ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
8ನೇ ಅಧ್ಯಾಯ
- Verse 1: ಅನಂತರ ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: “ಬರೆಯುವ ದೊಡ್ಡ ಹಲಗೆ ಒಂದನ್ನು ತೆಗೆದುಕೊಂಡು ಸಾಧಾರಣ ಲಿಪಿಯಲ್ಲಿ, ಈ ಸೂಚ್ಯವಾದ ಪದಗಳನ್ನು ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್’ (ಅಂದರೆ ಸೂರೆಗೆ ಆತುರ; ಕೊಳ್ಳೆಗೆ ಅವಸರ).
- Verse 2: ನೀನು ಹೀಗೆ ಬರೆದುದಕ್ಕೆ ಯಾಜಕನಾದ ಊರೀಯ, ಯೆಬೆರೆಕ್ಕನ ಮಗನಾದ ಜೆಕರ್ಯ - ಈ ನಂಬಿಗಸ್ತರನ್ನು ಸಾಕ್ಷಿಗಳಾಗಿ ಕರೆದುಕೊ” ಎಂದು ಹೇಳಿದರು.
- Verse 3: ಸ್ವಲ್ಪಕಾಲವಾದ ನಂತರ ನಾನು ಪ್ರವಾದಿನಿಯನ್ನು ಕೂಡಲು ಆಕೆ ಗರ್ಭವತಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ನನಗೆ: “ಆ ಮಗುವಿಗೆ ‘ಮಹೇರ್ ಶಾಲಾಲ್ ಹಾಷ್ ಬಜ್’ ಎಂದು ಹೆಸರಿಡು.
- Verse 4: ಅವನು ‘ಅಪ್ಪಾ, ಅಮ್ಮಾ, ಎಂದು ಕೂಗಬಲ್ಲವನಾಗುವುದರೊಳಗೆ ಅಸ್ಸೀರಿಯದ ಅರಸನು ದಮಸ್ಕಸ್ಸಿನ ಆಸ್ತಿಪಾಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು ಹೋಗುವನು,” ಎಂದು ಸರ್ವೇಶ್ವರಸ್ವಾಮಿ ಹೇಳಿದರು.
- Verse 5: ಸರ್ವೇಶ್ವರ ಮತ್ತೊಮ್ಮೆ ನನಗೆ ಹೀಗೆಂದರು :
- Verse 6: “ಈ ಜನರು ಸುಲಲಿತವಾಗಿ ಹರಿಯುವ ಸಿಲೋವದ ನೀರನ್ನು ಅಲ್ಲಗಳೆದು, ಅರಸನಾದ ರೆಚೀನ ಹಾಗೂ ಪೆಕಹ ಇವರುಗಳನ್ನು ನೆಚ್ಚಿಕೊಂಡು ನಲಿಯುತ್ತಿದ್ದಾರೆ.
- Verse 7: ಆದುದರಿಂದ ಸ್ವಾಮಿಯಾದ ನಾನು ಅಸ್ಸೀರಿಯದ ಅರಸನನ್ನೂ ಅವನ ಚದುರಂಗ ಬಲವನ್ನೂ ಬರಮಾಡುವೆನು: ಅದು ಯೂಫ್ರಟಿಸ್ ಮಹಾನದಿಯ ಪ್ರವಾಹದಂತೆ ರಭಸವಾಗಿ ಹರಿದುಬರುವುದು.
- Verse 8: ಹದ್ದುಮೀರಿ ಜುದೇಯದೆಲ್ಲೆಡೆ ನುಗ್ಗಿ ಹಳ್ಳಕೊಳ್ಳಗಳನ್ನು ತುಂಬುವುದು. ಕುತ್ತಿಗೆಯ ತನಕ ಉಕ್ಕಿಬಂದು ದಿಣ್ಣೆದಿಬ್ಬಗಳನ್ನು ಮುಳುಗಿಸುವುದು. ದೇವರು ನಮ್ಮೊಡನೆ (ಇಮ್ಮಾನುವೇಲ್) ಇರುವರು. ಅವರ ಬಿಚ್ಚುರೆಕ್ಕೆಗಳು ನಾಡಿನ ಉದ್ದಗಲವನ್ನೂ ಆವರಿಸುವುವು, ಇಡೀ ನಾಡಿಗೆ ಆಶ್ರಯ ನೀಡುವುವು.
- Verse 9: ಕೂಡಿಬನ್ನಿ ರಾಷ್ಟ್ರಗಳೇ, ತುಂಡುತುಂಡಾಗುವಿರಿ ನೀವು; ಕಿವಿಗೊಡಿ, ದೂರ ದೇಶಗಳೇ, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು; ಹೌದು, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು.
- Verse 10: ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.”
