पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
140ನೇ ಅಧ್ಯಾಯ
- Verse 1: ಬಿಡಿಸೆನ್ನನು ಪ್ರಭು ಕೆಡುಕರಿಂದ I ಕಾಪಾಡೆನ್ನನು ಹಿಂಸಕರಿಂದ II
- Verse 2: ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II
- Verse 3: ಅವರ ನಾಲಗೆಯು ಸರ್ಪದಂತೆ I ಹಾವಿನ ವಿಷ ಅವರ ತುಟಿ ಹಿಂದೆ II
- Verse 4: ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ I ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ I ನಾನೆಡವುದನೇ ನಿರೀಕ್ಷಿಸುವವರಿಂದ II
- Verse 5: ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II
- Verse 6: “ನೀನೆ ನನ್ನ ದೇವರು” ಎಂದೆ ಪ್ರಭುವಿಗೆ I ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ II
- Verse 7: ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ I ರಣರಂಗದಲಿ ನೀನೆನಗೆ ಶಿರಸ್ತ್ರಾಣ II
- Verse 8: ನೆರವೇರಿಸಬೇಡ ದುರುಳರ ಕೋರಿಕೆಯನು I ಕೈಗೂಡಿಸಬೇಡ ಪ್ರಭು, ಅವರ ಕುಯುಕ್ತಿಯನು II
- Verse 9: ನನ್ನನ್ನು ಸುತ್ತುವರೆದಿರುವವರು ತಲೆಯೆತ್ತದಿರಲಿ I ಅವರಾಡುವ ಕೇಡು ಅವರ ತಲೆಯ ಮೇಲೇ ಎರಗಲಿ II
- Verse 10: ಸುರಿಯಲಿ ಆ ಜನರ ಮೇಲೆ ಉರಿಉರಿವ ಬೆಂಕಿಕೆಂಡ I ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ II
- Verse 11: ಉಳಿಯದಿರಲಿ ನಾಡೊಳು ಚಾಡಿಕೋರರು I ಕೇಡಿಂದ ನಾಶವಾಗಲಿ ಹಿಂಸಕರು II
- Verse 12: ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II
- Verse 13: ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II