पवित्र बाइबिल
ಹಳೆಯ ಒಡಂಬಡಿಕೆ
ನ್ಯಾಯಸ್ಥಾಪಕರು
9ನೇ ಅಧ್ಯಾಯ
- Verse 1: ‘ಯೆರುಬ್ಬಾಳ’ನ ಮಗ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರ ಮಾವಂದಿರಿಗೂ ತಾಯಿಯ ಬಂಧುಗಳೆಲ್ಲರಿಗೂ,
- Verse 2: “ನೀವು ದಯವಿಟ್ಟು ಶೆಕೆಮಿನ ಹಿರಿಯರೊಡನೆ ಮಾತಾಡಬೇಕು. ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳುವುದು ಒಳ್ಳೆಯದೋ ಅಥವಾ ಒಬ್ಬನೇ ಆಳುವುದು ಮೇಲೋ? ಎಂದು ಅವರನ್ನು ವಿಚಾರಿಸಬೇಕು; ನಾನು ಅವರ ರಕ್ತಸಂಬಂಧಿಯಾಗಿದ್ದೇನೆಂಬುದನ್ನು ಜ್ಞಾಪಕಪಡಿಸಬೇಕು” ಎಂದು ಕೇಳಿಕೊಂಡನು.
- Verse 3: ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಿದರು. ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲವೆ” ಎಂದುಕೊಂಡು ಅವನ ಪಕ್ಷವಹಿಸಲು ಒಪ್ಪಿಕೊಂಡರು.
- Verse 4: ಅದು ಮಾತ್ರವಲ್ಲ, ಬಾಳ್ ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ಬೆಳ್ಳಿನಾಣ್ಯಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಮಂದಿ ಪುಂಡಪೋಕರಿಗಳನ್ನು ಕೂಡಿಸಿ, ಅವರ ನಾಯಕನಾಗಿ ಹೊರಟು,
- Verse 5: ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನು ಅವಿತುಕೊಂಡು ತನ್ನ ಜೀವವನ್ನು ಉಳಿಸಿಕೊಂಡನು.
- Verse 6: ತರುವಾಯ ಎಲ್ಲಾ ಶೆಕೆಮಿನವರೂ ಹಾಗು ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಸ್ಮಾರಕಸ್ತಂಭವಿರುವ ಓಕ್ ಮರದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು.
- Verse 7: ಯೋತಾಮನು ಇದನ್ನು ಕೇಳಿ, ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ ಹೀಗೆಂದನು: “ಶೆಕೆಮಿನ ಜನರೇ, ನನ್ನ ಮಾತಿಗೆ ಕಿವಿಗೊಡಿ; ಆಗ ದೇವರೂ ನಿಮ್ಮ ಮೊರೆಗೆ ಕಿವಿಗೊಡುವರು:
- Verse 8: “ಒಮ್ಮೆ ಮರಗಳು ತಮಗೆ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಓಲಿವ್ ಮರದ ಬಳಿಗೆ ಬಂದು, ‘ನೀನು ನಮಗೆ ಅರಸನಾಗು,’ ಎಂದವು.
- Verse 9: ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಯಿಂದ ದೇವತೆಗಳೂ ಮಾನವರೂ ಘನತೆ ಗೌರವಗಳನ್ನು ಪಡೆಯುತ್ತಾರೆ. ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
- Verse 10: “ಬಳಿಕ ಆ ಮರಗಳು ಅಂಜೂರದ ಗಿಡದ ಬಳಿಗೆ ಹೋಗಿ ಅದಕ್ಕೆ, “ನೀನು ಬಂದು ನಮ್ಮ ಅರಸನಾಗು,’ ಎಂದವು.
- Verse 11: ಅದು, ‘ನಾನು ನನ್ನ ಶ್ರೇಷ್ಠವಾದ ಸಿಹಿಹಣ್ಣು ಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
- Verse 12: “ಅನಂತರ ಆ ಮರಗಳು ದ್ರಾಕ್ಷಾಬಳ್ಳಿಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
- Verse 13: ಅದಕ್ಕೆ ಆ ಬಳ್ಳಿ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮಾನವರಿಗೂ ಆನಂದ ತರುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
- Verse 14: “ಕಡೆಗೆ ಆ ಮರಗಳು ಮುಳ್ಳು ಪೊದೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
- Verse 15: ಅದಕ್ಕೆ ಆ ಪೊದೆ, ‘ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ, ಬನ್ನಿ, ಬಂದು ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು,’ ಎಂದುಬಿಟ್ಟಿತು.
