ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
2ನೇ ಅಧ್ಯಾಯ
- Verse 1: “ಯಾರಾದರು ಸರ್ವೇಶ್ವರ ಸ್ವಾಮಿಗೆ ಧಾನ್ಯವನ್ನು ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿ ಹಿಟ್ಟಾಗಿರಬೇಕು. ಅದರ ಮೇಲೆ ಎಣ್ಣೆಹೊಯ್ದು, ಸಾಂಬ್ರಾಣಿಯನ್ನಿಟ್ಟು, ಅದನ್ನು ಆರೋನನ ವಂಶಜರಾದ ಯಾಜಕರ ಬಳಿಗೆ ತರಬೇಕು.
- Verse 2: ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಯಾಜಕನು ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಹಾಗು ಇಡೀ ಸಾಂಬ್ರಾಣಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ.
- Verse 3: ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಯುವ ಹೋಮಶೇಷವು ಮಹಾಪರಿಶುದ್ಧವಾದುದು.
- Verse 4: “ನೀವು ಒಲೆಯಲ್ಲಿ ಅಡಿಗೆ ಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿ ಹಿಟ್ಟಿನ ಹೋಳಿಗೆಗಳಾಗಿರಲಿ ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳಾಗಿರಲಿ.
- Verse 5: ನೀವು ಅರ್ಪಿಸುವುದು ಕಬ್ಬಿಣದ ಹೆಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿ ಹಿಟ್ಟಿನದಾಗಿರಬೇಕು.
- Verse 6: ಅದನ್ನು ಚೂರುಚೂರಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ದು ಕಾಣಿಕೆಯಾಗಿ ಕೊಡಬೇಕು.
- Verse 7: ನೀವು ಅರ್ಪಿಸುವುದು ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿ ಹಿಟ್ಟಿನದಾಗಿರಬೇಕು.
- Verse 8: ನೀವು ಈ ಮೂರು ವಿಧವಾದ ನೈವೇದ್ಯವನ್ನು ಸಮರ್ಪಿಸುವುದಾದರೆ ಅವುಗಳನ್ನು ಯಾಜಕನಿಗೆ ಒಪ್ಪಿಸಬೇಕು. ಅವನೇ ಅದನ್ನು ಬಲಿಪೀಠದ ಬಳಿಗೆ ತರಲಿ.
- Verse 9: ಯಾಜಕನು ಅದು ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪ ಭಾಗವನ್ನು ಪ್ರತ್ಯೇಕಿಸಿ ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ.
- Verse 10: ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶಜರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಕೆಯಾದದ್ದು ಮಹಾಪರಿಶುದ್ಧವಾದುದು.
- Verse 11: “ನೀವು ಸರ್ವೇಶ್ವರನಿಗೆ ಕಾಣಿಕೆಯಾಗಿ ಸಮರ್ಪಿಸುವ ಯಾವ ಧಾನ್ಯದ ಪದಾರ್ಥವನ್ನಾಗಲಿ ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಸಿಹಿಪದಾರ್ಥವನ್ನಾಗಲಿ ಸರ್ವೇಶ್ವರನಿಗೆ ಹೋಮಮಾಡಕೂಡದು.
- Verse 12: ಅವುಗಳನ್ನು ಪ್ರಥಮ ಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬಹುದೇ ಹೊರತು ಬಲಿಪೀಠದ ಮೇಲೆ ಸುವಾಸನೆಯನ್ನುಂಟುಮಾಡುವುದಕ್ಕಾಗಿ ಹೋಮ ಮಾಡಕೂಡದು.
- Verse 13: ನೈವೇದ್ಯವಾಗಿ ಸಮರ್ಪಿಸುವ ಎಲ್ಲ ಆಹಾರ ಪದಾರ್ಥಗಳಿಗೂ ಉಪ್ಪು ಹಾಕಿಯೆ ಸಮರ್ಪಿಸಬೇಕು. ಉಪ್ಪು ಸರ್ವೇಶ್ವರನ ಸಂಗಡ ನಿಮಗಿರುವ ಒಡಂಬಡಿಕೆಯ ಸೂಚನೆ. ಆದ್ದರಿಂದ ಅದು ಯಾವ ನೈವೇದ್ಯ ದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲ ಪದಾರ್ಥಗಳಲ್ಲಿಯೂ ಉಪ್ಪು ಸೇರಿಸಿಯೇ ಇರಬೇಕು.
- Verse 14: “ನೀವು ಸರ್ವೇಶ್ವರನಿಗೆ ಪ್ರಥಮ ಧಾನ್ಯ ನೈವೇದ್ಯವನ್ನು ಮಾಡಬೇಕಾದರೆ ಅದು ಬೆಂಕಿಯಲ್ಲಿ ಸುಟ್ಟ ಗೋದಿಯ ಹಸಿ ತೆನೆಗಳಾಗಿರಬೇಕು.
- Verse 15: ಅದು ನೈವೇದ್ಯ ವಸ್ತುವಾದುದರಿಂದ ಅದರ ಮೇಲೆ ಎಣ್ಣೆ ಹೊಯ್ಯಬೇಕು; ಸಾಂಬ್ರಾಣಿ ಇಡಬೇಕು.
- Verse 16: ಯಾಜಕನು ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಆ ಗೋದಿ ತೆನೆಯಿಂದಲೂ, ಎಣ್ಣೆಯಿಂದಲೂ ಸ್ವಲ್ಪ ಭಾಗವನ್ನು ತೆಗೆದುಕೊಂಡು ಸಾಂಬ್ರಾಣಿಯನ್ನೆಲ್ಲ ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಸರ್ವೇಶ್ವರನಿಗೆ ಹೋಮಮಾಡಲಿ.