ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
40ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ:
- Verse 2: “ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸು.
- Verse 3: ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ತೆರೆಯಿಂದ ಮರೆಮಾಡು.
- Verse 4: ಆ ಮೇಲೆಮೇಜನ್ನು ತರಿಸಿ ಅದರ ಮೇಲಿಡಬೇಕಾದುದನ್ನು ಸರಿಯಾಗಿ ಇಡು. ದೀಪವೃಕ್ಷವನ್ನು ತರಿಸಿ ಅದರ ಹಣತೆಗಳನ್ನು ಸರಿಯಾಗಿಡು.
- Verse 5: ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಕೆಯನ್ನು ಇಟ್ಟು, ಗುಡಾರದ ಬಾಗಿಲಲ್ಲಿ ಪರದೆಯನ್ನು ಕಟ್ಟು.
- Verse 6: ದೇವದರ್ಶನದ ಗುಡಾರದ ಬಾಗಿಲಿನ ಮುಂದುಗಡೆಯಲ್ಲಿ ಬಲಿಪೀಠವನ್ನು ಇಡು.
- Verse 7: ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ನೀರು ತೊಟ್ಟಿಯನ್ನಿಟ್ಟು ಅದರಲ್ಲಿ ನೀರನ್ನು ತುಂಬಿಸು.
- Verse 8: ಅಂಗಳದ ಸುತ್ತಲೂ ಆವರಣವನ್ನು ನಿಲ್ಲಿಸಿ ಅಂಗಳದ ಬಾಗಿಲಿಗೆ ಪರದೆಯನ್ನು ತೂಗುಬಿಡು.
- Verse 9: ಬಳಿಕ ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿ ಇರುವುದೆಲ್ಲವನ್ನೂ ಅದರ ಎಲ್ಲ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಾಪಿಸು. ಅಂದಿನಿಂದ ಅದು ಪರಿಶುದ್ಧವಾಗಿರುವುದು.
- Verse 10: ಬಲಿಪೀಠವನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಬಲಿಪೀಠವನ್ನು ಪ್ರತಿಷ್ಠಾಪಿಸು. ಅದು ಪರಮಪವಿತ್ರವಾಗಿರಬೇಕು.
- Verse 11: ನೀರು ತೊಟ್ಟಿಯನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಾಪಿಸು.
- Verse 12: “ಅದಲ್ಲದೆ ಆರೋನನನ್ನು ಮತ್ತು ಅವನ ಮಕ್ಕಳನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿ ಅವರನ್ನು ಸ್ನಾನಮಾಡಿಸು.
- Verse 13: ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಾಪಿಸು.
- Verse 14: ಅನಂತರ ಅವನ ಮಕ್ಕಳನ್ನು ಬರಮಾಡು.
- Verse 15: ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನು ಕೂಡ ಅಭಿಷೇಕಿಸು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು,” ಎಂದು ಹೇಳಿದರು.
- Verse 16: ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.
- Verse 17: ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರವನ್ನು ಎತ್ತಿ ನಿಲ್ಲಿಸಿದನು.
- Verse 18: ಅವನು ಗುಡಾರವನ್ನು ಎತ್ತಿಸಿ ಅದರ ಗದ್ದಿಗೇಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು.
- Verse 19: ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿದನು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಅದೆಲ್ಲವನ್ನು ಮಾಡಿದನು.
- Verse 20: ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಗದ್ದಿಗೆಗಳನ್ನು ಕೊಟ್ಟು ಅದರ ಮೇಲೆ ಕೃಪಾಸನವನ್ನಿಟ್ಟು,
- Verse 21: ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ತೆರೆಯನ್ನು ಇರಿಸಿ, ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.
- Verse 22: ಅದಲ್ಲದೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರಕಡೆಯಲ್ಲಿ ತೆರೆಯ ಹೊರಗಡೆ ಮೇಜನ್ನು ಇಟ್ಟು
- Verse 23: ಅದರ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲಿ ರೊಟ್ಟಿಗಳನ್ನು ಕ್ರಮವಾಗಿ ಇರಿಸಿದನು.
- Verse 24: ಸರ್ವೇಶ್ವರ ಆಜ್ಞಾಪಿಸಿದಂತೆಯೇ ಅವನು ದೀಪವೃಕ್ಷವನ್ನು ದೇವದರ್ಶನದ ಗುಡಾರದೊಳಗೆ ಮೇಜಿನ ಎದುರಾಗಿ ಗುಡಾರದ ದಕ್ಷಿಣಕಡೆಯಲ್ಲಿ ಇಟ್ಟು
- Verse 25: ಅದರ ಹಣತೆಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು.
- Verse 26: ಸರ್ವೇಶ್ವರ ಆಜ್ಞಾಪಿಸಿದಂತೆ ಚಿನ್ನದ ಧೂಪವೇದಿಕೆಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಮುಂದೆ ಇಟ್ಟು
- Verse 27: ಅದರ ಮೇಲೆ ಪರಿಮಳದ್ರವ್ಯಗಳ ಧೂಪವನ್ನು ಹಾಕಿದನು;
- Verse 28: ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿದನು.
- Verse 29: ಸರ್ವೇಶ್ವರ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠವನ್ನಿಟ್ಟು ಅದರ ಮೇಲೆ ದಹನಬಲಿಯನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು.
- Verse 30: ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ನೀರಿನ ತೊಟ್ಟಿಯನ್ನು ಇರಿಸಿ ಅದರಲ್ಲಿ ನೀರು ತುಂಬಿಸಿದನು.
- Verse 31: ಅದರಲ್ಲಿ ಮೋಶೆಯೂ
- Verse 32: ಆರೋನನೂ ಅವನ ಮಕ್ಕಳೂ ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ ಬಲಿಪೀಠದ ಸೇವೆಗೆ ಬಂದಾಗಲೂ ಕೈಕಾಲುಗಳನ್ನು ತೊಳೆದುಕೊಳ್ಳುವರು.
- Verse 33: ಗುಡಾರ ಹಾಗು ಬಲಿಪೀಠದ ಸುತ್ತಲು ಆವರಣವನ್ನು ಎತ್ತಿ ನಿಲ್ಲಿಸಿ ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿದನು. ಹೀಗೆ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.
- Verse 34: ಆಗ ಮೇಘವೊಂದು ದೇವದರ್ಶನದ ಗುಡಾರವನ್ನು ಮುಚ್ಚಿತು; ಸರ್ವೇಶ್ವರನ ತೇಜಸ್ಸು ಗುಡಾರವನ್ನು ತುಂಬಿತು.
- Verse 35: ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.
- Verse 36: ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಯೇಲರು ಮುಂದಕ್ಕೆ ಪ್ರಯಾಣ ಮಾಡುತ್ತಿದ್ದರು.
- Verse 37: ಆ ಮೇಘವು ಬಿಡದೆ ಇರುವಾಗ ಅದು ಬಿಡುವ ತನಕ ಪ್ರಯಾಣಮಾಡದೆ ಇರುತ್ತಿದ್ದರು.
- Verse 38: ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲುಹೊತ್ತಿನಲ್ಲಿ ಸರ್ವೇಶ್ವರನ ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.