P. O. C ബൈബിള്
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
35ನೇ ಅಧ್ಯಾಯ
- Verse 1: ಎಲೀಹುವನು ಮತ್ತೆ ಹೀಗೆಂದು ಹೇಳಿದನು:
- Verse 2: “’ಸಜ್ಜನನಾಗಿ ಬಾಳಿ ನನಗಾದ ಪ್ರಯೋಜನವೇನು? ಪಾಪರಹಿತನಾಗಿ ಜೀವಿಸಿ ನನಗೆ ಬಂದ ಲಾಭವೇನು’
- Verse 3: ಈ ರೀತಿ ನೀನು ನುಡಿಯುವುದು ನ್ಯಾಯವೆಂದು ಊಹಿಸುತ್ತೀಯೋ? ನಿನ್ನ ನೀತಿ ದೇವರ ನೀತಿಗಿಂತ ಮಿಗಿಲಾದುದೆನ್ನುತ್ತೀಯೋ?
- Verse 4: ನಾನು ನಿನಗೆ ಉತ್ತರಕೊಡುತ್ತೇನೆ ನಿನ್ನ ಮಿತ್ರರಿಗೂ ಪ್ರತ್ಯುತ್ತರ ನೀಡುತ್ತೇನೆ.
- Verse 5: ಗಗನ ಮಂಡಲವನು ಕಣ್ಣೆತ್ತಿ ನೋಡು ನಿನಗೂ ಎಷ್ಟೋ ಎತ್ತರವಾದ ಮೇಘ ಮಾರ್ಗವನು ದಿಟ್ಟಿಸಿ ನೋಡು.
- Verse 6: ನೀನು ಪಾಪಮಾಡದಿದ್ದರೆ ದೇವರಿಗೇನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಿದರೆ ಅವರಿಗಾದ ನಷ್ಟವೇನು?
- Verse 7: ನೀನು ಸಜ್ಜನನಾಗಿದ್ದರೆ ಅವರಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಅವರಿಗೆ ದೊರಕಿದ ಲಾಭ ಯಾವುದು?
- Verse 8: ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ.
- Verse 9: ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ. ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
- Verse 10: ಆದರೆ ‘ನಮ್ಮನ್ನು ಸೃಷ್ಟಿಸಿದ ಕರ್ತನೆಲ್ಲಿ? ಕತ್ತಲಲ್ಲೂ ಕೀರ್ತನೆ ಹಾಡಬಲ್ಲವನೆಲ್ಲಿ?
- Verse 11: ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನೀಯುವವನೆಲ್ಲಿ? ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ದಿಕಲಿಸುವನೆಲ್ಲಿ? ಎನ್ನುವುದೇ ಇಲ್ಲ.
- Verse 12: ಎಂತಲೆ ದುರುಳರ ಸೊಕ್ಕನ್ನು ಮುಂದಿಟ್ಟು ಗೋಳಿಟ್ಟರೂ ದೇವರು ಅವರಿಗೆ ಉತ್ತರ ಕೊಡುವುದಿಲ್ಲ.
- Verse 13: ದೇವರು ಪೊಳ್ಳುಮಾತಿಗೆ ಕಿವಿಗೊಡನು ಸರ್ವಶಕ್ತನು ಅದಕ್ಕೆ ಎಂದಿಗೂ ಲಕ್ಷ್ಯಕೊಡನು.
- Verse 14: ಇಂತಿರಲು ನೀನು, ‘ಆತ ಕಾಣನು, ನನ್ನ ವ್ಯಾಜ್ಯ ಆತನ ಮುಂದಿದೆ ಆತನಿಗಾಗಿ ಕಾದಿರುವೆ’ ಎಂದುಕೊಂಡರೂ ಆತ ಕೇಳಿಯಾನೆ?
- Verse 15: ‘ದೇವರು ಸಿಟ್ಟುಗೊಂಡು ಶಿಕ್ಷಿಸುವುದಿಲ್ಲ ದ್ರೋಹಗಳನ್ನು ಅಷ್ಟಾಗಿ ಗಣನೆಗೆ ತಂದುಕೊಳ್ಳುವುದಿಲ್ಲ’
- Verse 16: ಎಂದು ಹೇಳುತ್ತಾ ಯೋಬನು ಬಾಯಿತೆರೆಯುತ್ತಾನೆ ವ್ಯರ್ಥವಾಗಿ ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ ಬಹಳವಾಗಿ.”