ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
105ನೇ ಅಧ್ಯಾಯ
- Verse 1: ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
- Verse 2: ಹಾಡಿ ಪಾಡಿ ಹೊಗಳಿರಿ ಪ್ರಭುವನು I ಧ್ಯಾನಿಸಿ ನೀವು ಆತನ ಪವಾಡಗಳನು II
- Verse 3: ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
- Verse 4: ಅರಸಿರಿ ಪ್ರಭುವನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
- Verse 5: ಆತನ ದಾಸ ಅಬ್ರಹಾಮನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II
- Verse 6: ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II
- Verse 7: ಪ್ರಭು ನಮ್ಮ ದೇವನೆಂಬುದು ಶ್ರುತ I ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II
- Verse 8: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
- Verse 9: ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II
- Verse 10: ಯಕೋಬನಿಗೆ ರಾಜಶಾಸನವಾಗಿ ಕೊಟ್ಟುದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು II
- Verse 11: “ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದು ಅದು ನಿಮ್ಮ ಸಂತತಿಗೆ” II
- Verse 12: ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು II
- Verse 13: ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು II
- Verse 14: ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನೂ ಗದರಿಸದೆ ಬಿಡಲಿಲ್ಲ : II
- Verse 15: “ನಾನಭಿಷೇಕಿಸಿದವರನಿದೋ ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II
- Verse 16: ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು I ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು II
- Verse 17: ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು I ದಾಸತ್ವಕೆ ಮಾರಲಾದ ಆ ಜೋಸೆಫನನು II
- Verse 18: ಅವನ ಕಾಲು ನೊಂದವು ಸಂಕೋಲೆಗಳಿಂದ I ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ II
- Verse 19: ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು I ಪ್ರಭುವಿನ ವಾಣಿ ಕಂಡುಬಂದಿತು ಸತ್ಯವೆಂದು II
- Verse 20: ಬಿಡಿಸಲವನನು ಅರಸ ಕಳಿಸಿದ ಆಳನು I ಬಿಡುಗಡೆಮಾಡಿದ ಜನಾಧಿಪತಿ ಅವನನು II
- Verse 21: ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ I ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ II
- Verse 22: ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ I ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ II
- Verse 23: ಬಂದನು ಆಗ ಇಸ್ರಯೇಲನು ಈಜಿಪ್ಟಿಗೆ I ಪ್ರವಾಸಿಯಾದ ಯಕೋಬನು ಹಾಮ ನಾಡಿಗೆ II
- Verse 24: ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ I ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ II
- Verse 25: ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು ದ್ವೇಷಿಸುವಂತೆ I ತನ್ನ ದಾಸರೊಡನವರು ಕುಯುಕ್ತಿಯಿಂದ ನಡೆದುಕೊಳ್ಳುವಂತೆ II
- Verse 26: ಕಳಿಸಿದ ತನ್ನ ದಾಸ ಮೋಶೆಯನು I ತಾನು ಆರಿಸಿಕೊಂಡ ಆರೋನನನು II
- Verse 27: ನೋಡಿದರಿವರು ಆತನ ಸೂಚಕಕಾರ್ಯಗಳನು I ಹಾಮ ನಾಡಿನಲಿ ನಾನಾ ಅದ್ಭುತಕಾರ್ಯಗಳನು II
- Verse 28: ಕಾಳ ರಾತ್ರಿಯಾಯಿತು ಪ್ರಭು ಕಳಿಸಲು ಕತ್ತಲನು I ಈಜಿಪ್ಟರಾದರೊ ಇದಿರಿಸಿದರು ಆತನ ಮಾತನು II
- Verse 29: ರಕ್ತವಾಗಿಸಿದನಾತ ಅವರ ನದಿಗಳನು I ಸಾಯಿಸಿದನು ಅವುಗಳಲಿದ್ದ ಮೀನುಗಳನು II
- Verse 30: ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ I ಹರಡಿಕೊಂಡವು ಅರಸನ ಕೊಠಡಿಗಳಲೆಲ್ಲ II
- Verse 31: ಕಾಣಿಸಿಕೊಂಡವು ಆತನಾಜ್ಞಾಪಿಸಲು I ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು II
- Verse 32: ಮಳೆಗೆ ಬದಲು ಕಳಿಸಿದ ಕಲ್ಮಳೆಯನು I ನಾಡಿನೆಲ್ಲೆಡೆಯೊಳು ಸಿಡಿಲುಮಿಂಚನು II
- Verse 33: ನಾಶಮಾಡಿದ ನಾಡಿನ ಎಲ್ಲಾ ಮರವೃಕ್ಷಗಳನು I ದ್ರಾಕ್ಷಾಲತೆಗಳನ್ನು ಮೇಣ್ ಅಂಜೂರಗಿಡಗಳನು II
- Verse 34: ಆತ ನುಡಿದದ್ದೇ, ಬಂದವು ಮಿಡತೆಗಳು I ಅಗಣಿತವಾದ ಸಂಖ್ಯೆಯಲಿ ಚಿಟ್ಟೆಹುಳುಗಳು II
- Verse 35: ತಿಂದುಬಿಟ್ಟವವು ನಾಡಿನ ಬೆಳೆಯನು I ಹೊಲಗದ್ದೆಗಳು ಇತ್ತ ಫಲವೆಲ್ಲವನು II
- Verse 36: ಕೊಂದನು ನಾಡಿನ ಜ್ಯೇಷ್ಠರೆಲ್ಲರನು I ಗಂಡಸುತನದಾ ಪ್ರಥಮ ಫಲಗಳನು II
- Verse 37: ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ ಸಹಿತ I ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ ನಿಶ್ಯಕ್ತ II
- Verse 38: ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ I ಈ ಕಾರಣ ಆನಂದಿಸಿದರು ಅವರು ಹೋದುದಕ್ಕೆ II
- Verse 39: ಹಗಲೊಳು ಮೋಡವಿತ್ತನವರಿಗೆ ನೆರಳಿಗೋಸ್ಕರ I ಇರುಳೊಳು ಬೆಂಕಿಯಿತ್ತನವರಿಗೆ ಬೆಳಕಿಗೋಸ್ಕರ II
- Verse 40: ಕೂಳನು ಕೇಳಿದಾಗ ಬರಮಾಡಿದನು ಲಾವಕ್ಕಿಗಳನು I ತೃಪ್ತಿಪಡಿಸಿದನು ಆಗಸದ ಆಹಾರಗಳಿಂದವರನು II
- Verse 41: ಬಂಡೆಯನಾತ ಸೀಳಲು ನೀರು ಹರಿದು ಬಂದಿತು I ನಿರ್ಜಲ ಪ್ರದೇಶದಲದು ನದಿಯಾಗಿ ಹರಿಯಿತು II
- Verse 42: ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು I ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ ಮಾತನು II
- Verse 43: ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ I ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ II
- Verse 44: ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು I ಅವರ ಕೈವಶಮಾಡಿದನು ಅನ್ಯರ ಕಷ್ಟಾರ್ಜಿತವನು II
- Verse 45: ತನ್ನ ವಿಧಿಗಳಂತೆ ನಡೆಯಲೆಂದೇ I ತನ್ನ ಶಾಸ್ತ್ರವನು ಅನುಸರಿಸಲೆಂದೇ I ಈ ಪರಿ ಮಾಡಿದಾ ಸ್ವಾಮಿಗೆ ವಂದನೆ II