ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
39ನೇ ಅಧ್ಯಾಯ
- Verse 1: ನಾ ಇಂತೆಂದುಕೊಂಡೆ : “ಜಾಗರೂಕನಾಗಿರುವೆ ಜಿಹ್ವೆ ಪಾಪಕ್ಕೆಳೆಯದಂತೆ I ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆ ದುರ್ಜನರ ಮುಂದೆ” II
- Verse 2: ಮೌನವಿದ್ದೆ, ಸನ್ನುಡಿಯದೆಯೂ ಸುಮ್ಮನಿದ್ದೆ I ಉಲ್ಬಣಿಸುತ್ತಿತ್ತು ವೇದನೆಯು ಎಡೆಬಿಡದೆ II
- Verse 3: ಎದೆಯ ತಾಪ ಹೆಚ್ಚಿತು, ಚಿಂತೆ ಕಾವೇರಿತು I ಆಗತಾನೆ ಬಾಯ್ತೆರೆದೆ ನಾನಿಂತೆಂದು: II
- Verse 4: “ನನ್ನ ಜೀವಾಯುಸ್ಸು ಎನಿತು? ನನ್ನ ಬಾಳಿನ ಮುಗಿವೆಂದು? I ತಿಳಿಯಪಡಿಸು ನನಗೆ ಪ್ರಭು, ನಾನು ಬಲು ಅಸ್ಥಿರನೆಂದು” II
- Verse 5: ನನ್ನಾಯುಸ್ಸು ಗೇಣುದ್ದ, ನಿನ್ನೆಣಿಕೆಗದು ಶೂನ್ಯ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ! II
- Verse 6: ನರಮಾನವನು ಮೆರೆದಾಡುವನು ಮಾಯೆಯಂತೆ I ಅವನ ಸಡಗರವೆಲ್ಲವೂ ನಿರರ್ಥಕದಂತೆ I ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ II
- Verse 7: ಇಂತಿರಲು ಪ್ರಭು, ನಾನೇತಕೆ ಕಾದಿರಬೇಕು? I ನೀನೆ ಅಲ್ಲವೆ ನನಗೆ ನಂಬಿಕೆ, ಇದು ಸಾಕು II
- Verse 8: ಮುಕ್ತಗೊಳಿಸೆನ್ನ ಪ್ರಭು, ಎಲ್ಲಪರಾಧಗಳಿಂದ I ಕಾದಿರಿಸೆನ್ನನು ಮೂರ್ಖರ ತಿರಸ್ಕಾರದಿಂದ II
- Verse 9: ಮೌನದಿಂದಿರುವೆ, ಬಾಯ್ದೆರೆಯದಿರುವೆ I ನನಗೊದಗಿರುವುದು ನಿನ್ನಿಂದಲ್ಲವೆ? II
- Verse 10: ಸಾಕು ಮಾಡು ನಿನ್ನ ಕೈ ಹೊಡೆತವನು I ಅದರಿಂದ ನಾ ಸಾಯುತ್ತಿರುವೆನು II
- Verse 11: ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II
- Verse 12: ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು I ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು II ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ I ಪೂರ್ವಜರಂತೆ ನಾ ಪರದೇಶಿಯಯ್ಯಾ II
- Verse 13: ನಾ ಕಾಲವಾಗಿ ಕಣ್ಮರೆಯಾಗುವೆ ಇಲ್ಲಿಂದ I ಆ ಮುನ್ನ ಹೊರಳಿಸು ಕೋಪದೃಷ್ಟಿಯನು ನನ್ನಿಂದ I ನಾ ಬಾಳುವಂತೆ ಮಾಡು ಪ್ರಭು, ಸಂತಸದಿಂದ II