పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
20ನೇ ಅಧ್ಯಾಯ
- Verse 1: ಏಳನೆಯ ವರ್ಷದ ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಯೇಲಿನ ಹಿರಿಯರಲ್ಲಿ ಕೆಲವರು ಸರ್ವೇಶ್ವರನನ್ನು ಪ್ರಶ್ನಿಸುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು.
- Verse 2: ಆಗ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:
- Verse 3: “ನರಪುತ್ರನೇ, ಇಸ್ರಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.
- Verse 4: “ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನೀನೂ ಮನಸ್ಸು ಮಾಡಿರುವೆಯಾ? ಇವರ ಪಿತೃಗಳ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು -
- Verse 5: ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಾನು ಇಸ್ರಯೇಲರನ್ನು ಆರಿಸಿಕೊಂಡ ದಿನದಂದು ಯಕೋಬ ಸಂತಾನದವರಿಗೆ ಮಾತುಕೊಟ್ಟು, ‘ನಾನೇ ನಿಮ್ಮ ದೇವರಾದ ಸರ್ವೇಶ್ವರ’ ಎಂದು ಈಜಿಪ್ಟ್ ದೇಶದಲ್ಲಿ ಪ್ರಮಾಣಪೂರ್ವಕವಾಗಿ ತಿಳಿಯಪಡಿಸಿದೆ.
- Verse 6: ನಾನು ಅವರಿಗೆ ‘ನಾಡುಗಳಲ್ಲೆಲ್ಲ ಶ್ರೀಮಂತವಾದ ನಾಡನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ನಾಡಿಗೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆ;
- Verse 7: ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಬಿಸಾಡಿಬಿಡಿ; ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿ; ನಾನು ನಿಮ್ಮ ದೇವರಾದ ಸರ್ವೇಶ್ವರ’ ಎಂದು ಅವರನ್ನು ಎಚ್ಚರಿಸಿದೆ.
- Verse 8: ಅವರಾದರೋ ನನ್ನ ಮಾತನ್ನು ಲೆಕ್ಕಿಸದೆ ನನ್ನ ವಿರುದ್ಧ ದಂಗೆಯೆದ್ದರು; ತಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತ್ಯಜಿಸಲಿಲ್ಲ. ಆಗ ನಾನು ಈಜಿಪ್ಟ್ ದೇಶದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು ಎಂದುಕೊಂಡೆ.
- Verse 9: ಆದರೂ, ‘ನಿಮ್ಮನ್ನು ಈಜಿಪ್ಟಿನಿಂದ ಪಾರುಮಾಡುವೆನು,’ ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ ಅವರ ಸುತ್ತಮುತ್ತಲಿನ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.
- Verse 10: “ಆದರೂ ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಮರುಭೂಮಿಗೆ ಕರೆದುತಂದೆ.
- Verse 11: ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅವರಿಗೆ ತಿಳಿಸಿಕೊಟ್ಟೆ.
- Verse 12: ಇದಲ್ಲದೆ, ತಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರ ನಾನೇ ಎಂದು ಅವರು ತಿಳಿದುಕೊಳ್ಳುವಂತೆ ನನಗೂ ಅವರಿಗೂ ಸಂಕೇತವಾದ ಸಬ್ಬತ್ ದಿನಗಳನ್ನು ಅವರಿಗೆ ನೇಮಿಸಿದೆ.
- Verse 13: ಆದರೆ ಇಸ್ರಯೇಲ್ ವಂಶದವರು ಮರುಭೂಮಿಯಲ್ಲಿ ನನ್ನ ವಿರುದ್ಧ ದಂಗೆಯೆದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ಧಿಕ್ಕರಿಸಿದರು. ಮುಖ್ಯವಾಗಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿದರು. ಆಗ ನಾನು ‘ಮರುಭೂಮಿಯಲ್ಲಿರುವ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ ಇವರನ್ನು ಧ್ವಂಸಮಾಡುವೆನು’ ಎಂದುಕೊಂಡೆ.
- Verse 14: ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಬರಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ.
- Verse 15: ಆಮೇಲೆ, ‘ನಾಡುಗಳಲ್ಲೆಲ್ಲಾ ಶ್ರೇಷ್ಠವಾದ ನಾಡಿಗೆ, ಹಾಲೂ ಜೇನೂ ಹರಿಯುವ ಆ ವಾಗ್ದತ್ತನಾಡಿಗೆ ನಿಮ್ಮನ್ನು ಸೇರಿಸೆನು’ ಎಂದು ಮರುಭೂಮಿಯಲ್ಲಿ ಅವರಿಗೆ ಪ್ರಮಾಣಮಾಡಿ ಹೇಳಿದೆ.
