வேதாகமம்
ಹಳೆಯ ಒಡಂಬಡಿಕೆ
ಯೆಶಾಯ
19ನೇ ಅಧ್ಯಾಯ
- Verse 1: ಈಜಿಪ್ಟಿನ ವಿಷಯವಾಗಿ ದೈವೋಕ್ತಿ : ಇಗೋ, ಸರ್ವೇಶ್ವರ ವೇಗವಾಗಿ ಚಲಿಸುವ ಮೇಘಗಳ ಮೇಲೆ ಈಜಿಪ್ಟಿಗೆ ಬರುವರು. ಅವರ ಮುಂದೆ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯ ಕರಗಿ ನೀರಾಗುವುದು.
- Verse 2: ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಈಜಿಪ್ಟಿನವರಲ್ಲಿ ಒಳಜಗಳವನ್ನು ಎಬ್ಬಿಸುವೆನು. ಅಣ್ಣತಮ್ಮಂದಿರು, ನೆರೆಹೊರೆಯವರು, ನಗರನಗರಗಳು, ರಾಜರಾಜರುಗಳು ಪರಸ್ಪರ ಕಾದಾಡುವರು.
- Verse 3: ಈಜಿಪ್ಟಿನವರ ಚೈತನ್ಯ ಉಡುಗಿಹೋಗುವುದು. ಅವರ ಯೋಜನೆಗಳು ಭಂಗವಾಗುವುವು. ಜನರು ವಿಗ್ರಹಗಳನ್ನು, ಮಂತ್ರಗಾರರನ್ನು, ಪ್ರೇತವಿಚಾರಕರನ್ನು, ಕಣಿಹೇಳುವವರನ್ನು ಆಶ್ರಯಿಸುವರು.”
- Verse 4: “ಇದಲ್ಲದೆ ಈಜಿಪ್ಟಿನವರನ್ನು ಕ್ರೂರ ಅರಸನ ವಶಕ್ಕೆ ಒಪ್ಪಿಸುವೆನು. ರಾಜನು ದಬ್ಬಾಳಿಕೆಯಿಂದ ಅವರನ್ನು ಆಳುವನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.”
- Verse 5: ನೈಲ್ ನದಿಯ ನೀರು ಬತ್ತಿಹೋಗುವುದು. ಅದರ ಪ್ರಭಾವ ಕ್ರಮೇಣ ಒಣಗಿಹೋಗುವುದು.
- Verse 6: ಕಾಲುವೆಗಳು ನಾರುವುವು. ಈಜಿಪ್ಟಿನ ಉಪನದಿಗಳು ಇಳಿದು ಇಂಗಿಹೋಗುವುವು.
- Verse 7: ನದಿಯ ತೀರಗಳು ಬರಡಾಗುವುವು. ನದಿಯಲ್ಲಿ ಬಿದ್ದ ಬೀಜಗಳೆಲ್ಲ ಒಣಗಿ ಗಾಳಿಗೆ ತೂರಿಹೋಗುವುವು.
- Verse 8: ಬೆಸ್ತರು ಕಣ್ಣೀರಿಡುವರು; ಗಾಳ ಹಾಕುವವರು ಗೋಳಿಡುವರು; ಬಲೆ ಬೀಸುವವರು ಸೊರಗಿಹೋಗುವರು.
- Verse 9: ನಯವಾದ ನಾರುಮಡಿಯನ್ನು ಮತ್ತು ಬಿಳೀ ಬಟ್ಟೆಯನ್ನು ನೇಯುವವರೆಲ್ಲ ಹತಾಶರಾಗುವರು.
- Verse 10: ನಾಡಿನ ಜವಳಿ ವ್ಯಾಪಾರಿಗಳು, ಕೂಲಿಯಾಳುಗಳು ಚಿಂತಾಕ್ರಾಂತರಾಗುವರು.
- Verse 11: “ಚೋಯನಿನ ಅಧಿಪತಿಗಳು ಮಂದಮತಿಗಳು. ಫರೋಹನ ಮುಖ್ಯಮಂತ್ರಿಗಳು ಕೊಡುವುದು ಹುಚ್ಚು ಆಲೋಚನೆಗಳನ್ನೇ. ‘ನಾವು ಪುರಾತನ ವಿದ್ವಾಂಸರ ವಂಶಜರು. ರಾಜರ್ಷಿಗಳ ಸಂತತಿಯವರು’ ಎಂದು ನೀವು ಫರೋಹನಿಗೆ ಹೇಳಲು ಸಾಧ್ಯವೇ?
