ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
18ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ನನಗೆ :
- Verse 2: “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು.
- Verse 3: ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ.
- Verse 4: ಅವನು ಜೇಡಿ ಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟುಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ.
- Verse 5: ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ :
- Verse 6: “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ.
- Verse 7: ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ಕಿತ್ತು, ಕೆಡವಿ, ನಾಶಪಡಿಸಿ ಎಂದು ನಾನು ಎಂದಾದರೂ ಅಪ್ಪಣೆ ಕೊಡಲು ಸಾಧ್ಯ.
- Verse 8: ದಂಡನೆಗೆ ನಿರ್ಣಯಿಸಲಾದ ಆ ಜನಾಂಗದವರು ತಮ್ಮ ಕೆಟ್ಟತನವನ್ನು ಬಿಟ್ಟು ಹಿಂತಿರುಗಿದ್ದೇ ಆದರೆ ನಾನು ಬರಮಾಡಬೇಕೆಂದಿದ್ದ ಆ ವಿಪತ್ತನ್ನು ನಾನು ಮನಮರುಗಿ ಬರಮಾಡದಿರುವೆನು.
- Verse 9: ಹಾಗೆಯೇ ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ನೆಟ್ಟು ಕಟ್ಟಬೇಕೆಂದು ನಾನು ಎಂದಾದರೂ ಅಪ್ಪಣೆಕೊಡಲು ಸಾಧ್ಯ.
- Verse 10: ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ್ದೇ ಆದರೆ ನಾನು ಮನಸ್ಸನ್ನು ಬದಲಾಯಿಸುವೆನು. ಅದಕ್ಕೆ ಮಾಡಬೇಕೆಂದಿದ್ದ ಒಳಿತನ್ನು ಮಾಡದಿರುವೆನು.
- Verse 11: ಈಗ ನೀನು ಜುದೇಯದ ಹಾಗು ಜೆರುಸಲೇಮಿನ ಜನರಿಗೆ ಈ ಸಂದೇಶವನ್ನು ತಿಳಿಸು - ‘ಸರ್ವೇಶ್ವರ ಹೀಗೆನ್ನುತ್ತಾರೆ : ನಾನು ನಿಮಗೆ ವಿರುದ್ಧ ವಿಪತ್ತನ್ನು ಕಲ್ಪಿಸುತ್ತಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ದುರ್ಮಾರ್ಗವನ್ನು ಬಿಟ್ಟು ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ.
- Verse 12: “ಆದರೆ ಅವರು, ‘ಇದೆಲ್ಲ ಹೇಳಿ ಏನು ಪ್ರಯೋಜನವಿಲ್ಲ; ನಾವು ನಮ್ಮ ಆಲೋಚನೆ ಪ್ರಕಾರ ನಡೆಯುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಹೃದಯದ ಚಟದಂತೆಯೇ ನಡೆಯುತ್ತೇವೆ’ ಎಂದು ಹೇಳುವರು.”
- Verse 13: ಸರ್ವೇಶ್ವರ ಇಂತೆಂದರು : “ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆಂದು ಅನ್ಯಜನಾಂಗಗಳಲ್ಲೆ ವಿಚಾರಿಸಿರಿ. ಇಸ್ರಯೇಲೆಂಬ ಯುವತಿ ಕೇವಲ ಅಸಹ್ಯಕಾರ್ಯವನ್ನೆ ಎಸಗಿದ್ದಾಳೆ.
- Verse 14: ಲೆಬನೋನಿನ ಹಿಮವು ಅರಣ್ಯದಾ ಶಿಖರದಿಂದ ತಪ್ಪುವುದುಂಟೆ? ಅಲ್ಲಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದುಂಟೆ?
- Verse 15: ನನ್ನ ಜನರಾದರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಾರತಿ ಎತ್ತಿದ್ದುಂಟು. ಸನಾತನ ಸನ್ಮಾರ್ಗಗಳಲ್ಲಿ ಮುಗ್ಗರಿಸಿ ಸರಿಯಲ್ಲದ ಸೀಳುದಾರಿಯಲ್ಲಿ ಅಲೆದದ್ದುಂಟು.
- Verse 16: ಆದ್ದರಿಂದ ನಾಡನ್ನು ಭಯಾನಕವಾಗಿಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.
- Verse 17: ಶತ್ರುಗಳು ಮೇಲೆ ಬಿದ್ದು ದಾಳಿಮಾಡಲು ಬಂದಾಗ ಮೂಡಣ ಬಿರುಗಾಳಿ ಮುಂದೆ ಧೂಳಿ ಮಣ್ಣಿನಂತೆ ನನ್ನ ಜನರನ್ನು ದಿಕ್ಕುಪಾಲಾಗಿ ಚದರಿಸುವೆನು. ಅವರ ಆ ವಿಪತ್ತಿನ ದಿನದಂದು ಅವರತ್ತ ಮುಖತಿರುಗಿಸದೆ ಬೆನ್ನು ಮಾಡುವೆನು.”
- Verse 18: ಆಗ ಜನರು, “ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.
- Verse 19: ಯೆರೆಮೀಯ : “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.
- Verse 20: ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.
- Verse 21: ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.
- Verse 22: ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ.
- Verse 23: ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”