- Verse 16: ಏಕೆಂದರೆ, ಅವರ ಹೃದಯ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ಆಜ್ಞಾವಿಧಿಗಳನ್ನು ಅವರು ಅನುಸರಿಸದೆ ಧಿಕ್ಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು.
- Verse 17: “ಆದರೂ ನಾನು ಅವರನ್ನು ನಾಶಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಮರುಭೂಮಿಯಲ್ಲಿ ನಿರ್ಮೂಲಮಾಡಲಿಲ್ಲ.
- Verse 18: ಆಮೇಲೆ ನಾನು ಅವರ ಸಂತಾನದವರಿಗೆ - ‘ನೀವು ನಿಮ್ಮ ಪಿತೃಗಳ ಕಟ್ಟಳೆಗಳನ್ನು ಅನುಸರಿಸದೆ ಅವರ ವಿಧಿಗಳನ್ನು ಕೈಗೊಳ್ಳದೆ ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿ;
- Verse 19: ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಗೊಂಡು ನಡೆಯಿರಿ.
- Verse 20: ನಾನು ನೇಮಿಸಿದ ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನೀವು ತಿಳಿದುಕೊಳ್ಳುವಂತೆ ಅವು ನಿಮಗೂ ನನಗೂ ಗುರುತಾಗಿರುವುವು’ ಎಂದು ಹೇಳಿದೆ.
- Verse 21: “ಆದರೆ ಆ ಸಂತಾನದವರು ನನ್ನನ್ನು ಪ್ರತಿಭಟಿಸಿದರು; ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ; ಕೈಗೊಂಡವರಿಗೆ ಜೀವಾಧಾರವಾದ ನನ್ನ ವಿಧಿಗಳನ್ನು ಅನುಸರಿಸಿ ನಡೆಯಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿದರು. ಆದುದರಿಂದ ನಾನು ‘ಮರುಭೂಮಿಯಲ್ಲೇ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು’ ಎಂದುಕೊಂಡೆ.
- Verse 22: ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಬಿಡುಗಡೆ ಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು, ಕೈಯನ್ನು ಹಿಂದಕ್ಕೆ ತೆಗೆದುಕೊಂಡೆ.
- Verse 23: ಆಮೇಲೆ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳದೆ, ನನ್ನ ವಿಧಿಗಳನ್ನು ನಿರಾಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿ ತಮ್ಮ ಪಿತೃಗಳ ವಿಗ್ರಹಗಳಲ್ಲೇ ಆಸಕ್ತರಾದರು.
- Verse 24: ಆದ್ದರಿಂದ ನಾನು ‘ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವೆನು’ ಎಂದು ಮರುಭೂಮಿಯಲ್ಲಿ ಪ್ರಮಾಣಮಾಡಿ ಹೇಳಿದೆ.
- Verse 25: “ಇದಲ್ಲದೆ, ‘ನಾನೇ ಸರ್ವೇಶ್ವರ’ ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆ.
- Verse 26: ಅವರು ತಮ್ಮ ಚೊಚ್ಚಲುಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು.
- Verse 27: “ಹೀಗಿರಲು, ನರಪುತ್ರನೇ, ಇಸ್ರಯೇಲ್ ವಂಶದವರಿಗೆ ಈ ಮಾತನ್ನು ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳು ಪುನಃ ದ್ರೋಹಮಾಡಿ ನನ್ನನ್ನು ದೂಷಿಸಿದ್ದಾರೆ.
- Verse 28: ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ನಾಡಿಗೆ ಅವರನ್ನು ಸೇರಿಸಿದ ಮೇಲೆ, ಅವರು ಎತ್ತರವಾದ ಎಲ್ಲ ಗುಡ್ಡಗಳನ್ನೂ ಸೊಂಪಾಗಿ ಬೆಳೆದಿರುವ ಎಲ್ಲ ಮರಗಳನ್ನೂ ನೋಡಿ, ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಒಪ್ಪಿಸುತ್ತಿದ್ದರು.