- Verse 11: ಜನರು ಅನುಸರಿಸುವ ಮಾರ್ಗದಲ್ಲಿ ನಾನು ನಡೆಯಬಾರದೆಂದು ಸರ್ವೇಶ್ವರ ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ಎಚ್ಚರಿಕೆ ಇತ್ತರು:
- Verse 12: “ಈ ಜನರು ಮಾಡುವ ಕುತಂತ್ರಕ್ಕೆ ಒಳಗಾಗಬೇಡ. ಅವರು ಯಾವುದಕ್ಕೆ ಭಯಪಡುತ್ತಾರೋ ಅದಕ್ಕೆ ನೀನು ಭಯಪಡಬೇಡ, ನಡುಗಲೂ ಬೇಡ.
- Verse 13: ಸೇನಾಧೀಶ್ವರ ಸ್ವಾಮಿಯಾದ ನಾನು ಪವಿತ್ರನೆಂದು ಎಣಿಸಿ ನನಗೆ ಭಯಭಕ್ತಿಯಿಂದ ಸನ್ಮಾನಮಾಡು, ನನಗೆ ಹೆದರು.
- Verse 14: ನಾನು ನಿನಗೆ ಪವಿತ್ರಾಲಯ ಆಗಿರುವೆನು. ಆದರೆ ಇಸ್ರಯೇಲಿನ ಎರಡು ಕುಲಗಳಿಗೆ ಎಡವುವ ಕಲ್ಲಾಗುವೆನು, ಮುಗ್ಗರಿಸುವ ಬಂಡೆಯಾಗುವೆನು. ಜೆರುಸಲೇಮಿನ ನಿವಾಸಿಗಳನ್ನು ಹಿಡಿಯುವ ಬಲೆಯೂ ಬೋನೂ ಆಗುವೆನು.
- Verse 15: ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬೋನಿಗೆ ಸಿಕ್ಕಿಕೊಳ್ಳುವರು, ಬಲೆಗೆ ಬೀಳುವರು.”
- Verse 16: ದಿವ್ಯಬೋಧನೆಯನ್ನು ಸುಭದ್ರವಾಗಿ ಇರಿಸು. ಅದನ್ನು ನನ್ನ ಶಿಷ್ಯರಿಗೆ ಉಪದೇಶಮಾಡಿ ಸುರಕ್ಷಿತವಾಗಿರಿಸು.
- Verse 17: ಯಕೋಬನ ಮನೆತನದವರಿಗೆ ತನ್ನ ಮುಖವನ್ನು ಮರೆಯಿಸಿಕೊಂಡು ಇರುವ ಸ್ವಾಮಿಗಾಗಿ ಕಾದಿರುವೆನು. ಸ್ವಾಮಿಯನ್ನೇ ಎದುರು ನೋಡುತ್ತಿರುವೆನು.
- Verse 18: ಇಗೋ, ನನ್ನನ್ನೂ ನನಗೆ ಸ್ವಾಮಿ ದಯಪಾಲಿಸಿರುವ ಮಕ್ಕಳನ್ನೂ ನೋಡು. ಸಿಯೋನ್ ಶಿಖರದಲ್ಲಿ ವಾಸವಾಗಿರುವ ಸೇನಾಧೀಶ್ವರಸ್ವಾಮಿಯೇ ಇಸ್ರಯೇಲರಿಗೆ ನೀಡುವ ಸೂಚನೆಗಳು ಹಾಗೂ ಜೀವಂತ ಸಂಕೇತಗಳು ನಾವೇ ಆಗಿದ್ದೇವೆ.
- Verse 19: ‘ಲೊಚಗುಟ್ಟುವ, ಪಿಟಿಪಿಟಿಗುಟ್ಟುವ, ಕಣಿಹೇಳುವವರ ಮತ್ತು ಪ್ರೇತವಿಚಾರಕರ ಸಲಹೆ ಕೇಳಿ’ ಎಂದು ಜನರು ನಿಮಗೆ ಹೇಳಿಯಾರು. ಆಗ, ‘ದೇವರನ್ನೇ ಏಕೆ ವಿಚಾರಿಸಬಾರದು? ಜೀವಿತರಿಗಾಗಿ ಸತ್ತವರನ್ನು ವಿಚಾರಿಸುವುದು ಸರಿಯಲ್ಲ’ ಎಂದು ಅಂಥವರಿಗೆ ನೀವು ಹೇಳಬೇಕು.
- Verse 20: ‘ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸೋಣ’ ಎಂದು ಅವರು ಹೇಳುವತನಕ ಅವರಿಗೆ ಜ್ಞಾನೋದಯವಾಗುವುದಿಲ್ಲ.
- Verse 21: ಜನರು ಘೋರ ಕಷ್ಟಗಳಿಗೆ ಒಳಗಾಗುವರು. ಹಸಿದು ದೇಶದಲ್ಲೆಲ್ಲ ಅಲೆದಾಡುವರು. ಹಸಿವಿನಿಂದ ರೋಷಗೊಂಡು ಅರಸನನ್ನೂ ದೇವರನ್ನೂ ಹಳಿಯುವರು.
- Verse 22: ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.