- Verse 16: “ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯಸಮ್ಮತವೇ? ಅದು ಧರ್ಮಕಾರ್ಯವೇ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕಾಗಿ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರ ಮಾಡಿದಿರೋ?
- Verse 17: ನನ್ನ ತಂದೆ ತನ್ನ ಪ್ರಾಣಾಶೆಯನ್ನು ತೊರೆದು ಹೋರಾಡಿ ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲವೆ?
- Verse 18: ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿದ ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಿಮ್ಮ ಬಂಧುವೆಂದು ಹೇಳಿ ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.
- Verse 19: ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲೇ ಆನಂದಿಸಿರಿ; ಅವನು ನಿಮ್ಮಲ್ಲೇ ಆನಂದಿಸಲಿ.
- Verse 20: ಇಲ್ಲವಾದರೆ, ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ ಮಿಲ್ಲೋ ಕೋಟೆಯವರನ್ನೂ ಸುಟ್ಟುಬಿಡಲಿ; ಶೆಕೆಮಿನವರಿಂದಲೂ ಮಿಲ್ಲೋ ಕೋಟೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ಸುಟ್ಟುಬಿಡಲಿ.”
- Verse 21: ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು.
- Verse 22: ಅಬೀಮೆಲೆಕನು ಇಸ್ರಯೇಲರನ್ನು ಮೂರುವರ್ಷ ಆಳಿದನಂತರ
- Verse 23: ಸರ್ವೇಶ್ವರಸ್ವಾಮಿ ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ದುಷ್ಟ ಆತ್ಮವನ್ನು ಕಳುಹಿಸಿದರು. ಈ ಶೆಕೆಮಿನವರು ಅಬೀಮೆಲೆಕನಿಗೆ ದ್ರೋಹ ಎಸಗಿದರು.
- Verse 24: ಹೀಗೆ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದುಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೂ ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೂ ಬರುವುದಕ್ಕೆ ಮಾರ್ಗವಾಯಿತು .
- Verse 25: ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆಮಾಡುತ್ತಿದ್ದರು. ಈ ವರ್ತಮಾನ ಅಬೀಮೆಲೆಕನಿಗೆ ಮುಟ್ಟಿತು.
- Verse 26: ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬವನು ತನ್ನ ಬಂಧುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸೆ ಇಟ್ಟರು.
- Verse 27: ಆ ಊರಿನವರು ಒಂದು ದಿವಸ ತಮ್ಮ ದ್ರಾಕ್ಷಾಫಲಗಳನ್ನು ಕೊಯ್ದು, ಆಲೆಗಳಲ್ಲಿ ರಸ ತೆಗೆದು, ತಮ್ಮ ದೇವರ ಗುಡಿಗೆ ಹೋಗಿ, ಹಬ್ಬಮಾಡಿ, ಉಂಡು, ಕುಡಿದು ಅಬೀಮೆಲೆಕನನ್ನು ಶಪಿಸಿದರು.
- Verse 28: ಎಬೇದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನಿಗೆ ಏಕೆ ಸೇವೆಮಾಡಬೇಕು? ಅವನು ಯೆರುಬ್ಬಾಳನ ಮಗನಲ್ಲವೇ? ಅವನ ಪುರಾಧಿಕಾರಿ ಜೆಬುನಲ್ಲವೇ? ನಾವು ಅವನಿಗೆ ಏಕೆ ಸೇವೆಮಾಡಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರಿಗೇ ಸೇವೆಮಾಡೋಣ.
- Verse 29: ಈ ಜನರ ಮೇಲೆ ನನಗೆ ಅಧಿಕಾರವಿದ್ದರೆ ಅಬೀಮೆಲೆಕನನ್ನು ಓಡಿಸಿ ಬಿಡುತ್ತಿದ್ದೆ,” ಎಂದು ಹೇಳಿದನು. ಅಷ್ಟು ಮಾತ್ರವಲ್ಲದೆ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ,” ಎಂದು ಕೊಚ್ಚಿಕೊಂಡನು.
- Verse 30: ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ ಕೋಪಗೊಂಡನು. ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ,
- Verse 31: “ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಂಬಿಸುತ್ತಿದ್ದಾರೆ.
- Verse 32: ಆದುದರಿಂದ ನೀನು ಈ ರಾತ್ರಿಯಲ್ಲೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು.
- Verse 33: ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು; ಅವನೂ ಅವನ ಜೊತೆಯಲ್ಲಿರುವವರೂ ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು,” ಎಂದು ಹೇಳಿಸಿದನು.
- Verse 34: ಅಬೀಮೆಲೆಕನೂ ಅವನ ಜನರೂ ರಾತ್ರಿಯಲ್ಲೇ ಹೊರಟುಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿ ಕಾಯುತ್ತಿದ್ದರು.
