ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
116ನೇ ಅಧ್ಯಾಯ
- Verse 1: ನನಗಿದೆ ಪ್ರಭುವಿನಲ್ಲಿ ಪ್ರೀತಿ I ಆಲಿಸಿಹನಾತ ನನ್ನ ವಿನಂತಿ II
- Verse 2: ಆತನೆನ್ನ ಮೊರೆಗೆ ಕಿವಿಗೊಟ್ಟ ನಿಮಿತ್ತ I ವಿಜ್ಞಾಪಿಸುವೆ ಜೀವಮಾನ ಪರಿಯಂತ II
- Verse 3: ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು I ಬಿಗಿಹಿಡಿದಿದ್ದವು ಪಾತಾಳ ವೇದನೆಗಳು I ಬಂದೊದಗಿದ್ದವೆನಗೆ ಕಷ್ಟಸಂಕಟಗಳು II
- Verse 4: ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು I “ಪ್ರಭು, ಉಳಿಸೆನ್ನ ಪ್ರಾಣವನು” ಎಂದು ಬೇಡಿದೆನು II
- Verse 5: ಪ್ರಭು ಕೃಪಾಳು, ನ್ಯಾಯಪ್ರಿಯನು I ಕರುಣಾಮಯನು, ನಮ್ಮ ದೇವನು II
- Verse 6: ಕಾಪಾಡುವನು ಪ್ರಭು ಸರಳ ಜೀವಿಗಳನು I ರಕ್ಷಿಸಿದನು ಕುಗ್ಗಿದವನಾಗಿದ್ದ ಎನ್ನನು II
- Verse 7: ಹಿಂತಿರುಗು ನನ್ನ ಮನವೆ, ವಿಶ್ರಾಂತಿ ನೆಲೆಗೆ II ಮಹೋಪಕಾರಗಳನ್ನು ಎಸಗಿಹನು ಪ್ರಭು ನಿನಗೆ II
- Verse 8: ತಪ್ಪಿಸಿಹನು ಮರಣಕೆ ನಾನೀಡಾಗದಂತೆ I ಸಂತೈಸಿಹನು ಕಂಬನಿಯ ನಾ ಸುರಿಸದಂತೆ I ಕಾಪಾಡಿಹನು ಕಾಲೆಡವಿ ನಾ ಬೀಳದಂತೆ II
- Verse 9: ಎಂದೇ ನಡೆವೆನು ನಾನು ಪ್ರಭುವಿನ ಕಣ್ಮುಂದೆ I ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ II
- Verse 10: ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು I ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು I ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು II
- Verse 11: ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು I ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು I ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು II
- Verse 12: ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ I ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? II
- Verse 13: ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II
- Verse 14: ಆತನಿಗೆ ನಾ ಹೊತ್ತ ಹರಕೆಗಳನು I ಆತನ ಸಭೆಮುಂದೆಯೆ ತೀರಿಸುವೆನು II
- Verse 15: ಪ್ರಭು ಅಲ್ಪವೆಂದೆಣಿಸನು I ತನ್ನ ಭಕ್ತರ ಮರಣವನು II
- Verse 16: ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು I ನಿನ್ನ ದಾಸಿಯ ಮಗನು, ನಿನ್ನ ಸೇವಕನು I ಬಿಡಿಸಿರುವೆ ನೀನು ನನ್ನ ಬಂಧನಗಳನು II
- Verse 17: ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II
- Verse 18: ಹೇ ಜೆರುಸಲೇಮೇ, ನಿನ್ನ ಮಧ್ಯದೊಳು I ಆತನಿರುವ ಮಂದಿರದ ಅಂಗಳದೊಳು I ತೀರಿಸುವೆನು ಆತನ ಸಭೆಯ ಸಮ್ಮುಖದೊಳು I ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು II
- Verse 19: ಹೇ ಜೆರುಸಲೇಮೇ, ನಿನ್ನ ಮಧ್ಯದೊಳು I ಆತನಿರುವ ಮಂದಿರದ ಅಂಗಳದೊಳು I ತೀರಿಸುವೆನು ಆತನ ಸಭೆಯ ಸಮ್ಮುಖದೊಳು I ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು II