ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
84ನೇ ಅಧ್ಯಾಯ
- Verse 1: ಹೇ ಪ್ರಭು, ಸ್ವರ್ಗ ಸೇನಾಧೀಶ್ವರ I ನಿನ್ನ ನಿವಾಸಗಳೆನಿತೋ ಸುಂದರ II
- Verse 2: ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ I ಕಾಣಬೇಕೆಂದು ಪ್ರಭುವಿನ ಪ್ರಾಂಗಣ II
- Verse 3: ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧೀಶ್ವರ I ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ I ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ II
- Verse 4: ನಿನ್ನ ಮಂದಿರದಲಿ ವಾಸಿಸುವವರು ಧನ್ಯರು I ನಿರಂತರವು ನಿನ್ನ ಗುಣಗಾನ ಮಾಡುವರವರು II
- Verse 5: ನಿನ್ನಿಂದ ಶಕ್ತಿಪಡೆಯುವವರು ಧನ್ಯರು I ಸಿಯೋನ್ ಶಿಖರಕ್ಕವರು ಪ್ರಿಯ ಯಾತ್ರಿಕರು II
- Verse 6: ದಾಟುವಾಗ ಬಾಕಾ ಕಣಿವೆಯನು I ಚಿಲುಮೆಗಳನಾಗಿ ಮಾಡುವರದನು II ಮುಂಗಾರು ಮಳೆಯು ಸುರಿಯಲು I ತುಂಬಿ ತುಳುಕುವುದಾ ಸರಸಿಗಳು II
- Verse 7: ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ I ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ II
- Verse 8: ಸ್ವರ್ಗಸೇನಾಧೀಶ್ವರ, ಸ್ವಾಮಿದೇವ ಕಿವಿಗೊಡು ನನ್ನ ಮೊರೆಗೆ I ಯಕೋಬ ಕುಲದೇವಾ, ನನ್ನ ಪ್ರಾರ್ಥನೆ ಬೀಳಲಿ ನಿನ್ನ ಕಿವಿಗೆ II
- Verse 9: ನಿನ್ನ ಮಂದಿರದಲಿ ಕಳೆದ ದಿನವೊಂದು I ತಿಳಿವೆನು ಸಾವಿರ ದಿನಕೂ ಮೇಲೆಂದು II
- Verse 10: ದುರುಳರ ಬಿಡಾರದಲಿ ನಾ ವಾಸಮಾಡುವುದರ ಬದಲು I ನಿನ್ನಾಲಯದ ದ್ವಾರಪಾಲಕನಾಗಿರುವುದೆ ಮೇಲು II
- Verse 11: ದೇವನೆಮಗೆ ಬೆಳಕು ಕೊಡುವ ಸೂರ್ಯನು I ಕಾದಿಟ್ಟು ರಕ್ಷಿಸುವ ಗುರಾಣಿಯು I ಸನ್ಮಾರ್ಗಿಗೆ ಈವನು ಸಕಲ ವರಗಳನು II
- Verse 12: ಪ್ರಭುವೇ, ಸ್ವರ್ಗಸೇನಾಧೀಶ್ವರನೇ I ನಿನ್ನಲಿ ನಂಬಿಕೆ ಇಡುವವನೇ ಧನ್ಯನು I