- Verse 35: ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರ ಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿ ನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು.
- Verse 36: ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ,” ಎಂದು ಹೇಳಲು ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ,” ಎಂದನು. ಅವನು ಪುನಃ,
- Verse 37: “ನೋಡು ದೇಶನಾಭಿಗಿರಿಯಿಂದ ಜನರು ಬರುತ್ತಿದ್ದಾರೆ: ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.
- Verse 38: ಆಗ ಜೆಬುಲನು ಅವನಿಗೆ, “ಈಗ ನಿನ್ನ ಮಾತೆಲ್ಲಿ? ಅಬೀಮೆಲೆಕನು ಎಷ್ಟರವನು? ನಾವು ಅವನಿಗೆ ಏಕೆ ಸೇವೆಮಾಡಬೇಕು ಎಂದು ಕೊಚ್ಚಿಕೊಂಡಿಯಲ್ಲವೆ? ಅವರು ನೀನು ತಿರಸ್ಕರಿಸಿದ ಜನರಲ್ಲವೇ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ,” ಎಂದು ಹೇಳಿದನು.
- Verse 39: ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು.
- Verse 40: ಆದರೆ ಅಬೀಮೆಲೆಕನಿಗೆ ಬೆನ್ನುತೋರಿಸಿ ಓಡಿಹೋಗಬೇಕಾಯಿತು. ಅವನು ಇವನನ್ನು ಹಿಂದಟ್ಟಿದನು. ಊರಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು.
- Verse 41: ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಿಸಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಅಟ್ಟಿಬಿಟ್ಟನು.
- Verse 42: ಮಾರನೆಯ ದಿನಜನರು ಬೈಲಿಗೆ ಹೊರಟುಬಂದರು;
- Verse 43: ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪುಮಾಡಿ ಅವರನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೆ ಅಲ್ಲಿಂದ ಎದ್ದು ಅವರ ಮೇಲೆ ದಾಳಿಮಾಡಿದನು.
- Verse 44: ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿಬಂದು ಊರಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.
- Verse 45: ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ ಪಟ್ಟಣವನ್ನು ಸ್ವಾಧೀನಮಾಡಿಕೊಂಡು ಅದರ ಜನರನ್ನೆಲ್ಲಾ ಸದೆಬಡಿದು ಊರನ್ನು ಕೆಡವಿ ಅಲ್ಲಿ ಉಪ್ಪನ್ನು ಎರಚಿಬಿಟ್ಟನು.
- Verse 46: ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್ ಬೆರೀತ್ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು.
- Verse 47: ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿದನು.
- Verse 48: ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ,” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಂಡನು.
- Verse 49: ಅವರೂ ಅದರಂತೆಯೇ ಮಾಡಿದರು. ಅವನ ಹಿಂದೆ ಹೋಗಿ ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್ ಕೋಟೆಯವರೆಲ್ಲರೂ ಸತ್ತರು. ಸ್ತ್ರೀಪುರುಷರೆಲ್ಲಾ ಸೇರಿ ಅವರು ಸುಮಾರು ಸಾವಿರ ಜನರಿದ್ದರು.
- Verse 50: ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ, ಮುತ್ತಿಗೆ ಹಾಕಿ ಅದನ್ನು ಹಿಡಿದನು.
- Verse 51: ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಗೋಪುರವಿತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ ಅದರೊಳಗೆ ಹೊಕ್ಕು ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು.
- Verse 52: ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಗೋಪುರದ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋದನು.
- Verse 53: ಒಬ್ಬ ಸ್ತ್ರೀ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು.
- Verse 54: ಅವನು ಕೂಡಲೆ ತನ್ನ ಆಯುಧವಾಹಕನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ಹೆಂಗಸಿನ ಕೈಯಿಂದ ಸತ್ತನೆಂದು ಹೇಳಾರು,” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು.
- Verse 55: ಅಬೀಮೆಲೆಕನು ಸತ್ತುಹೋದದ್ದನ್ನು ಕಂಡು ಇಸ್ರಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.
- Verse 56: ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದರು.
- Verse 57: ಶೆಕೆಮಿನವರಿಗಾದರೋ ಅವರ ದುಷ್ಟತ್ವವು ಅವರ ತಲೆಯ ಮೇಲೆಯೇ ಬರುವಂತೆಮಾಡಿದರು. ಹೀಗೆ ಯೆರುಬ್ಬಾಳನ ಮಗ ಯೋತಾಮನು ಇವರ ಬಗ್ಗೆ ನುಡಿದ ಶಾಪ ನೆರವೇರಿತು.