- Verse 29: ನೀವು ಹೋಗುವ ‘ಬಾ - ಮಾ’ ಎಂಬ ಪೂಜಾಸ್ಥಳ ಎಂಥ ಸ್ಥಳ? (ಇಂದಿನವರೆಗೂ ಇಂಥಾ ಪೂಜಾಸ್ಥಳಗಳಿಗೆ ಬಾಮಾ ಎಂದೇ ಹೆಸರು).
- Verse 30: “ಇಸ್ರಯೇಲ್ ವಂಶದವರಿಗೆ ಹೀಗೆ ಹೇಳು: - ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳಂತೆ ನಿಮ್ಮನ್ನು ನೀವೇ ಅಪವಿತ್ರಮಾಡಿಕೊಳ್ಳುತ್ತೀರೋ? ಅವರು ಪೂಜಿಸುತ್ತಿದ್ದ ಅಸಹ್ಯವಸ್ತುಗಳನ್ನು ನೀವೂ ಪೂಜಿಸಿ ದೇವದ್ರೋಹಮಾಡುತ್ತೀರೋ?
- Verse 31: ನೀವು ಬಲಿಯರ್ಪಿಸುತ್ತಾ, ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಂಡಿರಿ. ಹೀಗಿರುವಾಗ ಇಸ್ರಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೇ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಸರ್ವೇಶ್ವರನಾದ ದೇವರ ನುಡಿ.
- Verse 32: ‘ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರ, ಕಲ್ಲುಗಳ ವಿಗ್ರಹಗಳನ್ನು ಪೂಜಿಸುವೆವು’ ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆ ಎಷ್ಟು ಮಾತ್ರವೂ ನೆರವೇರದು.
- Verse 33: “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ, ನಿಮ್ಮ ಮೇಲೆ ದೊರೆತನಮಾಡುವೆನು;
- Verse 34: ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಹರಿಸುತ್ತಾ, ನಿಮ್ಮನ್ನು ಜನಾಂಗಗಳಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಒಂದುಗೂಡಿಸಿ,
- Verse 35: ಜನಾಂಗಗಳ ಮಧ್ಯೆ ಮರುಭೂಮಿಗೆ ಕರೆತಂದು ಅಲ್ಲೇ ಮುಖಾಮುಖಿಯಾಗಿ ನಿಮ್ಮೊಂದಿಗೆ ವಾದಿಸುವೆನು.
- Verse 36: ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪಿತೃಗಳ ಸಂಗಡ ವಾದಿಸಿದಂತೆ ನಿಮ್ಮ ಸಂಗಡವೂ ವಾದಿಸುವೆನು; ಇದು ಸರ್ವೇಶ್ವರನಾದ ದೇವರ ನುಡಿ.
- Verse 37: “ನಾನು ನಿಮ್ಮನ್ನು ಲೆಕ್ಕಿಸುವಂತೆ, ಕೋಲಿನ ಕೆಳಗೆ ಹೋಗುವಂತೆಮಾಡಿ, ಒಡಂಬಡಿಕೆಯ ಕಟ್ಟಿನಿಂದ ಬಂಧಿಸುವೆನು,
- Verse 38: ನನಗೆ ವಿಮುಖರಾದ ದ್ರೋಹಿಗಳನ್ನು ನಿಮ್ಮಿಂದ ದೂರಕ್ಕೆ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಬಿಡುಗಡೆ ಮಾಡಿದರೂ ಅವರು ಇಸ್ರಯೇಲ್ ನಾಡಿಗೆ ಸೇರುವುದೇ ಇಲ್ಲ; ಆಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
- Verse 39: “ಇಸ್ರಯೇಲ್ ವಂಶದವರೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಹೋಗಿರಿ, ನಿಮ್ಮ ವಿಗ್ರಹಗಳನ್ನು ಪೂಜಿಸಿರಿ; ಮುಂದಕ್ಕಾದರು ನನ್ನ ಮಾತನ್ನು ಕೇಳಿಯೇ ಕೇಳುವಿರಿ; ಇನ್ನು ಮೇಲಾದರು ನನ್ನ ಪರಿಶುದ್ಧನಾಮವನ್ನು ನಿಮ್ಮ ಬಲಿಗಳಿಂದ ಹಾಗೂ ವಿಗ್ರಹಗಳಿಂದ ನೀವು ಅಪಕೀರ್ತಿಗೆ ಒಳಪಡಿಸಲಾರಿರಿ.