- Verse 12: ಈಜಿಪ್ಟಿನ ಅರಸನೇ, ನಿನ್ನ ವಿದ್ವಾಂಸರೆಲ್ಲಿ? ಅವರೇ ನಿನಗೆ ತಿಳುವಳಿಕೆ ಕೊಡಲಿ. ಈಜಿಪ್ಟಿನ ವಿರೋಧವಾಗಿ ಸೇನಾಧೀಶ್ವರ ಸರ್ವೇಶ್ವರ ಯೋಚಿಸಿರುವುದನ್ನು ಅವರೇ ನಿನಗೆ ತಿಳಿಯಪಡಿಸಲಿ.
- Verse 13: ಚೋಯನಿನ ಅಧಿಪತಿಗಳು ಮಂದಮತಿಗಳು. ನೋಫಿನ ಮುಖ್ಯಮಂತ್ರಿಗಳು ಮೋಸಗಾರರು. ಈಜಿಪ್ಟ್ ಜನಾಂಗದ ಮೂಲೆಗಲ್ಲಿನಂತಿದ್ದವರೇ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ.
- Verse 14: ಸರ್ವೇಶ್ವರ ಅವರ ಮನಸ್ಸಿನಲ್ಲಿ ಚಂಚಲಭಾವವನ್ನು ಮೂಡಿಸಿದ್ದಾರೆ. ಅಮಲೇರಿದವನು ಕಕ್ಕುತ್ತಾ ಅತ್ತಿತ್ತ ಓಲಾಡುವ ಪ್ರಕಾರ ಈಜಿಪ್ಟಿನವರು ತಮ್ಮ ಒಂದೊಂದು ಕೆಲಸಕಾರ್ಯದಲ್ಲೂ ಅಸ್ಥಿರರಾಗಿರುವಂತೆ ಮಾಡಿದ್ದಾರೆ.
- Verse 15: ಹೀಗೆ ಈಜಿಪ್ಟಿಗೆ ತಲೆಯಾಗಲಿ ಬಾಲವಾಗಲಿ, ತಾಳೆಯಾಗಲಿ ತೃಣವಾಗಲಿ ನೆರವಾಗಲು ಸಾಧ್ಯವಿಲ್ಲದಂತಾಗಿದೆ.
- Verse 16: ಆ ದಿನದಂದು ಈಜಿಪ್ಟಿನವರು ಹೆಂಗಸರಂತೆ ಅಂಜುಬುರುಕರಾಗುವರು; ಸೇನಾಧೀಶ್ವರ ಸರ್ವೇಶ್ವರ ತಮ್ಮನ್ನು ದಂಡಿಸಲು ಕೈಯೆತ್ತುವಾಗ ಅವರು ಭಯಪಟ್ಟು ನಡುಗುವರು.
- Verse 17: ಜುದೇಯ ನಾಡು ಈಜಿಪ್ಟಿನವರಿಗೆ ಭಯಂಕರವಾಗಿರುವುದು. ಆ ನಾಡಿನ ಹೆಸರನ್ನು ಕೇಳಿದ್ದೇ ತಡ, ಪ್ರತಿಯೊಬ್ಬನೂ ಬೆಚ್ಚಿಬೀಳುವನು. ಪ್ರತಿಯೊಬ್ಬನೂ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಈಜಿಪ್ಟಿನ ವಿರುದ್ಧ ಮಾಡಿರುವ ಸಂಕಲ್ಪವನ್ನು ತಿಳಿದು ನಿಬ್ಬೆರಗಾಗುವನು.
- Verse 18: ಆ ದಿನದಂದು ಈಜಿಪ್ಟಿನ ನಾಡಿನಲ್ಲಿ ಐದು ಪಟ್ಟಣಗಳಲ್ಲಿ ಕಾನಾನಿನ (ಹಿಬ್ರು) ಭಾಷೆಯನ್ನಾಡುವ ಜನರು ತುಂಬಿರುವರು. ಅವರು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಶರಣರೆಂದು ಪ್ರಮಾಣ ಮಾಡುವರು. ಆ ಪಟ್ಟಣಗಳಲ್ಲಿ ಒಂದಕ್ಕೆ “ರವಿಪುರ” ಎಂಬ ಹೆಸರಿರುವುದು.
- Verse 19: ಆ ದಿನದಂದು ಈಜಿಪ್ಟಿನ ನಡುವೆ ಸರ್ವೇಶ್ವರ ಸ್ವಾಮಿಗೆ ಒಂದು ಬಲಿಪೀಠವಿರುವುದು ಮತ್ತು ನಾಡಿನ ಗಡಿಯಲ್ಲಿ ಸ್ವಾಮಿಯ ಸ್ಥಂಭ ಇರುವುದು.
