾತಾಡುವಾತನ ವಾಣಿಯನ್ನು ಕೇಳಿದೆ.