- Verse 40: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾಡಿನಲ್ಲಿ ಇಸ್ರಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧ ಬೆಟ್ಟದಲ್ಲೇ, ಇಸ್ರಯೇಲಿನ ಪರ್ವತಾಗ್ರದಲ್ಲೇ, ನನ್ನನ್ನು ಪೂಜಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ ಉತ್ತಮ ನೈವೇದ್ಯಗಳನ್ನೂ ಮೀಸಲಾದುದೆಲ್ಲವನ್ನೂ ಅಂಗೀಕರಿಸುವೆನು.
- Verse 41: ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ತಂದು ಸೇರಿಸುವಾಗ, ನಿಮ್ಮ ಸುಗಂಧಹೋಮವನ್ನು ಆಘ್ರಾಣಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ, ನಿಮ್ಮ ರಕ್ಷಣೆಯ ಮೂಲಕ, ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
- Verse 42: ನಾನು ಪ್ರಮಾಣಮಾಡಿ ನಿಮ್ಮ ಪಿತೃಗಳಿಗೆ ಯಾವ ನಾಡನ್ನು ಕೊಟ್ಟೆನೋ ಆ ಇಸ್ರಾಯೇಲ್ ನಾಡಿಗೆ ನಿಮ್ಮನ್ನು ಬರಮಾಡುವಾಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
- Verse 43: ನಿಮ್ಮನ್ನು ಅಪವಿತ್ರಗೊಳಿಸಿರುವ ನಿಮ್ಮ ನಡತೆಯನ್ನೂ ನಿಮ್ಮ ಎಲ್ಲಾ ಕಾರ್ಯಗಳನ್ನೂ ಅಲ್ಲಿ ನೆನಪಿಗೆ ತಂದುಕೊಂಡು, ನೀವು ನಡೆಸಿರುವ ಸಕಲ ದುಷ್ಕೃತ್ಯಗಳ ನಿಮಿತ್ತ, ನಿಮ್ಮನ್ನು ನೋಡಿ ನೀವೇ ಅಸಹ್ಯಪಡುವಿರಿ.
- Verse 44: ಇಸ್ರಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಸರ್ವೇಶ್ವರ ಎಂದು ನಿಮಗೆ ತಿಳಿಯುವುದು; ಇದು ಸರ್ವೇಶ್ವರನಾದ ದೇವರ ನುಡಿ.”
- Verse 45: ಆಮೇಲೆ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -
- Verse 46: “ನರಪುತ್ರನೇ, ನೀನು ದಕ್ಷಿಣಾಭಿಮುಖನಾಗಿ, ಆ ಕಡೆಗೆ ಮಾತಾಡುತ್ತಾ ದಕ್ಷಿಣ ಸೀಮೆಯ ವನವನ್ನು ಉದ್ದೇಶಿಸಿ ಪ್ರಸ್ತಾಪವನ್ನೆತ್ತಿ,
- Verse 47: ಆ ವನಕ್ಕೆ ಹೀಗೆ ಪ್ರವಾದಿಸು: ‘ಸರ್ವೇಶ್ವರನ ಮಾತನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು. ಅದು ನಿನ್ನಲ್ಲಿನ ಎಲ್ಲಾ ಹಸಿರುಮರಗಳನ್ನೂ ಒಣಮರಗಳನ್ನೂ ಕಬಳಿಸಿಬಿಡುವುದು; ಧಗಧಗಿಸುವ ಜ್ವಾಲೆ ಆರದೆ, ತೆಂಕಲಿಂದ ಬಡಗಲವರೆಗೆ ಎಲ್ಲರ ಮುಖಗಳನ್ನು ಕುಂದಿಸುವುದು.
- Verse 48: ಅದನ್ನು ಹೊತ್ತಿಸಿದವನು ಸರ್ವೇಶ್ವರನಾದ ನಾನೇ ಎಂದು ಸಕಲ ನರಪ್ರಾಣಿಗಳಿಗೆ ಆಗ ಗೋಚರವಾಗುವುದು; ಅದು ಆರಿಹೋಗದು’.
- Verse 49: ಆಗ ನಾನು - “ಅಯ್ಯೋ, ಸರ್ವೇಶ್ವರನಾದ ದೇವರೇ, ‘ಅವನು ಒಗಟುಗಾರನಲ್ಲವೆ?’ ಎಂದು ಈ ಜನರು ನನ್ನ ಬಗ್ಗೆ ಆಡಿಕೊಳ್ಳುತ್ತಾರೆ” ಎಂದು ಅರಿಕೆಮಾಡಿದೆನು.