- Verse 20: ಇವು ಈಜಿಪ್ಟ್ ದೇಶಕ್ಕೆ ಸರ್ವೇಶ್ವರ ಸ್ವಾಮಿಯ ಸಂಕೇತವಾಗಿಯೂ ಸಾಕ್ಷಿಯಾಗಿಯೂ ಇರುವುವು. ಅವರು ತಮ್ಮನ್ನು ಬಾಧಿಸುವವರ ವಿರುದ್ಧ ಸರ್ವೇಶ್ವರ ಸ್ವಾಮಿಗೆ ಮೊರೆಯಿಟ್ಟಾಗ, ಸ್ವಾಮಿಯು ವೀರನಾದ ರಕ್ಷಕನೊಬ್ಬನನ್ನು ಕಳುಹಿಸುವರು. ಆತನು ಆ ಜನರನ್ನು ಬಿಡುಗಡೆಮಾಡಿ ಉದ್ಧರಿಸುವನು.
- Verse 21: ಸರ್ವೇಶ್ವರ ಸ್ವಾಮಿಯೇ ಈಜಿಪ್ಟಿನವರಿಗೆ ತಿಳಿಯಪಡಿಸುವರು. ಜನರು ಸ್ವಾಮಿಯನ್ನು ಅರಿತುಕೊಂಡು, ಯಜ್ಞನೈವೇದ್ಯಗಳನ್ನು ಕಾಣಿಕೆಯಾಗಿ ಸಮರ್ಪಿಸುವರು, ಹೊತ್ತ ಹರಕೆಗಳನ್ನು ನೆರವೇರಿಸುವರು.
- Verse 22: ಇದಲ್ಲದೆ ಸರ್ವೇಶ್ವರ ಈಜಿಪ್ಟಿನವರನ್ನು ದಂಡಿಸುವರು, ಗಾಯಗೊಳಿಸಿದರೂ ಗುಣಪಡಿಸುವರು. ಈಜಿಪ್ಟಿನವರು ಸ್ವಾಮಿಯ ಕಡೆಗೆ ತಿರುಗಿಕೊಳ್ಳುವರು. ಸ್ವಾಮಿ ಅವರ ಮೊರೆಯನ್ನು ಆಲಿಸಿ ಅವರನ್ನು ಗುಣಪಡಿಸುವರು.
- Verse 23: ಆ ದಿನದಂದು ಈಜಿಪ್ಟ್ ಮತ್ತು ಅಸ್ಸೀರಿಯರ ನಡುವೆ ಹೆದ್ದಾರಿ ಇರುವುದು. ಅಸ್ಸೀರಿಯದವರು ಈಜಿಪ್ಟಿಗೂ ಈಜಿಪ್ಟಿನವರು ಅಸ್ಸೀರಿಯಕ್ಕೂ ಸಂಚಾರಮಾಡುವರು. ಈಜಿಪ್ಟಿನವರು ಅಸ್ಸೀರಿಯದವರೊಡನೆ ಸೇರಿ ಸರ್ವೇಶ್ವರ ಸ್ವಾಮಿಯನ್ನು ಆರಾಧಿಸುವರು.
- Verse 24: ಆ ದಿನದಂದು ಇಸ್ರಯೇಲ್ ಈಜಿಪ್ಟಿನೊಂದಿಗೂ ಅಸ್ಸೀರಿಯದೊಂದಿಗೂ ಸೇರುವುದು. ಈ ಮೂರು ರಾಷ್ಟ್ರಗಳು ಇಡೀ ಜಗಕ್ಕೆ ಆಶೀರ್ವಾದದ ಕೇಂದ್ರವಾಗಿ ಪರಿಣಮಿಸುವುವು.
- Verse 25: “ನನ್ನ ಪ್ರಜೆಯಾದ ಈಜಿಪ್ಟ್, ನನ್ನ ಕೈಚಳಕದ ಅಸ್ಸೀರಿಯಾ, ನನ್ನ ಸೊತ್ತಾದ ಇಸ್ರಯೇಲ್ ನಿಮಗೆ ಶುಭಮಂಗಳ,” ಎಂದು ಅವುಗಳನ್ನು ಸರ್ವಶಕ್ತ ಸರ್ವೇಶ್ವರ ಸ್ವಾಮಿ ಆಶೀರ್ವದಿಸುವರು.