ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಸಮುವೇಲನು
5ನೇ ಅಧ್ಯಾಯ
- Verse 1: ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು;
- Verse 2: ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು.
- Verse 3: ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.
- Verse 4: ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು.
- Verse 5: ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತಮೂರು ವರ್ಷ.
- Verse 6: ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು.
- Verse 7: ಆದರೂ ಅವನು, ಈಗ ‘ದಾವೀದನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
- Verse 8: ಆ ದಿವಸ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲೆ ಹತ್ತಿ ಹೋಗಿ ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ,” ಎಂದು ಹೇಳಿದನು. ಆದುದರಿಂದಲೇ “ಕುರುಡರೂ ಕುಂಟರೂ ದೇವಾಲಯದೊಳಗೆ ಹೋಗಲಾಗದು,” ಎಂಬ ಹೇಳಿಕೆಯುಂಟು.
- Verse 9: ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಿದ್ದನು. ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.
- Verse 10: ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ಧಿಹೊಂದುತ್ತಾ ಬಂದನು.
- Verse 11: ಟೈರಿನ ರಾಜನಾದ ಹೀರಾಮನು ದಾವೀದನಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಹಾಗು ಶಿಲ್ಪಿಗಳನ್ನು ಕಳುಹಿಸಿದನು. ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು.
- Verse 12: ಹೀಗೆ ದಾವೀದನು, “ಸರ್ವೇಶ್ವರಸ್ವಾಮಿ ನನ್ನನ್ನು ಇಸ್ರಯೇಲ್ ಅರಸನನ್ನಾಗಿ ಸ್ಥಿರಪಡಿಸಿದ್ದಾರೆ, ತಮ್ಮ ಪ್ರಜೆಗಳಾದ ಇಸ್ರಯೇಲರ ನಿಮಿತ್ತ ನನ್ನ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ,” ಎಂದು ತಿಳಿದುಕೊಂಡನು.
- Verse 13: ಹೆಬ್ರೋನಿನಿಂದ ಜೆರುಸಲೇಮಿಗೆ ಬಂದ ಮೇಲೆ ದಾವೀದನು ಹೆಚ್ಚುಮಂದಿ ಸ್ತ್ರೀಯರನ್ನು ಪತ್ನಿಯರನ್ನಾಗಿ ಹಾಗು ಉಪಪತ್ನಿಯರನ್ನಾಗಿ ಮಾಡಿಕೊಂಡನು. ಅವನಿಗೆ ಇನ್ನೂ ಕೆಲವು ಮಂದಿ ಗಂಡುಹೆಣ್ಣು ಮಕ್ಕಳು ಹುಟ್ಟಿದರು.
- Verse 14: ಅಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಇವು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
- Verse 15: ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
- Verse 16: ಎಲೀಷಾಮ, ಎಲ್ಯಾದ ಹಾಗು ಎಲೀಫೆಲೆಟ್.
- Verse 17: ಇಸ್ರಯೇಲರು ದಾವೀದನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ಸಮಾಚಾರ ಫಿಲಿಷ್ಟಿಯರಿಗೆ ಮುಟ್ಟಿತು. ಆಗ ಅವರು ಅವನನ್ನು ಬಂಧಿಸಲು ಬಂದರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.
- Verse 18: ಫಿಲಿಷ್ಟಿಯರು ನಾಡಿನೊಳಗೆ ನುಗ್ಗಿ ರೆಫಾಯಿಮ್ ತಗ್ಗಿಗೆ ಬಂದು ಪಾಳೆಯ ಮಾಡಿಕೊಂಡರು.
- Verse 19: ದಾವೀದನು ಸರ್ವೇಶ್ವರನನ್ನು, “ನಾನು ಫಿಲಿಷ್ಟಿಯರ ಮೇಲೆ ದಾಳಿ ಮಾಡಬಹುದೇ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿರಾ?’ ಎಂದು ಕೇಳಿದನು. ಸರ್ವೇಶ್ವರ, “ಹೋಗು, ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸುವೆನು,” ಎಂದು ಉತ್ತರಕೊಟ್ಟರು.
- Verse 20: ಆದುದರಿಂದ ಅವನು ಹೋಗಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ಸರ್ವೇಶ್ವರ ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ ಆ ಯುದ್ಧಸ್ಥಳಕ್ಕೆ, ‘ಬಾಳ್ ಪೆರಾಚೀಮ್’ ಎಂದು ಹೆಸರಿಟ್ಟನು.
- Verse 21: ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.
- Verse 22: ಫಿಲಿಷ್ಟಿಯರು ಇನ್ನೊಮ್ಮೆ ಹೊರಟುಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.
- Verse 23: ದಾವೀದನು ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದಾಗ ಅವರು, “ನೀನು ನೆಟ್ಟಗೆ ಹೋಗಿ ಅವರ ಮೇಲೆ ದಾಳಿ ಮಾಡಬೇಡ; ಅವರ ಹಿಂದಳವನ್ನು ಸುತ್ತಿಕೊಂಡು ಹೋಗಿ ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.
- Verse 24: ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಸರ್ವೇಶ್ವರ, ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದರು.
- Verse 25: ದಾವೀದನು ಸರ್ವೇಶ್ವರನ ಆಜ್ಞಾನುಸಾರ ಮಾಡಿ ಫಿಲಿಷ್ಟಿಯರನ್ನು ಗೆಬದಿಂದ ಗೆಜರಿನವರೆಗೂ ಹೊಡೆದು ಓಡಿಸಿದನು.